ADVERTISEMENT

ರಾಮನಗರ | ಪ್ರೀತಿಸಿ ಮದುವೆಯಾಗಿದ್ದ ದಂಪತಿ: ಅತ್ತೆ ಎದುರಿಗೇ ಪತ್ನಿ ಕೊಂದ ಅಳಿಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 4:39 IST
Last Updated 20 ಫೆಬ್ರುವರಿ 2026, 4:39 IST
ಸೂಫಿಯಾ, ಕೊಲೆಯಾದ ಪತ್ನಿ
ಸೂಫಿಯಾ, ಕೊಲೆಯಾದ ಪತ್ನಿ   

ರಾಮನಗರ: ನಾಲ್ಕು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಶೀಲ ಶಂಕಿಸಿದ ಯಾರಬ್‌ ನಗರದ ವ್ಯಕ್ತಿಯೊಬ್ಬ ಬುಧವಾರ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.    

ಸೂಫಿಯಾ ಬಾನು (21) ಕೊಲೆಯಾದ ಮಹಿಳೆ. ಆರೋಪಿ ಪತಿ ಸಲ್ಮಾನ್‌ (22) ಎಂಬಾತನನ್ನು ರಾಮನಗರ ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಾರಬ್‌ ನಗರದ ನಿವಾಸಿಗಳಾದ ಇಬ್ಬರೂ ಫಿಲೇಚರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ನಂತರ ಎರಡೂ ಕುಟುಂಬದವರು ನಾಲ್ಕು ತಿಂಗಳ ಹಿಂದೆ ಇಬ್ಬರಿಗೂ ಮದುವೆ ಮಾಡಿದ್ದರು. ಸೂಫಿಯಾ ತಾಯಿ, ಮಗಳು ಮತ್ತು ಅಳಿಯನನ್ನು  ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದರು.

ADVERTISEMENT

ಮದುವೆ ಬಳಿಕವೂ ದಂಪತಿ ಒಂದೇ ಫಿಲೇಚರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಚನ್ನಾಗಿಯೇ ಪತ್ನಿಯನ್ನು ನೋಡಿಕೊಳ್ಳುತ್ತಿದ್ದ ಸಲ್ಮಾನ್, ನಂತರ ಸೂಫಿಯಾ ಶೀಲ ಶಂಕೆ ವ್ಯಕ್ತಪಡಿಸಿ ಆಗಾಗ ಜಗಳವಾಡುತ್ತಿದ್ದ. ಆಗ ತಾಯಿ ಸೇರಿದಂತೆ ಹಿರಿಯರು ಸಮಾಧಾನಪಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ಎಂದಿನಂತೆ ಬುಧವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ದಂಪತಿ ಕೆಲ ಹೊತ್ತಿನಲ್ಲೇ ಜಗಳವಾಡತೊಡಗಿದರು. ಈ ವೇಳೆ ತಾಯಿ ಮನೆಯಾಚೆ ಇದ್ದರು. ಕೆಲ ಹೊತ್ತಿನ ನಂತರ ಸೂಫಿಯಾ, ‘ಅಮ್ಮಾ ಚಾಕುವಿನಿಂದ ಚುಚ್ಚುತ್ತಿದ್ದಾನೆ’ ಎಂದು ಕೂಗಿಕೊಂಡರು. ತಕ್ಷಣ ತಾಯಿ ಒಳಕ್ಕೆ ಹೋಗಿ ನೋಡಿದಾಗ ಅವರ ಎದುರಿಗೇ ಸಲ್ಮಾನ್ ಪತ್ನಿಯ ಕುತ್ತಿಗೆ ಹಾಗೂ ಹೊಟ್ಟೆಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.

ಕೂಡಲೇ ತಾಯಿ ಸ್ಥಳೀಯರ ನೆರವಿನಿಂದ ಸೂಫಿಯಾ ಅವರನ್ನು ರಾಮನಗರದ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಸೂಫಿಯಾ ಕೊನೆಯುಸಿರೆಳೆದಿದ್ದರು. ಘಟನೆ ಬಳಿಕ, ಸಲ್ಮಾನ್‌ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಹೆಚ್ಚಿನ ಜನರು ಜಮಾಯಿಸಿದರು. ಪ್ರೀತಿಸಿ ಮದುವೆಯಾಗಿದ್ದ ಅಮಾಯಕ ಹೆಣ್ಣು ಮಗಳನ್ನು ಕೊಲೆ ಮಾಡಿರುವ ಸಲ್ಮಾನ್‌ಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಗುರುವಾರ ಅಂತ್ಯಕ್ರಿಯೆ ಜರುಗಿತು.

ಸಲ್ಮಾನ್ ಆರೋಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.