ADVERTISEMENT

ರಾಮನಗರವೇ ನನ್ನ ಕರ್ಮಭೂಮಿ ಎಂದ ನಿಖಿಲ್‌ ಕುಮಾರಸ್ವಾಮಿ

‘ನಿಖಿಲ್ ಪರ್ವ’ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 2:51 IST
Last Updated 7 ಫೆಬ್ರುವರಿ 2023, 2:51 IST
ನಿಖಿಲ್‌ ಕುಮಾರಸ್ವಾಮಿ
ನಿಖಿಲ್‌ ಕುಮಾರಸ್ವಾಮಿ    

ಕನಕಪುರ: ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಪಕ್ಷದ ಯುವ ಘಟಕದ ವತಿಯಿಂದ ಆಯೋಜಿಸಲಾದ ನಿಖಿಲ್ ಪರ್ವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ‘ನನ್ನ ತಾತ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ತಂದೆ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ರಾಜಕೀಯವಾಗಿ ಜನ್ಮ ನೀಡಿದ ರಾಮನಗರ ನನ್ನ ಕರ್ಮ ಭೂಮಿ’ ಎಂದು ಹೇಳಿದರು.

ನಿಖಿಲ್ ಕುಮಾರಸ್ವಾಮಿ ಅವರಿಗೆ ಹೆಲಿಕಾಪ್ಟರ್ ಮೂಲಕ ಬೃಹತ್ ಸೇಬು ಹಣ್ಣಿನ ಹಾರ ಹಾಕಿ, ಅದ್ದೂರಿಯಾಗಿ ಸ್ವಾಗತಿಸಲಾಯಿತು

ರಾಮನಗರ ಜಿಲ್ಲೆಯ ಜನತೆ ನಮ್ಮ ತಂದೆ ಮತ್ತು ತಾತನ ಮೇಲೆ ಅಪಾರ ಪ್ರೀತಿ ಮತ್ತು ಗೌರವ ಇಟ್ಟಿದ್ದಾರೆ. ಜಿಲ್ಲೆಯ ಜನತೆಯ ಋಣ ಅವರ ಮೇಲಿದೆ. ನಮ್ಮ ಪಕ್ಷದ ಸಿದ್ಧಾಂತ ಮತ್ತು ಕುಮಾರಸ್ವಾಮಿ ಅವರ ಆಡಳಿತವನ್ನು ಮೆಚ್ಚಿ, ನೂರಾರು ಯುವಕರು ಜೆಡಿಎಸ್ ಸೇರುತ್ತಿದ್ದು, ಅವರನ್ನು ಪಕ್ಷ ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಲಿದೆ ಎಂದರು.

ADVERTISEMENT

ಹಾರೋಹಳ್ಳಿ ಪಟ್ಟಣದ ಆನೇಕಲ್ ರಸ್ತೆ ವಿಚಾರವಾಗಿ ಹಲವರು ಅಪಪ್ರಚಾರ ಮಾಡುತ್ತಿದ್ದಾರೆ. ಕಾವೇರಿ ನೀರು ಸರಬರಾಜು ಮಾಡುವ ಕಾರ್ಯ ಪ್ರಗತಿಯಿಂದ ಸಾಗಿದ್ದು, ಚುನಾವಣೆ ಮುಗಿಯುವಷ್ಟರಲ್ಲಿ ಆನೇಕಲ್ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.

ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹಾರೋಹಳ್ಳಿ ತಾಲ್ಲೂಕಿನ ಗಡಿಭಾಗದಿಂದ ನಿಖಿಲ್‌ ಪರ್ವ ಕಾರ್ಯಕ್ರಮದ ಅಂಗವಾಗಿ ನೂರಾರು ಯುವಕರು ಬೈಕ್‌ ರ‍್ಯಾಲಿ ನಡೆಸಿದರು. ಈ ವೇಳೆ ಯುವ ಮುಖಂಡ ಗಬ್ಬಾಡಿ ಪ್ರವೀಣ್ ಗೌಡ ನೇತೃತ್ವದಲ್ಲಿ ಹೆಲಿಕಾಪ್ಟರ್‌ನಲ್ಲಿ ನಿಖಿಲ್‌ ಮತ್ತು ಬೈಕ್‌ ರ‍್ಯಾಲಿ ನಡೆಸುತ್ತಿದ್ದವರ ಮೇಲೆ ಸೇಬು ಹಣ್ಣಿನಿಂದ ಮಾಡಲಾದ ಬೃಹತ್ ಹಾರವನ್ನು ಹಾಕಲಾಯಿತು.

ಗಬ್ಬಾಡಿ ಪ್ರವೀಣ್‌ಗೌಡ ಮಾತನಾಡಿ ನಿಖಿಲ್‌ ಪರ್ವವನ್ನು ರಾಜ್ಯದಾದ್ಯಂತ ನಡೆಸಲಾಗುತ್ತದೆ ಎಂದು ಹೇಳಿದರು.

ಜೆಡಿಎಸ್‌ನ ಡಿ.ಎಸ್. ಭುಜಂಗಯ್ಯ, ಸುರೇಶ್‌, ರಾಮು, ಲಕ್ಷ್ಮಣ್‌, ಗಬ್ಬಾಡಿ ಮಲ್ಲಪ್ಪ, ಪುರುಷೋತ್ತಮ್, ಸೋಮಶೇಖರ್, ಅನಿಲ್, ಮಹದೇವ, ಮೇಡಮಾರನಹಳ್ಳಿ ಕುಮಾರ್‌, ಜೆಸಿಬಿ ರಮೇಶ್‌, ಕಗ್ಗಲಹಳ್ಳಿ ಡೇರಿ ಅಧ್ಯಕ್ಷ ಮಹೇಂದ್ರ ಕುಮಾರ್‌, ಕೃಷ್ಣಮೂರ್ತಿ, ಪುಟ್ಟಸ್ವಾಮಿ, ಶ್ಯಾಮ್ ಸುಂದರ್, ಕೋಟೆ ರಾಜು, ಚೇತನ್ ಕುಮರ್, ಪ್ರಶಾಂತ್, ಸಾಗರ್, ಆಂಜಿ, ಶಿವರುದ್ರ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.