ರಾಮನಗರ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ನ್ಯಾಯಾಲಯಗಳಲ್ಲಿ ನಡೆದ ಲೋಕ ಅದಾಲತ್‌ನಲ್ಲಿ 1,31,994 ಪ್ರಕರಣಗಳನ್ನು ಇತ್ಯರ್ಥಪಡಿಸಿ, ಸುಮಾರು ₹198 ಕೋಟಿ ವಸೂಲಿ ಮಾಡಲಾಗಿದೆ.
ರಾಜಿ ಸಂಧಾನದ ಮೂಲಕ ಇತ್ಯರ್ಥವಾಗಬಹುದಾದ ಪ್ರಕರಣಗಳನ್ನು ಅದಾಲತ್‌ನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಯಿತು. ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ನ್ಯಾಯಾಲಯಗಳು ಸೇರಿದಂತೆ ಒಟ್ಟು 20 ಪೀಠಗಳಲ್ಲಿ ಅದಾಲತ್ ಆಯೋಜಿಸಲಾಗಿತ್ತು.
ಜಿಲ್ಲೆಯಾದ್ಯಂತ ವಿಚಾರಣೆಗೆ ಬಾಕಿ ಇರುವ ಒಟ್ಟು 56,786 ಪ್ರಕರಣಗಳಲ್ಲಿ 3,906 ಪ್ರಕರಣಗಳು ಹಾಗೂ 1,28,088 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು 1,31,994 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. ಎಲ್ಲಾ ಪ್ರಕರಣಗಳಿಂದ ಒಟ್ಟು ₹198,99,09,368 ಮೊತ್ತ ವಸೂಲಿ ಮಾಡಲಾಯಿತು.
ಇತ್ಯರ್ಥಗೊಂಡ ಪ್ರಕರಣಗಳು: 49 ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣಗಳು, 133 ನೆಗೋಷಬಲ್ ಇನ್‌ಸ್ಟ್ರಮೆಂಟ್ ಕಾಯ್ದೆ ಪ್ರಕರಣಗಳು, 16 ಸಾಲ ವಸೂಲಾತಿ, 35 ಮೋಟಾರು ವಾಹನ ಅಪಘಾತ, 9 ಕಾರ್ಮಿಕ ವಿವಾದ, 27 ವಿದ್ಯುತ್ ಕಾಯ್ದೆ, 23 ಗಣಿ ಮತ್ತು ಭೂ ವಿಜ್ಞಾನ, 1 ವೈವಾಹಿಕ, 1 ಭೂ ಸ್ವಾಧೀನ, 61 ಆಸ್ತಿ ವಿಭಾಗ, 48 ನಿರ್ದಿಷ್ಟ ಪ್ರಕರಣಗಳು, 2 ಅಂತಿಮ ಡಿಕ್ರಿ ಕಾರ್ಯಾಚರಣೆ, 20 ಜಾರಿ ಪ್ರಕರಣ, 10 ಎಂವಿಸಿ ಎಕ್ಸಿಕ್ಯೂಷನ್, 92 ಎಲ್‌ಎಸಿ ಎಕ್ಸಿಕ್ಯೂಷನ್, 37 ಹಕ್ಕು ಘೋಷಣೆ, ಶಾಶ್ವತ ನಿರ್ಬಂಧಕಾಜ್ಞೆ ಹಾಗೂ ಇತರೆ, 161 ಜನನ ಹಾಗೂ ಮರಣ ಪ್ರಮಾಣಪತ್ರಕ್ಕೆ ಸಂಬಂಧಿಸಿದ್ದು, 3,138 ಲಘು ವ್ಯಾಜ್ಯ, 12 ಇತರ ಕ್ರಿಮಿನಲ್ ಪ್ರಕರಣ, 13 ಬ್ಯಾಂಕ್ ಮೊಕದ್ದಮೆ, 125 ಸಿಆರ್‌ಪಿಸಿ ಪ್ರಕರಣಕ್ಕೆ ಸಂಬಂಧಿಸಿದ 16 ಪ್ರಕರಣ, 2 ಡಿವಿ ಕಾಯ್ದೆ, 1,28,088 ಪೂರ್ವ ದಾವೆ (ಪ್ರೀ ಲಿಟಿಗೇಷನ್) ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ವಿ. ರೇಣುಕಾ ಅವರ ಮೇಲುಸ್ತುವಾರಿಯಲ್ಲಿ ಅದಾಲತ್ ಅನ್ನು ನಿರ್ವಹಿಸಲಾಯಿತು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತ ಪಿ.ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.