ADVERTISEMENT

ರಾಮನಗರ: ಹೊಸ ಸೇತುವೆ ನಿರ್ಮಾಣ ಯಾವಾಗ?

ಅತಿವೃಷ್ಟಿಯಿಂದ ನೆಲ ಕಚ್ಚಿದ ಸೇತುವೆಗಳು; ಗ್ರಾಮೀಣರಿಗೆ ತಪ್ಪದ ಪರದಾಟ

ಆರ್.ಜಿತೇಂದ್ರ
Published 19 ಸೆಪ್ಟೆಂಬರ್ 2022, 3:57 IST
Last Updated 19 ಸೆಪ್ಟೆಂಬರ್ 2022, 3:57 IST
ಕನಕಪುರ ತಾಲ್ಲೂಕಿನ ಮಾವತ್ತೂರು ಕೆರೆ ಕೋಡಿಗೆ ಅಡ್ಡಲಾಗಿ ಕಟ್ಟಿದ್ದ ಬೂದಗುಪ್ಪೆ ಕಿರು ಸೇತುವೆಯು ಮಳೆ ಪ್ರವಾಹದಿಂದ ಕೊಚ್ಚಿ ಹೋಗಿರುವುದು
ಕನಕಪುರ ತಾಲ್ಲೂಕಿನ ಮಾವತ್ತೂರು ಕೆರೆ ಕೋಡಿಗೆ ಅಡ್ಡಲಾಗಿ ಕಟ್ಟಿದ್ದ ಬೂದಗುಪ್ಪೆ ಕಿರು ಸೇತುವೆಯು ಮಳೆ ಪ್ರವಾಹದಿಂದ ಕೊಚ್ಚಿ ಹೋಗಿರುವುದು   

ರಾಮನಗರ: ಈ ಬಾರಿ ಮುಂಗಾರಿನಲ್ಲಿ ಅತಿವೃಷ್ಟಿಯಿಂದಾಗಿ ಜಿಲ್ಲೆಯಾದ್ಯಂತ ಅನೇಕ ಸೇತುವೆಗಳು ಕುಸಿತ ಕಂಡಿದ್ದು, ಗ್ರಾಮಗಳ ನಡುವಿನ ಸಂಪರ್ಕ ಸೇತುವೆಗಳು ಬಂದ್‌ ಆಗಿವೆ. ತಾತ್ಕಾಲಿಕ ದುರಸ್ತಿ ಹಾಗೂ ಹೊಸ ಸೇತುವೆ ನಿರ್ಮಾಣ ಕಾರ್ಯ ಇನ್ನಷ್ಟೇ ನಡೆಯಬೇಕಿದೆ.

ಜಿಲ್ಲೆಯಲ್ಲಿ ಕಣ್ವ, ಅರ್ಕಾವತಿ, ವೃಷಭಾವತಿ ಮೊದಲಾದ ನದಿಗಳು ಹರಿಯುತ್ತವೆ. ಇದರೊಟ್ಟಿಗೆ ಹೊಳೆಯ ರೀತಿಯಲ್ಲಿ ನಾಲ್ಕಾರು ಹಳ್ಳಗಳು ಮಳೆಗಾಲದಲ್ಲಿ ಉಕ್ಕಿ ಹರಿಯುತ್ತವೆ. ಆಗೆಲ್ಲ ಅಲ್ಲಲ್ಲಿ ಪ್ರವಾಹ ಪರಿಸ್ಥಿತಿ ಸಾಮಾನ್ಯವಾಗಿದೆ. ಆದರೆ ಈ ವರ್ಷ ಪರಿಸ್ಥಿತಿ ಭಿನ್ನವಾಗಿದ್ದು, ಈ ನದಿಗಳಲ್ಲಿ ಹಿಂದೆಂದಿಗಿಂತ ನೀರಿನ ಮಟ್ಟ ಹೆಚ್ಚಾಗಿ, ಅದರ ರಭಸಕ್ಕೆ ದೊಡ್ಡ ಸೇತುವೆಗಳೇ ನೀರು ಪಾಲಾಗಿವೆ.

ಎಲ್ಲೆಲ್ಲಿ ಹಾಳು: ಅರ್ಕಾವತಿ ನದಿ ಪ್ರವಾಹದಿಂದಾಗಿ ರಾಮನಗರ ಭಾಗದಲ್ಲಿ ಒಟ್ಟು ಮೂರು ಸೇತುವೆಗಳು ಮುರಿದಿವೆ. ಸುಗ್ಗನಹಳ್ಳಿ ಸೇತುವೆಯ ಅರ್ಧದಷ್ಟು ಭಾಗ ಕೊಚ್ಚಿ ಹೋಗಿದ್ದು, ಇದರಿಂದಾಗಿ ಈ ಭಾಗದ ನಡುವಿನ ಜನಸಂಪರ್ಕಕ್ಕೆ ಅಡ್ಡಿಯಾಗಿದೆ.

ADVERTISEMENT

ಸುಗ್ಗನಹಳ್ಳಿ ಸೇತುವೆಯನ್ನು 1985ರಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿತ್ತು. ಈ ಸೇತುವೆಯು ಸುಗ್ಗನಹಳ್ಳಿ ಮೂಲಕ ಕರಡಿದೊಡ್ಡಿ, ಕುಂಬಾರದೊಡ್ಡಿ, ಲಕ್ಕಸಂದ್ರ, ಚನ್ನಾಪುರದೊಡ್ಡಿ, ಧಾರಾಪುರ ಮೂಲಕ ಮಾಯಗಾನಹಳ್ಳಿ ಮತ್ತು ಬೆಂಗಳೂರು-ಮೈಸೂರು ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಇದರಿಂದಾಗಿ ಈ ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಸುಗ್ಗನಹಳ್ಳಿ ಗ್ರಾಮದ ಸೇತುವೆ ಬಳಿ ಈ ಹಿಂದೆ ಮರಳು ದಂಧೆ ನಡೆದಿದ್ದು, ಸಾಕಷ್ಟು ಆಳಕ್ಕೆ ಮಣ್ಣು ತೆಗೆಯಲಾಗಿದೆ. ಇದರಿಂದಾಗಿ ಸೇತುವೆಗೆ ಧಕ್ಕೆ ಆಗಿದೆ. ಹೀಗಾಗಿಯೇ ಸೇತುವೆ ಕುಸಿದಿದೆ ಎಂದು ಸ್ಥಳೀಯರು ಆರೋಪವಾಗಿದೆ.

ತಿಮ್ಮೇಗೌಡನದೊಡ್ಡಿ –ಹರಿಸಂದ್ರ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಭಾಗಶಃ ಹಾನಿಗೀಡಾಗಿದೆ. ನಿರಂತರ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಇದರ ರಭಸಕ್ಕೆ ಸೇತುವೆಯ ತಳಭಾಗ ಈಗಾಗಲೇ ಬಿರುಕು ಬಿಟ್ಟಿದೆ. 20 ವರ್ಷಗಳ ಹಿಂದೆ ಈ ಸೇತುವೆ ಕಟ್ಟಲಾಗಿತ್ತು.

ಚನ್ನಪಟ್ಟಣ ತಾಲ್ಲೂಕಿನ ಕೊಂಡಾಪುರ–ಬಾಣಗಹಳ್ಳಿ ಸಂಪರ್ಕ ಸೇತುವೆ ನಿರ್ಮಾಣವಾದ ಒಂದು ವರ್ಷದಲ್ಲೇ ಕುಸಿದು ಸುದ್ದಿಯಾಗಿತ್ತು. ಇದರಿಂದಾಗಿ ಈ ಎರಡೂ ಹಳ್ಳಿಗಳಜನರು ಹತ್ತಾರು ಕಿ.ಮೀ. ಸುತ್ತಿಕೊಂಡು ತಲುಪಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಸೇತುವೆಯ ಹುಚ್ಚಯ್ಯನದೊಡ್ಡಿ ಗ್ರಾಮದ ಮೂಲಕ ವೈ.ಟಿ. ಹಳ್ಳಿ ಹಾಗೂ ಕೋಡಂಬಹಳ್ಳಿ ಭಾಗಕ್ಕೆ ಸಂಪರ್ಕ ಕಲ್ಪಿಸುತ್ತಿದ್ದು, ಪ್ರತಿನಿತ್ಯ ಸಾವಿರಾರು ಮಂದಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದರು.

₹36 ಲಕ್ಷ ವೆಚ್ಚದ ಕಾಮಗಾರಿ ಇದಾಗಿದ್ದು, ನೀರಿನ ಹರಿವನ್ನು ಸರಿಯಾಗಿ ಪರಿಗಣಿಸದೆ ಬೇಕಾಬಿಟ್ಟಿ ಸೇತುವೆಯನ್ನು ನಿರ್ಮಿಸಿದ ಕಾರಣಕ್ಕೆ ಇಡೀ ಸೇತುವೆಯೇ ನೀರು ಪಾಲಾಗಿದೆ. ಈ ಸಂಬಂಧ ಇಲಾಖೆ ತನಿಖೆಗೆ ಜಿಲ್ಲಾ ಉಸ್ತುವಾರಿ ಸಚಿವರು ಆದೇಶಿಸಿದ್ದು, ಇನ್ನಷ್ಟೇ ಕ್ರಮ ಜರುಗಿಸಬೇಕಿದೆ.

ಇದಲ್ಲದೆ ಕನ್ನಮಂಗಲ ಬಳಿ ಕಣ್ವ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೂಡ ಮುರಿದು ಬಿದ್ದಿದೆ. ಸುಳ್ಳೇರಿ ಬಳಿ ಸಣ್ಣ ಪ್ರಮಾಣದ ಸೇತುವೆ ಹಾನಿಗೀಡಾಗಿದೆ.

ಕಳೆದ ವರ್ಷವೂ ಹಾನಿ: ಕಳೆದ ವರ್ಷವೂ ಮಳೆಯಿಂದಾಗಿ ಹಲವು ಸೇತುವೆಗಳು ಕುಸಿತ ಕಂಡಿದ್ದವು. ಅವುಗಳಲ್ಲಿ ಕೆಲವೆಡೆ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿದ್ದು ಬಿಟ್ಟರೆ ಹೆಚ್ಚಿನ ಕ್ರಮ ಆಗಿಲ್ಲ.

ಬಿಡದಿ ಹೋಬಳಿಯ ಭದ್ರಯ್ಯ ಕಾಲೊನಿ ಬಳಿ ಮಳೆಗೆ ಇಡೀ ಸೇತುವೆಯೇ ಕೊಚ್ಚಿ ಹೋಗಿತ್ತು. ಬುಡಗಯ್ಯನದೊಡ್ಡಿ ಬಳಿ ಅರ್ಕಾವತಿ ನದಿಗೆ ಅಡ್ಡಲಾಗಿ ಇದ್ದ ಹಳೆ ಸೇತುವೆ ನದಿಯಲ್ಲಿ ತೇಲಿ ಹೋಗಿತ್ತು. ರಾಮನಗರ ತಾಲ್ಲೂಕಿನ ಮೆಳೇಹಳ್ಳಿ ಹಾಗೂ ಜೋಗಿದೊಡ್ಡಿ ಬಳಿಯ ಸೇತುವೆಗಳು ಕಣ್ವ ಪ್ರವಾಹಕ್ಕೆ ಸಿಕ್ಕು ಹಾನಿಗೀಡಾಗಿದ್ದವು.

₹18 ಲಕ್ಷ ವೆಚ್ಚದಲ್ಲಿ ಮೆಳೇಹಳ್ಳಿ ಸೇತುವೆ ಹಾಗೂ ₹12 ಲಕ್ಷ ವೆಚ್ಚದಲ್ಲಿ ಜೋಗಿದೊಡ್ಡಿ ಸಂಪರ್ಕ ಸೇತುವೆಗಳನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಮೆಳೇಹಳ್ಳಿ-ತಿಮ್ಮಸಂದ್ರ ಸಂಪರ್ಕದ ಹೊಸ ಸೇತುವೆಗೆ ₹3.60 ಕೋಟಿ ಹಾಗೂ ಜೋಗಿದೊಡ್ಡಿ ಸೇತುವೆ ನಿರ್ಮಾಣಕ್ಕೆ ₹2.75 ಕೋಟಿ ಅನುದಾನ ಕೋರಿದ್ದು, ಕಾಮಗಾರಿ ಮಾತ್ರ ಇನ್ನೂ ಆರಂಭ ಆಗಿಲ್ಲ.

ಶತಮಾನದ ಸೇತುವೆಗೆ ಬೇಕು ಕಾಯಕಲ್ಪ

ರಾಮನಗರ ಪಟ್ಟಣವನ್ನು ವಿಭಜಿಸಿ ಅರ್ಕಾವತಿ ಹರಿಯುತ್ತದೆ. ಈ ನದಿಗೆ ಅಡ್ಡಲಾಗಿ ರಾಮನಗರದ ಹಳೇ ಬಸ್‌ ನಿಲ್ದಾಣ ವೃತ್ತದ ಸಮೀಪ ನಿರ್ಮಿಸಲಾದ ಹಳೆ ಸೇತುವೆಯು ಬಹುತೇಕ ಶಿಥಿಲಾವಸ್ಥೆ ತಲುಪಿದೆ. ಕೆಲವು ವಾರದ ಹಿಂದಷ್ಟೇ ಅರ್ಕಾವತಿ ನೀರು
ಸೇತುವೆಯ ಮುಕ್ಕಾಲು ಮಟ್ಟಕ್ಕೆ ಹರಿದು ಆತಂಕ ಸೃಷ್ಟಿಸಿತ್ತು. ಒಂದು ವೇಳೆ ಇದಕ್ಕೆ ಏನಾದರೂ ಹಾನಿಯಾದಲ್ಲಿ ಇಡೀ ಪಟ್ಟಣದ ಸಂಪರ್ಕ ವ್ಯವಸ್ಥೆಯೇ ಕುಸಿಯಲಿದೆ.

ನಗರ ಹಾಗೂ ಐಜೂರು ಭಾಗಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ನಿರ್ಮಾಣವಾದ ಈ ಅರ್ಕಾವತಿ ಸೇತುವೆಗೆ ಸುಮಾರು ಎರಡು ಶತಮಾನಗಳ ಇತಿಹಾಸ ಇರುವುದಾಗಿ ಸ್ಥಳೀಯರು ಹೇಳುತ್ತಾರೆ. ಕೆಲವು ದಶಕಗಳವರೆಗೂ ಇದೇ ಸೇತುವೆಯ ಮೇಲೆ ಬೆಂಗಳೂರು–ಮೈಸೂರು ನಡುವೆ ಓಡಾಡುವ ಬಸ್‌ಗಳು ಸಹ ಸಂಚರಿಸುತ್ತಿದ್ದವು. ಆದರೆ ನಂತರದಲ್ಲಿ ಹೆದ್ದಾರಿ ಮಾರ್ಗ ಬದಲಾದ ಮೇಲೆ ಈ ಸೇತುವೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸೇತುವೆಯು ಅಲ್ಲಲ್ಲಿ ಬಿರುಕು ಬಿಟ್ಟಿದೆ.

ಅರ್ಕಾವತಿ ಹಳೆ ಸೇತುವೆಗೆ ಪರ್ಯಾಯವಾಗಿ ಕೈಗಾರಿಕಾ ಪ್ರದೇಶ ಭಾಗದಲ್ಲಿ ಮತ್ತೊಂದು ಸೇತುವೆ ನಿರ್ಮಾಣ ಆಗಿದೆಯಾದರೂ ಅದರ ಬಳಕೆ ಅಷ್ಟಕ್ಕಷ್ಟೇ. ಬಾಲಗೇರಿ ಸುತ್ತಮುತ್ತ ಇನ್ನೆರಡು ಸಣ್ಣ ಪ್ರಮಾಣದ ಸೇತುವೆಗಳು ಸಹ ನದಿಗೆ ಅಡ್ಡಲಾಗಿ ನಿರ್ಮಾಣ ಆಗಿದ್ದರೂ ಅಲ್ಲಿ ಜನರ ಓಡಾಟ ಅಷ್ಟಕ್ಕಷ್ಟೇ ಎಂಬಂತೆ ಇದೆ. ಹೀಗಾಗಿ ಹಳೇ ಸೇತುವೆ ಮೇಲಿನ ಸಂಚಾರ ದಟ್ಟಣೆ ಹೆಚ್ಚುತ್ತಲೇ ಇದೆ.

ಕನಕಪುರ: ಮೂರು ಸೇತುವೆಗೆ ಹಾನಿ

ಮಳೆ ಪ್ರವಾಹದಿಂದಾಗಿ ಕನಕಪುರದಲ್ಲಿ ಪ್ರಮುಖವಾಗಿ ಮೂರು ಸೇತುವೆಗಳಿಗೆ ಹಾನಿಯಾಗಿದೆ. ಬರಡನಹಳ್ಳಿ ಬಳಿ 2 ಹಾಗೂ ಮುಳ್ಳಳ್ಳಿ ಬಳಿ ಇಂದು ಸೇತುವೆ ಕುಸಿದಿತ್ತು. ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ದಾರಿ ಇದಾಗಿದ್ದು, ಇದರಿಂದಾಗಿ ವಾಹನಗಳ ಓಡಾಟಕ್ಕೂ ತೊಂದರೆ ಆಗಿತ್ತು.

ಈ ಪೈಕಿ ಸದ್ಯ ಮುಳ್ಳಳ್ಳಿ ಸೇತುವೆ ಬಳಿ ತಾತ್ಕಾಲಿಕ ಕಾಮಗಾರಿ ಕೈಗೊಂಡು ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಳಿದ ಎರಡು ಕಡೆ ಯಾವುದೇ ದುರಸ್ತಿ ಕಾಮಗಾರಿ ನಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.