ADVERTISEMENT

ಕೋವಿಡ್‌ ಲಸಿಕೆ ಕಾರ್ಯ ನಾಳೆಯಿಂದ; ಮೊದಲ ದಿನ 800 ಮಂದಿಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 15:35 IST
Last Updated 15 ಜನವರಿ 2021, 15:35 IST
ಜಿಲ್ಲೆಗೆ ಬಂದ ಕೋವಿಡ್ ಲಸಿಕೆಯನ್ನು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಶುಕ್ರವಾರ ಬರಮಾಡಿಕೊಂಡರು
ಜಿಲ್ಲೆಗೆ ಬಂದ ಕೋವಿಡ್ ಲಸಿಕೆಯನ್ನು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಶುಕ್ರವಾರ ಬರಮಾಡಿಕೊಂಡರು   

ರಾಮನಗರ: ಜಗತ್ತನ್ನೇ ಕಾಡಿದ ಕೋವಿಡ್‌ ವೈರಸ್‌ಗೆ ಪ್ರತಿರೋಧಕವಾಗಿ ಜನರಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಶನಿವಾರ ಜಿಲ್ಲೆಯಾದ್ಯಂತ ಚಾಲನೆ ದೊರೆಯಲಿದೆ.

ಮೊದಲ ಹಂತದಲ್ಲಿ ಆರೋಗ್ಯ ವಲಯದಲ್ಲಿ ಶ್ರಮಿಸುತ್ತಿರುವ 8405 ಮಂದಿಗೆ ಈ ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 8 ಕಡೆ ಲಸಿಕಾ ಕೇಂದ್ರವನ್ನು ತೆರೆಯಲಾಗಿದೆ. ಪ್ರತಿ ಕೇಂದ್ರದಲ್ಲಿ ತಲಾ 100 ಮಂದಿಗೆ ಲಸಿಕೆ ನೀಡಲಾಗುತ್ತದೆ. ಒಟ್ಟು 107 ಸೆಷನ್ ನಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊದಲ ದಿನದಂದು 800 ಕೊರೊನಾ ವಾರಿಯರ್‌ಗಳು ಈ ಲಸಿಕೆ ಪಡೆಯಲಿದ್ದಾರೆ.ಎಲ್ಲೆಲ್ಲಿ: ಜಿಲ್ಲಾಸ್ಪತ್ರೆ, ರಾಮಕೃಷ್ಣ ಆಸ್ಪತ್ರೆ, ದಯಾನಂದ ಸಾಗರ್ ಆಸ್ಪತ್ರೆ, ಚನ್ನಪಟ್ಟಣ ತಾಲ್ಲೂಕು ಆಸ್ಪತ್ರೆ, ಕನಕಪುರ ಮೆಟರ್ ನಿಟಿ ಆಸ್ಪತ್ರೆ, ಮಾಗಡಿ ತಾಲ್ಲೂಕು ಆಸ್ಪತ್ರೆ, ಇಗ್ಗಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕನಕಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಲಸಿಕೆ ಹಾಕಲು ಗುರುತಿಸಲಾಗಿದೆ. ಪ್ರತಿ ಕೇಂದ್ರಕ್ಕೆ 5 ವ್ಯಾಕ್ಸಿನೇಟರ್ ಗಳನ್ನು ನೇಮಕ ಮಾಡಲಾಗಿದೆ.

ಲಸಿಕೆಗೆ ಸ್ವಾಗತ: ಜಿಲ್ಲೆಗೆ ಶುಕ್ರವಾರ ಬೆಳಿಗ್ಗೆ ಬಂದ 5 ಸಾವಿರ ಕೋವಿಡ್ ಲಸಿಕೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಬರಮಾಡಿಕೊಂಡರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಆರ್.ಸಿ.ಎಚ್ ಅಧಿಕಾರಿ ಡಾ. ಪದ್ಮಾ ಉಪಸ್ಥಿತರಿದ್ದರು.

ADVERTISEMENT

ಹೀಗಿರಲಿದೆ ಪ್ರಕ್ರಿಯೆ

ಇಂಜೆಕ್ಷನ್‌ ರೂಪದಲ್ಲಿ ಲಸಿಕೆಯನ್ನು ನೀಡಲಾಗುವುದು. ಇಂಜೆಕ್ಷನ್ ತೆಗೆದುಕೊಳ್ಳಲು ತೆರಳುವ ವ್ಯಕ್ತಿಯನ್ನು ಮೊದಲಿಗೆ ನೋಂದಣಿ ಮಾಡಿಕೊಂಡು, ದೇಹದ ಉಷ್ಣಾಂಶ ಪರೀಕ್ಷೆ ತಪಾಸಣೆ ಮಾಡಲಾಗುವುದು. ನಂತರ ಸುಮಾರು 0.5 ಎಂ.ಎಲ್. ಅಷ್ಟು ಇಂಜೆಕ್ಷನ್ ನೀಡಲಾಗುವುದು. ಇದನ್ನು ನೀಡಿದ ಅರ್ಧ ಗಂಟೆತನಕ ಆ ವ್ಯಕ್ತಿ ಕೇಂದ್ರದಲ್ಲಿಯೇ ಇರಬೇಕು. ಆರೋಗ್ಯದಲ್ಲಿ ಏನಾದರೂ ಏರುಪೇರು ಕಂಡುಬಂದಲ್ಲಿ ಕೂಡಲೇ ಅಂತಹವರನ್ನು ಉಪಚರಿಸಲು ಕ್ರಮ ಕೈಗೊಳ್ಳಲಾಗುವುದು. 28 ದಿನಗಳ ತರುವಾಯ ಅದೇ ವ್ಯಕ್ತಿಗೆ ಮತ್ತೊಂದು ಸುತ್ತಿನ ಲಸಿಕೆ ನೀಡಲಾಗುವುದು.

ತಾಲ್ಲೂಕುವಾರು ಲಸಿಕೆ ಪಡೆಯುವವರ ಸಂಖ್ಯೆ

ತಾಲ್ಲೂಕು: ಸಂಖ್ಯೆ

ರಾಮನಗರ; 3161

ಚನ್ನಪಟ್ಟಣ; 1633

ಮಾಗಡಿ; 1601

ಕನಕಪುರ; 2010

***

ಶನಿವಾರದಿಂದ ಜಿಲ್ಲೆಯ 8 ಕೇಂದ್ರಗಳಲ್ಲಿ ಲಸಿಕೆ ಕಾರ್ಯ ಆರಂಭ ಆಗಲಿದೆ. ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ

-ಎಂ.ಎಸ್‌. ಅರ್ಚನಾ,ಜಿಲ್ಲಾಧಿಕಾರಿ, ರಾಮನಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.