ADVERTISEMENT

ರಾಮನಗರದಲ್ಲಿ ಸರಣಿ ಕಳ್ಳತನ: ಪ್ರಕರಣ ದಾಖಲು; ಬೆರಳಚ್ಚು ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:16 IST
Last Updated 14 ಡಿಸೆಂಬರ್ 2025, 6:16 IST
ರಾಮನಗರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ಅವರ ನೇತೃತ್ವದಲ್ಲಿ ಸರಣಿ ಕಳ್ಳತನಕ್ಕೆ ಒಳಗಾಗಿರುವ ಅಂಗಡಿಗಳ ಬಳಿಗೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದರು
ರಾಮನಗರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ಅವರ ನೇತೃತ್ವದಲ್ಲಿ ಸರಣಿ ಕಳ್ಳತನಕ್ಕೆ ಒಳಗಾಗಿರುವ ಅಂಗಡಿಗಳ ಬಳಿಗೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದರು   

ರಾಮನಗರ: ನಗರದ ಸರ್ಕಾರಿ ಬಸ್ ನಿಲ್ದಾಣದ ಎದುರಿನ ರಸ್ತೆಗಳಲ್ಲಿರುವ ಎಟಿಎಂ ಹಾಗೂ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಶುಕ್ರವಾರ ತಡರಾತ್ರಿ ಕಳ್ಳನೊಬ್ಬ ಸರಣಿ ಕಳ್ಳತನ ನಡೆಸಿದ್ದಾನೆ. 

ಸರ್ಕಾರಿ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದ ಕಡೆಗೆ ಸಾಗುವ ಮುಖ್ಯರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂ ಪ್ರವೇಶಿಸಿರುವ ಕಳ್ಳ ಎಟಿಎಂನಿಂದ ಹಣ ಕದಿಯಲು ವಿಫಲ ಯತ್ನ ನಡೆಸಿದ್ದಾನೆ. ನಂತರ ಅದೇ ರಸ್ತೆಯಲ್ಲಿದ್ದ ಸಿಕ್ಕ ಸಿಕ್ಕ ಬೇಕರಿ, ಸಲೂನ್, ಕಬಾಬ್ ಸೆಂಟರ್ ಹಾಗೂ ಜ್ಯೂಸ್ ಸೆಂಟರ್ ಬಾಗಿಲು ಮುರಿದು ಕಳ್ಳತನ ನಡೆಸಿದ್ದಾನೆ.

ಬೇಕರಿಯ ಗಲ್ಲಾಪೆಟ್ಟಿಗೆಯಲ್ಲಿದ್ದ ₹14 ಸಾವಿರ ನಗದು ದೋಚಿದ ನಂತರ ಕಂಪ್ಯೂಟರ್ ಸಿಸ್ಟಮ್ ಹಾಗೂ ಸಿಸಿಟಿವಿ ಕ್ಯಾಮೆರಾದ ಡಿವಿಆರ್  ಕೂಡ ಕದ್ದು ಪರಾರಿಯಾಗಿದ್ದಾನೆ.

ನಂತರ ಪಕ್ಕದಲ್ಲಿದ್ದ ಮನು ಕಬಾಬ್ ಸೆಂಟರ್‌ನಲ್ಲಿಯೂ ಕಳ್ಳತನಕ್ಕೆ ಯತ್ನಿಸಿದ್ದಾನೆ. ಬೀಗ ಮುರಿದು ಒಳಗೆ ಹೋಗಿರುವ ಕಳ್ಳನಿಗೆ ಅಲ್ಲೇನೂ ಸಿಕ್ಕಿಲ್ಲ. ನಂತರ ರಾಯಲ್ ಹೇರ್ ಸಲೂನ್ ಬೀಗ ಮುರಿದು ಒಳಹೊಕ್ಕಿರುವ ಕಳ್ಳ ಸಲೂನ್ ಗಲ್ಲಾಪೆಟ್ಟಿಗೆಯಲ್ಲಿದ್ದ ₹5 ಸಾವಿರ ನಗದು ಕದ್ದಿದ್ದಾನೆ. ಸಲೂನ್ ಬೀಗ ಮುರಿದು ಕಳ್ಳ ಒಳಗೆ ಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಂತರ ಬಿ.ಎಂ ರಸ್ತೆಯಲ್ಲಿರುವ ಕರ್ನಾಟಕ ಜ್ಯೂಸ್ ಸೆಂಟರ್ ಮತ್ತು ವೆಲ್‌ಕಮ್ ಜ್ಯೂಸ್ ಸೆಂಟರ್ ಬೀಗ ಮುರಿಯಲು ಯತ್ನಿಸಿದ್ದಾನೆ. ಅದು ಸಾಧ್ಯವಾಗಿಲ್ಲ.

ಸ್ಥಳಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ಹಾಗೂ ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.