
ರಾಮನಗರ: ಬೀದಿ ನಾಯಿಗಳ ಸರ್ವೆ ನಡೆಸುವ ಕುರಿತು ಸ್ಥಳೀಯ ಸಂಸ್ಥೆಗಳು ಶಾಲಾ– ಕಾಲೇಜುಗಳಿಗೆ ಹೊರಡಿಸಿರುವ ಆದೇಶಕ್ಕೆ ಜಿಲ್ಲಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಉಸ್ಮಾರ್ಡ್) ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರಿಗೆ ಮನವಿ ಸಲ್ಲಿಸಿದೆ.
ನಗರಸಭೆ ಕಚೇರಿಯಲ್ಲಿ ಶಶಿ ಅವರನ್ನು ಒಕ್ಕೂಟದ ಅಧ್ಯಕ್ಷ ಪ್ರದೀಪ್ ಹಾಗೂ ಪದಾಧಿಕಾರಿಗಳ ನಿಯೋಗ ಇತ್ತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಿತು. ಶೈಕ್ಷಣಿಕ ಸಂಸ್ಥೆಗಳು ತಮ್ಮ ಆವರಣದ ಒಳಗೆ ಮತ್ತು ಹೊರಗೂ ಇರುವ ಬೀದಿ ನಾಯಿಗಳ ಸಂಖ್ಯೆ ಪರಿಶೀಲಿಸಿ ವರದಿ ಮಾಡಲು ನಿರ್ದೇಶನ ನೀಡಲಾಗಿದೆ. ಸಂಬಂಧವಿಲ್ಲದ ಕೆಲಸವನ್ನು ಶಾಲಾ–ಕಾಲೇಜುಗಳ ಆಡಳಿತ ಮಂಡಳಿಗೆ ವಹಿಸಿರುವುದು ಸರಿಯ್ಲಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೋಧನೆ, ಅಭ್ಯಾಸ, ಗುಣಮಟ್ಟದ ಫಲಿತಾಂಶ ಒದಗಿಸುವ ಜೊತೆಗೆ ಕಾನೂನುಬದ್ಧವಾಗಿ ಶೈಕ್ಷಣಿಕ ಮಾನದಂಡಗಳನ್ನು ಪಾಲಿಸುವುದು ಶಾಲಾ– ಕಾಲೇಜುಗಳ ಕರ್ತವ್ಯ. ಆದರೆ, ಶಿಕ್ಷಣ ಸಂಸ್ಥೆಗಳಿಗೆಗೆ ಸಂಬಂಧವಿಲ್ಲದ ಕಾರ್ಯಗಳನ್ನು ಹೇರುವುದು ಸರಿಯಲ್ಲ. ಶಾಲೆಗಳು, ಆಸ್ಪತ್ರೆಗಳು ಮತ್ತು ಸಾರ್ವಜನಿಕ ಪ್ರದೇಶಗಳ ಬಳಿ ಬೀದಿ ನಾಯಿಗಳ ಸಂಖ್ಯೆಯ ಹೆಚ್ಚಳಕ್ಕೆ ಎಲ್ಲೆಂದರಲ್ಲಿ ಇರುವ ಕಸದ ರಾಶಿ ಕಾರಣ. ಇದಕ್ಕೆ ಸ್ಥಳೀಯ ಸಂಸ್ಥೆಗಳು ಪರಿಹಾರ ಕಂಡುಕೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದರು.
ಬೀದಿ ನಾಯಿಗಳ ನಿಯಂತ್ರಣದ ವಿಚಾರದಲ್ಲಿ ಶಿಕ್ಷಣ ಸಂಸ್ಥೆಗಳು ಸ್ಥಳೀಯ ಸಂಸ್ಥೆಗಳಿಗೆ ಸಹಕಾರ ನೀಡಲು ಬಯಸುತ್ತದೆ. ಶಾಲಾ, ಕಾಲೇಜು ಆವರಣಗಳನ್ನು ಸ್ವಚ್ಚವಾಗಿ ಇಟ್ಟುಕೊಂಡು ಪ್ರಾಣಿಗಳ ಪ್ರವೇಶವನ್ನು ತಡೆಯಲು ಶಿಕ್ಷಣ ಸಂಸ್ಥೆಗಳು ಪ್ರಯತ್ನಿಸುತ್ತವೆ. ಆದರೆ, ಬಾಹ್ಯ ಪ್ರದೇಶಗಳಲ್ಲಿ ಸರ್ವೇ ನಡೆಸುವುದು ಅಥವಾ ನಾಯಿಗಳ ಗಣತಿ ಒದಗಿಸುವುದು ನಮ್ಮ ಕಾರ್ಯಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.
ಮನವಿ ಸ್ವೀಕರಿ ಪ್ರತಿಕ್ರಿಯಸಿದ ಶಶಿ,‘ಸರ್ಕಾರದಿಂದ ಬಂದ ಸೂಚನೆಗಳನ್ನು ತಲುಪಿಸಲಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಬೀದಿ ನಾಯಿಗಳನ್ನು ನಿಯಂತ್ರಣಕ್ಕೆ ನಗರಸಭೆಯ ಕೈಗೊಳ್ಳುವ ಕ್ರಮಗಳಿಗೆ ಶಿಕ್ಷಣ ಸಂಸ್ಥೆಗಳಿಂದ ಸಹಕಾರದ ಅಗತ್ಯವಿದೆ. ಆ ನಿಟ್ಟಿನಲ್ಲಿ ಒಕ್ಕೂಟ ನೀಡಿರುವ ಪತ್ರಕ್ಕೆ ಸೂಕ್ತವಾಗಿ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ ಹಾಗೂ ಪೌರಾಯುಕ್ತ ಡಾ. ಜಯಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.