ADVERTISEMENT

ರಾಮನಗರ | ಗೋಧಿ ಮಣ್ಣಿನಲ್ಲಿ ಮುಚ್ಚಿ ಕರ್ತವ್ಯ ಲೋಪ: ಹಾಸ್ಟೆಲ್ ವಾರ್ಡನ್ ಅಮಾನತು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 2:28 IST
Last Updated 18 ಸೆಪ್ಟೆಂಬರ್ 2025, 2:28 IST
ಯೋಗೀಶ್, ಬಿಸಿಎಂ ಹಾಸ್ಟೆಲ್ ವಾರ್ಡನ್, ರಾಮನಗರ
ಯೋಗೀಶ್, ಬಿಸಿಎಂ ಹಾಸ್ಟೆಲ್ ವಾರ್ಡನ್, ರಾಮನಗರ   

ರಾಮನಗರ: ವಿದ್ಯಾರ್ಥಿಗಳಿಗೆ ನೀಡಬೇಕಿದ್ದ 15 ಕ್ವಿಂಟಲ್ ಗೋಧಿಯನ್ನು ಬಳಸದೆ ಮಣ್ಣಿನಲ್ಲಿ ಹೂತು ಹಾಕಿ ಕರ್ತವ್ಯ ಲೋಪ ಎಸಗಿದ ನಗರದ ಹೆಲ್ತ್ ಸಿಟಿ ಬಡಾವಣೆಯಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮಾದರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ವಾರ್ಡನ್ ಯೋಗೀಶ್ ಅವರನ್ನು ಜಿಲ್ಲಾಧಿಕಾರಿ ಬುಧವಾರ ಅಮಾನತುಗೊಳಿಸಿದ್ದಾರೆ.

ವಿದ್ಯಾರ್ಥಿಗಳಿಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಹಾಸ್ಟೆಲ್‌ಗೆ 30 ಕ್ವಿಂಟಲ್ ಗೋಧಿ ಸರಬರಾಜು ಆಗಿತ್ತು. ಗೋಧಿಯನ್ನು ಸರಿಯಾಗಿ ಬಳಸದ ಯೋಗೀಶ್, ಹುಳು ಹಿಡಿದಿದೆ ಎಂದು ತಾಲ್ಲೂಕು ಬಿಸಿಎಂ ಅಧಿಕಾರಿ ಗಮನಕ್ಕೆ ತಂದಿದ್ದರು. ಈ ಕುರಿತು ಕಾರಣ ಕೇಳಿ ಯೋಗೀಶ್ ಅವರಿಗೆ ಅಧಿಕಾರಿ ನೋಟಿಸ್ ನೀಡಿದ್ದರು.

ಹಾಸ್ಟೆಲ್ ಹಿಂಭಾಗ ಜೆಸಿಬಿಯಲ್ಲಿ ಗುಂಡಿ ತೋಡಿದಾಗ ಪತ್ತೆಯಾದ ಗೋಧಿ 

ಬಳಿಕ ಮೇಲಧಿಕಾರಿ ಸೂಚನೆ ಮೇರೆಗೆ ಗೋಧಿಯನ್ನು ಸ್ವಚ್ಛಗೊಳಿಸಿ 15 ಕ್ವಿಂಟಲ್ ಅನ್ನು ಕನಕಪುರದ ಹಾಸ್ಟೆಲ್‌ಗೆ ರವಾನಿಸಿ, ಉಳಿದ ಗೋಧಿಯನ್ನು ಬಳಸುವಂತೆ ಸೂಚಿಸಲಾಗಿತ್ತು. ಆದರೆ, ಆ ಗೋಧಿಯನ್ನು ಬಳಸದೆ ಹುಳು ಹಿಡಿಯುವಂತೆ ಮಾಡಿದ್ದರು. ಹಾಸ್ಟೆಲ್ ಹಿಂಭಾಗ ಗುಂಡಿ ತೆಗೆಸಿ ಅದರಲ್ಲಿ ಹಾಕಿ ಮುಚ್ಚಿಸಿದ್ದರು.

ADVERTISEMENT

ಈ ಕುರಿತು ಸಿಕ್ಕ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಬಿಲಾಲ್ ಮಹಮ್ಮದ್ ಮತ್ತು ತಾಲ್ಲೂಕು ಅಧಿಕಾರಿ ಮಧುಮಾಲ ಅವರು ಹಾಸ್ಟೆಲ್‌ಗೆ ತೆರಳಿ ಪರಿಶೀಲಿಸಿದ್ದರು. ಜೆಸಿಬಿ ತರಿಸಿ ಗೋಧಿ ಮುಚ್ಚಿಸಿದ್ದ ಸ್ಥಳವನ್ನು ಮತ್ತೆ ತೋಡಿಸಿದ್ದರು. ಆಗ ಗುಂಡಿಯಲ್ಲಿ ಗೋಧಿ ಪತ್ತೆಯಾಗಿತ್ತು. ಈ ಕುರಿತು ಬಿಲಾಲ್ ಅವರು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರಿಗೆ ವರದಿ ನೀಡಿದ್ದರು. ಅದರಂತೆ ಯೋಗೀಶ್ ಅವರನ್ನು ಜಿಲ್ಲಾಧಿಕಾರಿ ಅಮಾನತುಗೊಳಿಸಿ ಇಲಾಖೆ ವಿಚಾರಣೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ.

ಬಳಸದ ಕಾರಣ ಹುಳು ಹಿಡಿದಿರುವ ಗೋಧಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.