
ರಾಮನಗರ: ತಾಲ್ಲೂಕಿನ ಕೆಲ ದೇವಾಲಯಗಳ ಹುಂಡಿಯಲ್ಲಿದ್ದ ಹಣ ಮತ್ತು ರೈತರ ಜಮೀನುಗಳಲ್ಲಿದ್ದ ಪಂಪ್‌ಸೆಟ್ ಕದಿಯುತ್ತಿದ್ದ ಕಳ್ಳರ ಗ್ಯಾಂಗ್ ಪತ್ತೆ ಮಾಡಿರುವ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು, ಗ್ಯಾಂಗ್‌ನ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಚಿಕ್ಕೇಗೌಡನದೊಡ್ಡಿಯ ಇರುಳಿಗರ ಕಾಲೊನಿಯ ನಾಗ (25) ಹಾಗೂ ಮುನಿಯಪ್ಪ (30) ಬಂಧಿತರು. ಆರೋಪಿಗಳಿಂದ ₹6,535 ನಗದು ಹಾಗೂ 10 ಪಂಪ್‌ಸೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೇಳು ಮಂದಿಯ ಗ್ಯಾಂಗ್‌ನಲ್ಲಿ ಉಳಿದವರು ತಲೆ ಮರೆಸಿಕೊಂಡಿದ್ದಾರೆ.
ಆರೋಪಿಗಳು ಫೆ. 28ರಂದು ತಾಲ್ಲೂಕಿನ ಕುಂಬಾಪುರ ಕಾಲೊನಿಯ ಘಂಟೆ ಆಂಜನೇಯ ದೇವಾಲಯ ಮತ್ತು ಚಾಮುಂಡೇಶ್ವರಿ ದೇವಾಲಯದ ಬಾಗಿಲು ಮುರಿದು ಉತ್ಸವ ಮೂರ್ತಿಯ ₹60 ಸಾವಿರ ಮೌಲ್ಯದ 7 ಗ್ರಾಂ ಚಿನ್ನದ ತಾಳಿ ಮತ್ತು ಆಂಜನೇಯ ದೇವಾಲಯದ ಹುಂಡಿ ಮತ್ತು ಮಂಗಳಾರತಿ ತಟ್ಟೆಯಲ್ಲಿದ್ದ ಒಟ್ಟು ₹85 ಸಾವಿರ ನಗದು ಕದ್ದಿದ್ದರು.
ಅದಕ್ಕೂ ಮುಂಚೆ ಫೆ. 25ರಂದು ತಾಲ್ಲೂಕಿನ ರಾಂಪುರದ ಶ್ರೀ ಪಟ್ಟಲದಮ್ಮ ದೇವಸ್ಥಾನದ ಹುಂಡಿಯಲ್ಲಿದ್ದ ಸುಮಾರು ₹40 ಸಾವಿರ ಕದ್ದಿದ್ದರು. ಜೊತೆಗೆ ಕೊಂಕಾಣಿದೊಡ್ಡಿ ಗ್ರಾಮದ ಶ್ರೀ ಆದಿಶಕ್ತಿ ದೇವಸ್ಥಾನದ ಹುಂಡಿ ಹಣವನ್ನೂ ಎಗರಿಸಿದ್ದರು. ಈ ಕುರಿತು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾತ್ರಿಯೇ ನಡೆದಿದ್ದ ಕಳ್ಳತನ ಕೃತ್ಯಗಳ ಕುರಿತು ಬೆನ್ನತ್ತಿ, ಘಟನಾ ಸ್ಥಳಗಳು ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು. ಜಿಲ್ಲೆಯಲ್ಲಿ ಹಿಂದೆ ನಡೆದಿದ್ದ ಕೆಲ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಚಲನವಲನ ಪತ್ತೆಯಾಯಿತು. ಇಬ್ಬರ ವಿಳಾಸ ಪತ್ತೆಹಚ್ಚಿ ಮನೆಗೆ ಹೋಗಿ ವಿಚಾರಣೆ ನಡೆಸಿ, ಶೋಧ ನಡೆಸಿದಾಗ ಹುಂಡಿಯಿಂದ ಕದ್ದ ನಾಣ್ಯಗಳು ಸಿಕ್ಕವು. ಬಳಿಕ ಆರೋಪಿಗಳು ಕೃತ್ಯ ಒಪ್ಪಿಕೊಂಡರು ಎಂದು ಪೊಲೀಸರು ತಿಳಿಸಿದರು.
ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿರುವ ಆರೋಪಿಗಳ ಬಂಧನದಿಂದಾಗಿ ಠಾಣೆ ವ್ಯಾಪ್ತಿಯ ವಿವಿಧ ಗ್ರಾಮಗಳ ಜಮೀನುಗಳಲ್ಲಿ ನಡೆದಿದ್ದ 10 ಪಂಪ್‌ಸೆಟ್‌ಗಳ ಕಳ್ಳತನ ಪ್ರಕರಣಗಳು ಸಹ ಪತ್ತೆಯಾಗಿವೆ. ಸದ್ಯ ಅರೋಪಿಗಳ ಸಹಚರರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದರು.
ಕಳ್ಳರ ಬಂಧನ ಕಾರ್ಯಾಚರಣೆಯನ್ನು ಇನ್‌ಸ್ಪೆಕ್ಟರ್ ಟಿ. ಮುರಳಿ ನೇತೃತ್ವದಲ್ಲಿ ಸಬ್ ಇನ್‌ಸ್ಪೆಕ್ಟರ್‌ಗಳಾದ ಮಹಮದ್ ಅಲ್ಲಾವುದೀನ್, ಸಿದ್ದರಾಜು, ನರಸಿಂಹಯ್ಯ, ಸಿಬ್ಬಂದಿ ಮಹೇಶ್, ನರೇಶ್, ಆಸಿಫ್, ರವಿ ಹಾಗೂ ಶಾರದಮ್ಮ ಅವರ ತಂಡ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.