ADVERTISEMENT

ರಾಮನಗರ | ಕಸದ ಬ್ಲ್ಯಾಕ್‌ಸ್ಪಾಟ್‌ಗೆ ಕಲಾತ್ಮಕ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 4:09 IST
Last Updated 21 ಜನವರಿ 2026, 4:09 IST
ರಾಮನಗರದ ಲೂರ್ದು ಮಾತೆ ಚರ್ಚ್ ಬಳಿಯ ಕಸದ ಬ್ಲ್ಯಾಕ್‌ಸ್ಪಾಟ್‌ ಅನ್ನು ತ್ಯಾಜ್ಯದ ವಸ್ತುಗಳನ್ನೇ ಬಳಸಿಕೊಂಡು ಸುಂದರ ತಾಣವಾಗಿ ಅಭಿವೃದ್ಧಿಪಡಿಸಿರುವುದನ್ನು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ವೀಕ್ಷಿಸಿದರು. ನಗರಸಭೆ ಸದಸ್ಯ ಅಕ್ಲೀಂ ಪಾಷ, ಪರಿಸರ ಎಂಜಿನಿಯರ್ ಸುಬ್ರಮಣ್ಯ, ಆರೋಗ್ಯ ನಿರೀಕ್ಷಕ ವಿಜಯಕುಮಾರ್ ಹಾಗೂ ಇತರರು ಇದ್ದಾರೆ
ರಾಮನಗರದ ಲೂರ್ದು ಮಾತೆ ಚರ್ಚ್ ಬಳಿಯ ಕಸದ ಬ್ಲ್ಯಾಕ್‌ಸ್ಪಾಟ್‌ ಅನ್ನು ತ್ಯಾಜ್ಯದ ವಸ್ತುಗಳನ್ನೇ ಬಳಸಿಕೊಂಡು ಸುಂದರ ತಾಣವಾಗಿ ಅಭಿವೃದ್ಧಿಪಡಿಸಿರುವುದನ್ನು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ವೀಕ್ಷಿಸಿದರು. ನಗರಸಭೆ ಸದಸ್ಯ ಅಕ್ಲೀಂ ಪಾಷ, ಪರಿಸರ ಎಂಜಿನಿಯರ್ ಸುಬ್ರಮಣ್ಯ, ಆರೋಗ್ಯ ನಿರೀಕ್ಷಕ ವಿಜಯಕುಮಾರ್ ಹಾಗೂ ಇತರರು ಇದ್ದಾರೆ   

ರಾಮನಗರ: ನಗರದಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ನಗರಸಭೆಯು, ಕಸದ ಬ್ಲ್ಯಾಕ್‌ಸ್ಪಾಟ್‌ಗಳನ್ನು ಸುಂದರ ತಾಣವಾಗಿಸಲು ಮುಂದಾಗಿದೆ. ‘ವೇಸ್ಟ್ ಟು ಆರ್ಟ್, ವೇಸ್ಟ್ ಟು ವಂಡರ್’ ಪರಿಕಲ್ಪನೆಯೊಂದಿಗೆ ಬ್ಲ್ಯಾಕ್‌ಸ್ಪಾಟ್‌ಗಳಿಗೆ ಕಲಾತ್ಮಕ ಸ್ಪರ್ಶ ನೀಡಲು ಹೆಜ್ಜೆ ಇರಿಸಿದೆ.

ಈಗಾಗಲೇ ಅಭಿವೃದ್ಧಿಪಡಿಸಿರುವ ಕೆಲ ಬ್ಲ್ಯಾಕ್‌ಸ್ಪಾಟ್‌ಗಳಿಗೆ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರು ಸೋಮವಾರ ಸುದ್ದಿಗಾರರನ್ನು ಕರೆದೊಯ್ದು ಯೋಜನೆಯ ಕುರಿತು ಮಾಹಿತಿ ನೀಡಿದರು.

‘ನಗರದಲ್ಲಿ ಈಗಾಗಲೇ ಗುರುತಿಸಿರುವ 50ಕ್ಕೂ ಹೆಚ್ಚು ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಶೇ 90ರಷ್ಟು ಕಸ ಎಸೆಯುವುದು ತಗ್ಗಿದೆ.  ಆದರೂ ಕೆಲವೆಡೆ ಮುಂದುವರಿದೆ. ಅಂತಹ ಸ್ಥಳಗಳನ್ನು ಗುರುತಿಸಿ ಹೊಸ ಪರಿಕಲ್ಪನೆಯೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಆ ಮೂಲಕ ಸ್ಥಳೀಯರು ಮತ್ತೆ ಅಲ್ಲಿ ಕಸ ಎಸೆಯದಂತೆ ಮಾಡುವ ಉದ್ದೇಶ ಹೊಂದಿದ್ದೇವೆ’ ಎಂದರು.

ADVERTISEMENT

‘ಪೌರ ಕಾರ್ಮಿಕರು ತ್ಯಾಜ್ಯ ಸಂಗ್ರಹಿಸುವಾಗ ಸಿಗುವ ಹಳೆ ಟೈಯರ್‌ಗಳು, ಟೈಲ್ಸ್, ಇಟ್ಟಿಗೆ, ಪ್ಲಾಸ್ಟಿಕ್ ಬಾಟಲಿ, ಡಬ್ಬಿಯಂತಹ ವಸ್ತುಗಳನ್ನು ಬಳಸಿಕೊಂಡು ಅವುಗಳ ಕಲಾತ್ಮಕ ಸ್ಪರ್ಶ ನೀಡಿ ಆ ಸ್ಥಳವನ್ನು ಸುಂದರಗೊಳಿಸಲಾಗುತ್ತಿದೆ. ನಗರಸಭೆಯ ಸ್ವಚ್ಚತಾ ರಾಯಬಾರಿ ಚಿತ್ರಾರಾವ್ ಅವರ ತಂಡ, ಕಮ್ಯುನಿಟಿ ಮೊಬಿಲೈಸರ್‌ಗಳು ಹಾಗೂ ಎನ್‌ಎಸ್‌ಸ್‌ ವಿದ್ಯಾರ್ಥಿಗಳು ಇದಕ್ಕೆ ಶ್ರಮಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಸ್ವಚ್ಚ ರಾಮನಗರ ನಿರ್ಮಾಣಕ್ಕಾಗಿ ನಗರಸಭೆ ಹಲವು ಕ್ರಮಗಳನ್ನು ಕೈಗೊಂಡಿದೆ. ಬ್ಲ್ಯಾಕ್‌ಸ್ಪಾಟ್‌ಗಳ ಮೇಲೆ ನಿಗಾ ಇಡಲು ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಪದೇ ಪದೇ ಕಸ ಎಸೆಯುವವರಿಗೆ ದಂಡದ ಬಿಸಿ ಮುಟ್ಟಿಸಲಾಗಿದೆ. ಕಸ ಸಂಗ್ರಹ ಮತ್ತು ವಿಲೇವಾರಿ ಸಮಯದಲ್ಲಿ ಬದಲಾವಣೆ ತಂದು ಚುರುಕುಗೊಳಿಸಲಾಗಿದೆ. ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲಾಗುತ್ತಿದೆ’ ಎಂದು ಹೇಳಿದರು.

‘ಅದರ ಮುಂದುವರಿದ ಭಾಗವಾಗಿ 15 ಬ್ಲ್ಯಾಕ್‌ಸ್ಪಾಟ್‌ಗಳಿಗೆ ಕಲಾತ್ಮಕ ಸ್ಪರ್ಶ ನೀಡಲು ಮುಂದಾಗಿದ್ದೇವೆ. ಈ ಸ್ಥಳಗಳಲ್ಲಿ ಕಲ್ಲಿನ ಬೆಂಚುಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರು ಇಲ್ಲಿ ಕುಳಿತುಕೊಂಡು ಕಾಲ ಕಳೆಯಬಹುದು. ಒಟ್ಟಿನಲ್ಲಿ ಬ್ಲ್ಯಾಕ್‌ಸ್ಪಾಟ್‌ಗಳಿಲ್ಲದ ನಗರ ನಿರ್ಮಾಣ ನಮ್ಮ ಗುರಿಯಾಗಿದೆ’ ಎಂದರು.

ನಗರಸಭೆ ಪೌರಾಯುಕ್ತ ಡಾ. ಜಯಣ್ಣ, ಸದಸ್ಯ ಅಕ್ಲೀಂ ಪಾಷ, ಪರಿಸರ ಎಂಜಿನಿಯರ್ ಸುಬ್ರಮಣಿ, ಆರೋಗ್ಯ ನಿರೀಕ್ಷಕ ವಿಜಯಕುಮಾರ್ ಹಾಗೂ ಇತರರು ಇದ್ದರು.

ಅಭಿವೃದ್ಧಿಪಡಿಸುವುದಕ್ಕೆ ಮುಂಚೆ ಹೀಗಿತ್ತು ರಾಮನಗರದ ಲೂರ್ದು ಮಾತೆ ಚರ್ಚ್ ಬಳಿಯ ಕಸದ ಬ್ಲ್ಯಾಕ್‌ಸ್ಪಾಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.