ADVERTISEMENT

ರಾಮನಗರ | ಎಂಟು ತಾಸಿನಲ್ಲಿ ಕೊಲೆ ಆರೋಪಿ ಸೆರೆ: ಯುವಕನ ಸುಳಿವು ಕೊಟ್ಟ ಸಿಸಿಟಿವಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 18:47 IST
Last Updated 10 ಜುಲೈ 2025, 18:47 IST
ಆರ್. ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಆರ್. ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ   

ರಾಮನಗರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆಯಲ್ಲಿ ಬುಧವಾರ ನಡೆದಿದ್ದ 13 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಠಾಣೆ ಪೊಲೀಸರು ಘಟನೆ ನಡೆದ ಎಂಟೇ ತಾಸಿನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ರಾಯಚೂರು ಜಿಲ್ಲೆಯ 25 ವರ್ಷದ ಯಲ್ಲಪ್ಪ ಬಂಧಿತ ಯುವಕ.

ಕಟ್ಟಡ ಕಾರ್ಮಿಕನಾಗಿರುವ ಆರೋಪಿ ಸಹ ತಾವರೆಕೆರೆಯಲ್ಲೇ ಬಾಡಿಗೆ ಮನೆಯಲ್ಲಿದ್ದ. ಕೊಪ್ಪಳ ಜಿಲ್ಲೆಯ ಬಾಲಕಿಯ ತಂದೆ–ತಾಯಿ ಸಹ ಕಟ್ಟಡ ಕಾರ್ಮಿಕರಾಗಿದ್ದು, ನಾಲ್ವರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆ ಪೈಕಿ, ಬಾಲಕಿ ಹೊರತುಪಡಿಸಿ ಉಳಿದವರು ಶಾಲೆಗೆ ಹೋಗುತ್ತಿದ್ದರು. ಬಾಲಕಿ ಮನೆಯಲ್ಲೇ ಇರುತ್ತಿದ್ದಳು ಎಂದು ಪೊಲೀಸರು ತಿಳಿಸಿದರು.

ಜಾತ್ರೆಯಲ್ಲಿ ನೋಡಿದ್ದ: ಇತ್ತೀಚೆಗೆ ತಾವರೆಕೆರೆಯಲ್ಲಿ ರಾತ್ರಿ ನಡೆದಿದ್ದ ದೇವರ ಜಾತ್ರೆಗೆ ಬಂದಿದ್ದ ಬಾಲಕಿಯನ್ನು ಯಲ್ಲಪ್ಪ ನೋಡಿ ಮೋಹಗೊಂಡಿದ್ದ. ಆಕೆಗೆ ಗೊತ್ತಾಗದಂತೆ ಹಿಂಬಾಲಿಸಿಕೊಂಡು ಬಂದು, ಮನೆ ಜಾಗ ತಿಳಿದುಕೊಂಡಿದ್ದ. ಆಗಾಗ ಮನೆ ಬಳಿ ಬಂದು ಬಾಲಕಿಯ ಚಲನವಲನ ಗಮನಿಸಿದ್ದ ಆತ, ಹಗಲಲ್ಲಿ ಒಬ್ಬಳೇ ಇರುವುದನ್ನು ಅರಿತಿದ್ದ.

ADVERTISEMENT

ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಆರೋಪಿ ಮದ್ಯ ಸೇವಿಸಿಕೊಂಡು ಬಾಲಕಿ ಮನೆಗೆ ಬಂದಿದ್ದ. ಅಪರಿಚಿತ ವ್ಯಕ್ತಿ ಮನೆಗೆ ಬಂದಿದ್ದನ್ನು ಕಂಡು ಗಾಬರಿಗೊಂಡ ಬಾಲಕಿ, ಯಾರೆಂದು ವಿಚಾರಿಸಲು ಮುಂದಾಗುತ್ತಿದ್ದಂತೆ ಆರೋಪಿ ಆಕೆ ಮೇಲೆರಗಿ ಅತ್ಯಾಚಾರ ಮುಂದಾಗಿದ್ದ. ಬಾಲಕಿ ಕೂಗಿಕೊಳ್ಳಲು ಮುಂದಾದಾಗ ಮನೆಯಲ್ಲಿದ್ದ ದೊಣ್ಣೆಯಿಂದ ಹಲ್ಲೆ ನಡೆಸಿದ್ದ.

ನಿತ್ರಾಣಳಾಗಿದ್ದರೂ ಬಿಡಲಿಲ್ಲ: ನೋವಿನಿಂದ ನಿತ್ರಾಣಳಾಗಿ ನೆಲದಲ್ಲಿ ಬಿದ್ದ ಬಾಲಕಿ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದ. ಆತನಿಂದ ಬಿಡಿಸಿಕೊಳ್ಳಲು ಬಾಲಕಿ ಯತ್ನಿಸಿದಾಗ ಮತ್ತೆ ತಲೆ ಮತ್ತು ಮುಖಕ್ಕೆ ದೊಣ್ಣೆಯಿಂದ ಬಲವಾಗಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆಗೆ ಬಂದಿದ್ದ ಬಾಲಕಿ ಸಹೋದರ ಬಾಗಿಲು ತೆರೆದು ನೋಡಿದಾಗ, ಬಾಲಕಿ ನಗ್ನಾವಸ್ಥೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು.

ಕೂಡಲೇ ಆತ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ, ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟೊತ್ತಿಗಾಗಲೇ ಆಕೆ ಕೊನೆಯುಸಿರೆಳೆದಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದರು. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಿ, ಆರೋಪಿ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ಪೊಲೀಸರು ಹೇಳಿದರು.

ಕದಲದ ಎಸ್‌ಪಿ: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಅವರು ಡಿವೈಎಸ್ಪಿ ಪ್ರವೀಣ್ ಕುಮಾರ್ ನೇತೃತ್ವದಲ್ಲಿ‌ ತಾವರೆಕೆರೆ ಇನ್‌ಸ್ಪೆಕ್ಟರ್ ಮೋಹನ್, ಮಾಗಡಿ ಇನ್‌ಸ್ಪೆಕ್ಟರ್ ಗಿರಿರಾಜ್ ಸೇರಿದಂತೆ ಸುಮಾರು 60 ಸಿಬ್ಬಂದಿ ಒಳಗೊಂಡ 3 ತಂಡ ರಚಿಸಿ ಆರೋಪಿ ಪತ್ತೆಗೆ ತಂತ್ರ ಹೆಣೆದರು.

ಕೆಲವರು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದರೆ, ಉಳಿದವರು ಘಟನಾ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿ ಆರೋಪಿ ಕುರಿತು ಮಾಹಿತಿ ಕಲೆ ಹಾಕುತ್ತಿದ್ದರು. ಸಿಬ್ಬಂದಿ ತಳಮಟ್ಟದಲ್ಲಿ ಕಲೆಹಾಕಿದ ಮಾಹಿತಿ ಹಾಗೂ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿ ಜಾಗ ಪತ್ತೆ ಹಚ್ಚಿ ಬಂಧಿಸಲಾಯಿತು. ಅಲ್ಲಿಯವರೆಗೆ ಎಸ್‌ಪಿ ಸ್ಥಳ ಬಿಟ್ಟು ಕದಲದೆ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಆರೋಪಿ ವಿರುದ್ದ ಪೋಕ್ಸೊ, ಕೊಲೆ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಗುರುವಾರ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಶವ ಹಸ್ತಾಂತರಿಸಲಾಯಿತು. ಆಸ್ಪತ್ರೆಯಲ್ಲಿ ಬಾಲಕಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಆರೋಪಿ ಯಲ್ಲಪ್ಪ

ಕೃತ್ಯ ಎಸಗಿ ಬೈಕ್‌ನಲ್ಲಿ ಸಿಲಿಂಡರ್‌ನೊಂದಿಗೆ ಪರಾರಿಯಾಗಿದ್ದ ಆರೋಪಿಯ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಅದರ ಸುಳಿವಿನ ಮೇರೆಗೆ ನಡೆದ ಎಂಟೇ ತಾಸಿನಲ್ಲಿ ಆರೋಪಿಯನ್ನು ಬಂಧಿಸಲಾಯಿತು

ಆರ್. ಶ್ರೀನಿವಾಸ ಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

60 ಸಿಬ್ಬಂದಿಯ ಸತತ ಶ್ರಮ

ಕೃತ್ಯ ಎಸಗಿದ ಬಳಿಕ ಆರೋಪಿ ಮನೆಯಿಂದ ಹಾಗೆಯೇ ಹೋದರೆ ಯಾರಿಗಾದರೂ ಅನುಮಾನ ಬರಲಿದೆ ಅಂದುಕೊಂಡು ಒಳಗಿದ್ದ ಸಿಲಿಂಡರ್ ತೆಗೆದುಕೊಂಡು ಹೋಗಿದ್ದ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿ ಸುಳಿವು ಸಿಕ್ಕಿತು. ಅಸ್ಪಷ್ಟವಾಗಿದ್ದ ಆತನ ಚಿತ್ರದೊಂದಿಗೆ ಸುಮಾರು 60 ಸಿಬ್ಬಂದಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚರಿಸಿ ಸುಮಾರು 500 ಜನರಿಗೆ ಆತನ ಫೋಟೊ ತೋರಿಸಿ ಮಾಹಿತಿ ಕಲೆ ಹಾಕುತ್ತಿದ್ದೆವು. ಇದೇ ವೇಳೆ ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬನಿಗೆ ಫೋಟೊ ತೋರಿಸಿದಾಗ ಆರೋಪಿ ಕುರಿತು ಮಹತ್ವದ ಮಾಹಿತಿ ನೀಡಿದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ರೈಲು ಹತ್ತುವ ಆಲೋಚನೆಯಲ್ಲಿದ್ದ

ಬಾಲಕಿ ಮನೆಯಿಂದ ತೆಗೆದುಕೊಂಡು ಬಂದಿದ್ದ ಸಿಲಿಂಡರ್ ಅನ್ನು ಆರೋಪಿ ₹800ಕ್ಕೆ ಸ್ಥಳೀಯರೊಬ್ಬರಿಗೆ ಮಾರಾಟ ಮಾಡಿದ್ದ. ಅದೇ ಹಣದಲ್ಲಿ ಬೆಂಗಳೂರಿಗೆ ಹೋಗಿ ರೈಲು ಹತ್ತಿಕೊಂಡು ಯಾವುದಾದರೂ ಊರಿಗೆ ಹೋಗಿ ತಲೆ ಮರೆಸಿಕೊಳ್ಳುವ ಆಲೋಚನೆಯಲ್ಲಿದ್ದ. ಅಷ್ಟರೊಳಗೆ ಆತನಿರುವ ಸ್ಥಳ ಪತ್ತೆ ಹಚ್ಚಿ ಬಂಧಿಸಲಾಯಿತು. ಮೊಬೈಲ್ ಬಳಸದ ಆರೋಪಿ ಬಳಿ ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ದಾಖಲೆಗಳಿರಲಿಲ್ಲ. ಮಾದಕವಸ್ತು ವ್ಯಸನಿಯಂತಿದ್ದ ಆರೋಪಿ ಕೃತ್ಯದ ಬಳಿಕ ಆರೋಪಿ ಆರು ವರ್ಷದ ಬೇರೆ ಬಾಲಕಿಯನ್ನು ಸಹ ಮಾತನಾಡಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳ್ಳತನ ಪ್ರಕರಣದಲ್ಲೂ ಭಾಗಿ

ಕಟ್ಟಡ ನಿರ್ಮಾಣ ಕೆಲಸದ ಜೊತೆಗೆ ಆರೋಪಿ ಕಳ್ಳತನ ಕೃತ್ಯಗಳಲ್ಲೂ ತೊಡಗಿಸಿಕೊಂಡಿದ್ದ. ಬಾಲಕಿ ಮನೆಗೆ ಆತ ಬಂದಿದ್ದು ಸಹ ಕದ್ದ ಬೈಕ್‌ನಲ್ಲಿ ಎಂಬುದು ತನಿಖೆಯಿಂದ ಗೊತ್ತಾಗಿದೆ. ಆರೋಪಿ ಮತ್ತಷ್ಟು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಅನುಮಾನವಿದ್ದು ವಿಚಾರಣೆಗೆ ಒಳಪಡಿಸಲಾಗಿದೆ. ಕೃತ್ಯ ಎಸಗಿ ಹೋಗುವಾಗ ಮಾರ್ಗಮಧ್ಯೆ ಪರಿಚಿತ ಯುವಕನೊಬ್ಬ ಆರೋಪಿಯ ಬೈಕ್‌ ಹತ್ತಿದ್ದ. ಅನುಮಾನದ ಮೇರೆಗೆ ಆತನನ್ನು ಸಹ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯದಲ್ಲಿ ಆತನ ಪಾತ್ರವಿಲ್ಲದಿರುವುದು ಗೊತ್ತಾಯಿತು. ಸದ್ಯ ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.