ADVERTISEMENT

ರಾಮನಗರ: ಅಪಘಾತಕ್ಕೆ ವರ್ಷದಲ್ಲಿ 430 ಬಲಿ

ಬೆಂಗಳೂರು ದಕ್ಷಿಣ ಜಿಲ್ಲೆ: 2025ರಲ್ಲಿ 1,504 ಅಪಘಾತ, ವರ್ಷದಿಂದ ವರ್ಷಕ್ಕೆ ತುಸು ಏರಿಕೆ

ಓದೇಶ ಸಕಲೇಶಪುರ
Published 3 ಫೆಬ್ರುವರಿ 2026, 4:12 IST
Last Updated 3 ಫೆಬ್ರುವರಿ 2026, 4:12 IST
ಚನ್ನಪಟ್ಟಣ ತಾಲ್ಲೂಕಿನ ಕೋಮನಹಳ್ಳಿ ಬಳಿ ದಂಪತಿಯನ್ನು ಬಲಿ ಪಡೆದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು (ಸಂಗ್ರಹ ಚಿತ್ರ)
ಚನ್ನಪಟ್ಟಣ ತಾಲ್ಲೂಕಿನ ಕೋಮನಹಳ್ಳಿ ಬಳಿ ದಂಪತಿಯನ್ನು ಬಲಿ ಪಡೆದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು (ಸಂಗ್ರಹ ಚಿತ್ರ)   

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಳೆದೊಂದು ವರ್ಷದಲ್ಲಿ 1,504 ರಸ್ತೆ ಅಪಘಾತಗಳು ಸಂಭವಿಸಿವೆ. ಇವುಗಳಲ್ಲಿ ಬರೋಬ್ಬರಿ 430 ಮಂದಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 1,646 ಪ್ರಯಾಣಿಕರು ಗಾಯಗೊಂಡಿದ್ದಾರೆ. ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಅಪಘಾತ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ತುಸು ಏರಿಕೆಯಾಗುತ್ತಲೇ ಇದೆ.

ಒಂದು ವರ್ಷದಲ್ಲಿ ಸಂಭವಿಸಿರುವ 1,504 ಅಪಘಾತಗಳಲ್ಲಿ 403 ಮಾರಣಾಂತಿಕ ಅಪಘಾತ ಪ್ರಕರಣಗಳಾದ್ದು, ಇವುಗಳಲ್ಲಿ 430 ಪ್ರಯಾಣಿಕರು ಕೊನೆಯುಸಿರೆಳೆದಿದ್ದು, 192 ಮಂದಿ ಗಾಯಗೊಂಡಿದ್ದಾರೆ. ಮಾರಣಾಂತಿಕವಲ್ಲದ 1,101 ಅಪಘಾತಗಳಲ್ಲಿ 1,454 ಮಂದಿಗೆ ಗಾಯಗಳಾಗಿವೆ.

ಸಾವು–ನೋವು ಏರಿಕೆ: ಜಿಲ್ಲೆಯಲ್ಲಿ ಸುಮಾರು 55 ಕಿ.ಮೀ. ಹಾದು ಹೋಗಿರುವ ಬೆಂಗಳೂರು–ಮೈಸೂರು ನಡುವಣ ರಾಷ್ಟ್ರೀಯ ಹೆದ್ದಾರಿ–275 ವಾಹನಗಳ ಸಂಚಾರಕ್ಕೆ ಮುಕ್ತವಾದಾಗಿನಿಂದ, ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಈ ಅಪಘಾತಗಳಿಂದಾಗಿ ಸಾವಿನ ಮನೆ ಸೇರುವವರ ಜೊತೆಗೆ ಗಾಯಾಳುಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ.

ADVERTISEMENT

2023ರಲ್ಲಿ ಸಂಭವಿಸಿದ್ದ 356 ಮಾರಣಾಂತಿಕ ಅಪಘಾತಗಳಲ್ಲಿ 393 ಮಂದಿ ಜೀವ ಕಳೆದುಕೊಂಡು 143 ಜನ ಗಾಯಗೊಂಡಿದ್ದರು. 2024ರಲ್ಲಿ ಅಪಘಾತಗಳ ಸಂಖ್ಯೆ 397ಕ್ಕೆ ಏರಿಕೆಯಾಗಿ ಮೃತರ ಸಂಖ್ಯೆ 429ಕ್ಕೆ ಹಾಗೂ ಗಾಯಾಳುಗಳ ಸಂಖ್ಯೆ 182ಕ್ಕೆ ಹೆಚ್ಚಳವಾಯಿತು. 2005ರಲ್ಲಿ ಸಂಭವಿಸಿದ 403 ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿ 430 ಮಂದಿ ಜೀವ ಕಳೆದುಕೊಂಡು 192 ಮಂದಿ ಗಾಯಗೊಂಡಿದ್ದಾರೆ.

ಮಾರಣಾಂತಿಕವಲ್ಲದ ಅಪಘಾತಗಳು ಮತ್ತು ಗಾಯಾಳುಗಳ ಸಂಖ್ಯೆಯೂ ಕಳೆದ 3 ವರ್ಷದಲ್ಲಿ ಏರಿಕೆಯಾಗಿದೆ. 2023ರಲ್ಲಿ ಸಂಭವಿಸಿದ 1,122 ಅಪಘಾತಗಳಲ್ಲಿ 1,404 ಮಂದಿ ಗಾಯಗೊಂಡಿದ್ದರು. ನಂತರ 2024ರಲ್ಲಿ 1,073 ಪ್ರಕರಣಗಳಲ್ಲಿ 1,397 ಹಾಗೂ 2025ರಲ್ಲಿ 1101 ಅಪಘಾತಗಳಲ್ಲಿ 1,454 ಜನರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿನ ಸಾವು–ನೋವಿನಲ್ಲಿ 2024 ಮತ್ತು 2025ರ ನಡುವಣ ವ್ಯತ್ಯಾಸ ಕೇವಲ 10ರ ಆಸುಪಾಸಿನಲ್ಲಿರುವುದು ಸಮಾಧಾನಕರ ಸಂಗತಿ. ಅಪಘಾತಗಳ ತಡೆಗೆ ಹಾಗೂ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಕುರಿತು ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಜಿಲ್ಲೆಯಾದ್ಯಂತ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಲಿದೆ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದರು.

₹1.16 ಲಕ್ಷ ಪ್ರಕರಣ; ₹5.82 ಕೋಟಿ ದಂಡ

ಜಿಲ್ಲೆಯಾದ್ಯಂತ 2025ರಲ್ಲಿ 116905 ಐಎಂವಿ (ಮೋಟಾರು ವಾಹನಗಳ ಕಾಯ್ದೆ) ಪ್ರಕರಣಗಳು ದಾಖಲಾಗಿವೆ. ಮದ್ಯಪಾನ ಮಾಡಿ ಚಾಲನೆ ಅತಿ ವೇಗ ಸಿಗ್ನಲ್ ಜಂಪ್ ವಾಹನಕ್ಕೆ ವಿಮೆ ಇಲ್ಲದಿರುವುದು ವಾಣಿಜ್ಯ ವಾಹನಗಳು ಸಮವಸ್ತ್ರ ಧರಿಸದಿರುವುದು ಹೆಚ್ಚುವರಿ ಪ್ರಯಾಣಿಕರು ಪೊಲೀಸರೊಂದಿಗೆ ಅಸಭ್ಯ ವರ್ತನೆ ಎಡಭಾಗದಲ್ಲಿ ಓವರ್‌ಟೇಕ್ ಚಾಲನೆ ವೇಳೆ ಮೊಬೈಲ್ ಬಳಕೆ ಸೀಟ್ ಬೆಲ್ಟ್ ಧರಿಸದಿರುವುದು ಹೆಲ್ಮೆಟ್ ಧರಿಸದಿರುವುದು ಸೇರಿದಂತೆ ವಿವಿಧ ಅಪಘಾತ ಪ್ರಕರಣಗಳಲ್ಲಿ ಸ್ಥಳದಲ್ಲೇ ವಿಧಿಸಿದ ದಂಡದ ಮೊತ್ತ ಒಟ್ಟು ₹5.82 ಕೋಟಿ ಆಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.