ADVERTISEMENT

ಕುದೂರು | ಕುಂಟುತ್ತಾ ಸಾಗುತ್ತಿದೆ ಮುಖ್ಯರಸ್ತೆ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 3:34 IST
Last Updated 17 ಡಿಸೆಂಬರ್ 2023, 3:34 IST
ಕುದೂರು ಪಟ್ಟಣದ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಕಾರಣ ಪ್ರತಿದಿನ ಉಂಟಾಗುತ್ತಿರುವ ಸಂಚಾರ ದಟ್ಟಣೆ.
ಕುದೂರು ಪಟ್ಟಣದ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಕಾರಣ ಪ್ರತಿದಿನ ಉಂಟಾಗುತ್ತಿರುವ ಸಂಚಾರ ದಟ್ಟಣೆ.   

ಕುದೂರು: ಪಟ್ಟಣದ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಕಾರಣ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಹಾಗೂ ರಸ್ತೆ ಬದಿಯ ಅಂಗಡಿ ಮಾಲೀಕರಿಗೆ ಕಾಮಗಾರಿ ತಲೆನೋವಾಗಿ ಪರಿಣಮಿಸಿದೆ.

2023ರ ಫೆಬ್ರವರಿ 11 ರಂದು ಮಾಜಿ ಶಾಸಕ ಎ. ಮಂಜುನಾಥ್ ಇಲ್ಲಿನ ಮುಖ್ಯ ರಸ್ತೆ ಅಭಿವೃದ್ಧಿಗಾಗಿ 3 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದರು.  ಇಲ್ಲಿಯವರೆಗೂ ಕೂಡ ಕಾಮಗಾರಿ ನಡೆಯುತ್ತಲೇ ಇರುವುದರಿಂದ ಸಹಜವಾಗಿ ನಾಗರಿಕರಿಗೆ ಬೇಸರ ತರಿಸಿದೆ. ಆದಷ್ಟು ಬೇಗ ಕಾಮಗಾರಿಗೆ ವೇಗ ನೀಡಿ ಸುಸಜ್ಜಿತ ರಸ್ತೆಯನ್ನು ನಿರ್ಮಿಸಿಕೊಡಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಾಹನ ಸವಾರರ ಪರದಾಟ

ADVERTISEMENT

ಮುಖ್ಯ‌ರಸ್ತೆಯ ಎರಡೂ ಬದಿಗಳಲ್ಲಿ ದ್ವಿಚಕ್ರ ವಾಹನ, ಕಾರುಗಳು ಅಡ್ಡಾದಿಡ್ಡಿಯಾಗಿ ಪಾರ್ಕ್ ಮಾಡುತ್ತಿರುವ ಪರಿಣಾಮ ಶಾಲಾ ಬಸ್, ಸರ್ಕಾರಿ ಹಾಗೂ ಖಾಸಗಿ ಬಸ್, ಇನ್ನಿತರ ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ. ಸಮಸ್ಯೆ ಬಗೆಹರಿಸಬೇಕಾದ ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಕಣ್ಮುಚ್ಚಿ ಕುಳಿತಿದೆ.

ಪಾದಚಾರಿ ಮಾರ್ಗ ಆಕ್ರಮಣ

ಬೈಪಾಸ್ ರಸ್ತೆಯಿಂದ ಸಂತೆ ಸರ್ಕಲ್‌ವರೆಗೂ ಎರಡೂ ಕಡೆಗಳಲ್ಲಿ ಪಾದಚಾರಿ ಮಾರ್ಗವನ್ನು ಬೀದಿ ಬದಿ ವ್ಯಾಪಾರಿಗಳು, ಆಪೆ ಗಾಡಿಗಳಲ್ಲಿ ಮಾರಾಟ ಮಾಡುವ ಹಣ್ಣಿನ ವಾಹನ, ತರಕಾರಿ ಮತ್ತು ಹೂವಿನ ವಾಹನಗಳು ಆಕ್ರಮಿಸಿಕೊಂಡಿವೆ. ಇದರಿಂದಾಗಿ ಪಟ್ಟಣದ ಶಾಲಾ ಕಾಲೇಜುಗಳಿಗೆ ಬರುವ ಮಕ್ಕಳು, ವಯೋವೃದ್ಧರು ಅನಿವಾರ್ಯವಾಗಿ ರಸ್ತೆಯಲ್ಲೇ ಜೀವ ಕೈಯಲ್ಲಿ ಹಿಡಿದುಕೊಂಡು ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮ ಪಂಚಾಯಿತಿ ಕಚೇರಿಯ ಗೇಟ್ ಮುಂದೆಯೇ ರಸ್ತೆಯ ಬದಿಯಲ್ಲಿ ಕ್ಯಾಂಟೀನ್ ವಾಹನ ಇಟ್ಟುಕೊಂಡಿದ್ದರೂ ಪಂಚಾಯಿತಿ ಅಧ್ಯಕ್ಷರಾಗಲಿ, ಸದಸ್ಯರಾಗಲಿ, ಅಧಿಕಾರಿಗಳಾಗಲೀ ತಲೆಕೆಡಿಸಿಕೊಂಡಿಲ್ಲ. ಇನ್ನೂ ಮುಖ್ಯರಸ್ತೆಯ ಫುಟ್‌ಪಾತ್‌ ಒತ್ತುವರಿ ತೆರವುಗೊಳಿಸುವುದು ದೂರದ ಮಾತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚರಂಡಿ ಕಾಮಗಾರಿ ಅಪೂರ್ಣ

ಮುಖ್ಯ ರಸ್ತೆಯ ಕೆಇಬಿ ಕಚೇರಿಯ ಕಡೆ ಇರುವ ಚರಂಡಿಗಳು ಹೂಳಿನಿಂದ ತುಂಬಿಕೊಂಡಿದ್ದು ಮಳೆ ಬಿದ್ದಾಗ ನೀರೆಲ್ಲವೂ ರಸ್ತೆಯ ಮೇಲೆ, ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ. ಹೀಗಿದ್ದರೂ ಪಂಚಾಯಿತಿ ವತಿಯಿಂದ ಯಾವುದೇ ಚರಂಡಿ ಕಾಮಗಾರಿ ನಡೆದಿಲ್ಲ ಎಂದು ಕೆಇಬಿ ಬಡಾವಣೆಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣದ ಬಳಿಯಿರುವ ಆಟೋ ನಿಲ್ದಾಣದ ಬಳಿಯೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲಿಯವರೆಗೂ ಆಗಿಲ್ಲ. ಇದರಿಂದಲೂ ಮಳೆ ಬಿದ್ದಾಗ ಸಮಸ್ಯೆ ಆಗುತ್ತಿದೆ ಎಂದು ಆಟೋ ಚಾಲಕರು ದೂರುತ್ತಿದ್ದಾರೆ.

ಶಾಸಕರ ನಿರ್ದೇಶನದ ಮೇರೆಗೆ ವಿದ್ಯುತ್ ಕಂಬಗಳ ಬದಲಾವಣೆಗಾಗಿ ಸ್ವಲ್ಪ ತಡವಾಗಿದೆ. ಸೂಪರಿಂಟೆಂಡೆಂಟ್ ಇಂಜಿನಿಯರ್ ಪರಿಶೀಲನೆ ನಡೆಸಿ ಕಾಮಗಾರಿ ನಡೆಸಲು ಸೂಚಿಸಿದ್ದಾರೆ.
ಶಂಕರ್, ಕಾರ್ಯಪಾಲಕ ಎಂಜಿನಿಯರ್
ಹತ್ತು ತಿಂಗಳಿನಿಂದ ಕಾಮಗಾರಿ ಕುಂಟುತ್ತಾ ಸಾಗಿರುವುದರಿಂದ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. ಟ್ರಾಫಿಕ್ ಸಮಸ್ಯೆ ಕೂಡ ಆಗುತ್ತಿದೆ. ಆದಷ್ಟು ಬೇಗ ಶಾಸಕರು ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸಬೇಕು.
ಮಂಜುನಾಥ್, ಖಾಸಗಿ ಶಾಲಾ ಬಸ್ ಚಾಲಕ
ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ದಾರಿಹೋಕರರಿಗೆ ಪಾದಚಾರಿಗಳಿಗೆ ಸಮಸ್ಯೆ ಆಗುತ್ತಿದೆ.
ಬಾಬು, ವಾಹನ ಸವಾರ ಕುದೂರು
ಕುದೂರು ಪಟ್ಟಣದ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಕಾರಣ ಪ್ರತಿದಿನ ಉಂಟಾಗುತ್ತಿರುವ ಸಂಚಾರ ದಟ್ಟಣೆ.
ಕುದೂರು ಪಟ್ಟಣದ ಕೆಇಬಿ ಕಚೇರಿ ಸಮೀಪದ ಅವೈಜ್ಞಾನಿಕವಾಗಿ ನಿರ್ಮಾಣವಾದ ಹೂಳು ತುಂಬಿದ ಚರಂಡಿಯಿಂದ ಮಳೆ ನೀರು ಹರಿಯದೆ ರಸ್ತೆಗೆ ನುಗ್ಗಿರುವುದು.
ಕುದೂರು ಬಸ್ ನಿಲ್ದಾಣದ ಆಟೋ ನಿಲ್ದಾಣದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಮುಂದಕ್ಕೆ ಹರಿಯದೆ ನಿಂತಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.