ಮಾಗಡಿ: ಪಟ್ಟಣದಲ್ಲಿ ಭಾರಿ ಮಳೆಯಿಂದ ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಪರದಾಡುವಂತಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ. ಬೈಕ್ ಸವಾರರು ಹರ ಸಾಹಸಪಟ್ಟು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಮತ್ತು ಮಳೆಯಿಂದ ರಸ್ತೆಗಳು ಕೆಸರು ಗದ್ದೆಗಳಾಗಿವೆ. ಅನೇಕ ಕಡೆ ರಸ್ತೆ ಗುಂಡಿಯಾಗಿ ಮಳೆ ನೀರು ನಿಂತಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನಿಂದ ಮಾಗಡಿ ಮಾರ್ಗವಾಗಿ ಕುಣಿಗಲ್, ಹಾಸನ, ಮಂಗಳೂರು, ಹುಲಿಯೂರುದುರ್ಗ, ಮಂಡ್ಯ, ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬರುತ್ತಿರುವುದರಿಂದ ಸಮಸ್ಯೆ ತೀವ್ರವಾಗಿದೆ.
ಮಾಗಡಿ ಹೊಸಪೇಟೆಯಿಂದ ಸೋಮೇಶ್ವರ ಕಾಲೊನಿವರೆಗೂ ಮತ್ತು ಕೆಂಪೇಗೌಡ ವೃತ್ತದಿಂದ ಎನ್ಇಎಸ್‌ವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಈ ಎರಡೂ ಮಾರ್ಗಗಳಲ್ಲಿ ಸಂಚಾರ ಮಾಡುವುದು ದೊಡ್ಡ ಸವಾಲಾಗಿದೆ. ರಸ್ತೆ ಕಾಮಗಾರಿ ಯಾವಾಗ ಮುಗಿಯುತ್ತದೆ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.
ಎನ್ಇಎಸ್ ವೃತ್ತದಿಂದ ಹೊಸಪೇಟೆಗೆ ತೆರಳುವ ಮುಖ್ಯ ರಸ್ತೆಯ ತಿರುವಿನಲ್ಲಿ ಮಳೆ ನೀರು ನಿಂತಿದೆ. ಈ ಸಮಸ್ಯೆ ಹೋಗಲಾಡಿಸಲು ಶಾಸಕ ಬಾಲಕೃಷ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಗುಡೇಮಾರನಹಳ್ಳಿಯಿಂದ ಬರುವ ರಾಜ್ಯ ಹೆದ್ದಾರಿ ಸುಂಕದ ರಸ್ತೆಯಾಗಿದ್ದರೂ ಹೆದ್ದಾರಿ ಪ್ರಾಧಿಕಾರ ವಾಹನ ಸವಾರರಿಗೆ ಅನುಕೂಲ ಮಾಡಿಕೊಡದೆ ದುಡ್ಡು ದೋಚುತ್ತಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆ-ಶಿಫ್ ವತಿಯಿಂದ ರಸ್ತೆ ವಿಸ್ತರಣೆ ನಡೆದಿದೆ. ಮಾಗಡಿ-ಬೆಂಗಳೂರು ಪಟ್ಟಣದ ಮುಖ್ಯರಸ್ತೆಗೆ ವೇಗ ನೀಡಿ ಒಂದು ಬದಿಯಲ್ಲಿ ಡಾಂಬರು ಹಾಕುವ ಮೂಲಕ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಲೋಕೇಶ್ ಒತ್ತಾಯಿಸಿದ್ದಾರೆ.
ದೀಪಾವಳಿ ಹಬ್ಬಕ್ಕೆ ಊರುಗಳಿಗೆ ತೆರಳುತ್ತಿರುವ ವಾಹನ ಸವಾರರು ರಸ್ತೆ ದುಃಸ್ಥಿತಿ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹಾಕಿ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದ್ವಿಚಕ್ರ ವಾಹನದಲ್ಲಿ ಈ ರಸ್ತೆಯಲ್ಲಿ ಸಂಚರಿಸವುದು ಅಸಾಧ್ಯ ಎಂದು ಜಾಲತಾಣಗಳಲ್ಲಿ ವ್ಯಾಪಕವಾಗಿ ಟೀಕೆ ವ್ಯಕ್ತವಾಗಿದೆ.
ಮಾಗಡಿ- ಬೆಂಗಳೂರು ಮುಖ್ಯರಸ್ತೆ ಈಗಾಗಲೇ ಎಂಟು ವರ್ಷದಿಂದ ಪೂರ್ಣವಾಗಿಲ್ಲ. ಎನ್ಇಎಸ್ ರಸ್ತೆ ಹಾಗೂ ಆರ್ ಆರ್ ರಸ್ತೆ ಕಾಮಗಾರಿ ಕೂಡ ಪ್ರಾರಂಭವಾಗಿದ್ದು ದ್ವಿಚಕ್ರವಾಹನ ಸವಾರರು ಹೇಗೆ ಸಂಚಾರ ಮಾಡಬೇಕು. ಕೂಡಲೇ ಕಾಮಗಾರಿ ಮುಗಿಸಲು ಗುತ್ತಿಗೆದಾರರು ಮುಂದಾಗಬೇಕು ಎಂದು ಪುರಸಭೆ ಸದಸ್ಯ ಎಂ.ಎನ್.ಮಂಜುನಾಥ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.