ADVERTISEMENT

ಭೂ ವಿವಾದ: ಪೊಲೀಸ್ ಎದುರೇ ಕುಟುಂಬದ ಮೇಲೆ ರೌಡಿಶೀಟರ್ ಹಲ್ಲೆ

ಉಪನಗರ ಯೋಜನೆ ಜೆಎಂಸಿ ಸರ್ವೆಗೆ ಅಧಿಕಾರಿಗಳು ಬಂದಾಗ ಘಟನೆ; ಹಲ್ಲೆ ತಡೆಯಲಾಗದೆ ಕೈ ಚೆಲ್ಲಿದ ಪೊಲೀಸ್

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 7:10 IST
Last Updated 27 ಸೆಪ್ಟೆಂಬರ್ 2025, 7:10 IST
   

ಬಿಡದಿ (ರಾಮನಗರ): ಹೋಬಳಿಯ ಕೆಂಪಯ್ಯನಪಾಳ್ಯದ ತಾಯಪ್ಪನದೊಡ್ಡಿಯಲ್ಲಿ ಮಹಿಳೆಯೊಬ್ಬರಿಗೆ ಸೇರಿದ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ ರೌಡಿ ಶೀಟರ್ ಹಾಗೂ ಆತನ ಕುಟುಂಬ, ಪೊಲೀಸರ ಸಮ್ಮುಖದಲ್ಲೇ ಮಹಿಳೆ ಮತ್ತು ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದೆ.

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ (ಜಿಬಿಐಟಿ) ವ್ಯಾಪ್ತಿಗೆ ಬರುವ ಈ ಗ್ರಾಮಕ್ಕೆ ಜಂಟಿ ಅಳತೆ ಪ್ರಮಾಣೀಕರಣ (ಜೆಎಂಸಿ) ಸರ್ವೆ ಸಲುವಾಗಿ ಶುಕ್ರವಾರ ಅಧಿಕಾರಿಗಳ ತಂಡ ಜಮೀನಿಗೆ ಭೇಟಿ ನೀಡಿತ್ತು. ಆಗ ರೌಡಿ ಶೀಟರ್ ಮೊಗಪ್ಪ ಮತ್ತು ಕುಟುಂಬ ಕೃತ್ಯ ಎಸಗಿದೆ.

ಘಟನೆಗೆ ಸಂಬಂಧಿಸಿದಂತೆ ಬಿಡದಿ ಠಾಣೆ ಪೊಲೀಸರು ತಾಯಪ್ಪನದೊಡ್ಡಿಯ ಕರಿಯಪ್ಪ, ದೇವಿರಮ್ಮ, ಮೊಗಪ್ಪ ಅಲಿಯಾಸ್ ಜಿಮ್ಮು ಹಾಗೂ ವಿಶ್ವನಾಥ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಕರಿಯಪ್ಪ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದು (ಎಂಒಬಿ), ಆತನ ಪುತ್ರ ಮೊಗಪ್ಪ ಬಿಡದಿ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾನೆ.

ADVERTISEMENT

ಆಗಾಗ ಜಗಳ: ಸುಮಿತ್ರ ಬಿ.ಕೆ ಅವರ ಅತ್ತೆ ಮಾದಮ್ಮ ಕೆಂಪಯ್ಯನಪಾಳ್ಯ ಗ್ರಾಮದ ತಾಯಪ್ಪನದೊಡ್ಡಿಯ ಸರ್ವೆ ನಂ. 21/13ರಲ್ಲಿ 2 ಎಕರೆ ಜಮೀನು ಹೊಂದಿದ್ದು, ಸ್ವಾಧೀನದಲ್ಲಿದ್ದಾರೆ. ‘ಈ ಜಮೀನು ತಮಗೆ ಸೇರಿದ್ದು, ನೀವ್ಯಾರು ಈ ಕಡೆ ಬರಬಾರದು’ ಎಂದು ಕರಿಯಪ್ಪ ಮತ್ತು ಮೊಗಪ್ಪ ಇಬ್ಬರೂ ಸುಮಿತ್ರ ಕುಟುಂಬವನ್ನು ಹೆದರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ಜಮೀನಿಗೆ ಜೆಎಂಸಿ ತಂಡ ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪೊಲೀಸರೊಂದಿಗೆ ಭೇಟಿ ನೀಡಿ, ಸುಮಿತ್ರ ಕುಟುಂಬದ ಸಮ್ಮುಖದಲ್ಲಿ ಅಳತೆ ಕಾರ್ಯಕ್ಕೆ ಮುಂದಾಯಿತು. ಆಗ ಸ್ಥಳಕ್ಕೆ ಬಂದ ಕರಿಯಪ್ಪ ಮತ್ತು ಕುಟುಂಬ, ‘ಈ ಜಮೀನು ನಮಗೆ ಸೇರಿದ್ದು’ ಎಂದು ತಗಾದೆ ತೆಗೆದು ಅವಾಚ್ಯವಾಗಿ ಸುಮಿತ್ರ ಅವರಿಗೆ ನಿಂದಿಸಿತು.

ಈ ವೇಳೆ ಮಾತಿಗೆ ಮಾತು ಬೆಳೆದಾಗ, ಕರಿಯಪ್ಪ ಕುಟುಂಬವು ಸುಮಿತ್ರ ಕುಟುಂಬದವರ ಮೇಲೆ ಕೈ ಹಾಗೂ ಕಟ್ಟಿಗೆಯಿಂದ ಹಲ್ಲೆ ನಡೆಸಿದೆ. ಸ್ಥಳದಲ್ಲಿದ್ದ ಏಕೈಕ ಪೊಲೀಸ್ ಕಾನ್‌ಸ್ಟೆಬಲ್ ಜಗಳ ಬಿಡಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಹಲ್ಲೆ ಮಾಡಿರುವ ಕರಿಯಪ್ಪ, ಕೊಲೆ ಬೆದರಿಕೆ ಸಹ ಹಾಕಿದ್ದಾನೆ ಎಂದು ಪೊಲಿಸರು ಹೇಳಿದರು.

ಹಲ್ಲೆಗೊಳಗಾದ ಸುಮಿತ್ರ ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಬಿಎನ್‌ಎಸ್ ಕಲಂ 329 (3) (ಕ್ರಿಮಿನಲ್ ಅತಿಕ್ರಮಣ), 352 (ಶಾಂತಿಗೆ ಭಂಗ), 115 (2) (ಉದ್ದೇಶಪೂರ್ವಕವಾಗಿ ಗಾಯಗೊಳಿಸುವುದು), 118 (1) ಅಪಾಯಕಾರಿ ಅಸ್ತ್ರ ಬಳಸಿ ಗಾಯಗೊಳಿಸುವುದು, 74 (ಮಹಿಳೆ ಮೇಲೆ ದೌರ್ಜನ್ಯ) ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮೊಗಪ್ಪನ ಗಡಿಪಾರಿಗೆ ಪತ್ರ
ಅಪರಾಧ ಹಿನ್ನೆಲೆಯುಳ್ಳ ತಾಯಪ್ಪನದೊಡ್ಡಿಯ ಕರಿಯಪ್ಪನ ಮಗ ಮೊಗಪ್ಪ ಅಲಿಯಾಸ್ ಜಿಮ್ಮು ರೌಡಿ ಶೀಟರ್‌ ಆಗಿದ್ದಾನೆ. ಆತನ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದ ಆತ, ತನ್ನ ಚಾಳಿ ಮುಂದುವರಿಸಿದ್ದಾನೆ. ಆತನನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಬಿಡದಿ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.