ADVERTISEMENT

ಪರಿಸರ ಕಾಳಜಿಯ ಬಹುದೊಡ್ಡ ಪ್ರೇರಣೆ‌ ಸಾಲುಮರದ ತಿಮ್ಮಕ್ಕ

ಹಳ್ಳಿಯಿಂದ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದ್ದ ಕೀರ್ತಿ; ನನಸಾಗದೆ ಉಳಿದ ಹೆರಿಗೆ ಆಸ್ಪತ್ರೆಯ ಕನಸು

ಓದೇಶ ಸಕಲೇಶಪುರ
Published 15 ನವೆಂಬರ್ 2025, 3:49 IST
Last Updated 15 ನವೆಂಬರ್ 2025, 3:49 IST
<div class="paragraphs"><p>ಹುಲಿಕಲ್– ಕುದೂರು ರಸ್ತೆ ಬದಿ ಸಾಲುಮರದ ತಿಮ್ಮಕ್ಕ ಅವರು ಬೆಳೆಸಿರುವ ಮರಗಳು</p></div>

ಹುಲಿಕಲ್– ಕುದೂರು ರಸ್ತೆ ಬದಿ ಸಾಲುಮರದ ತಿಮ್ಮಕ್ಕ ಅವರು ಬೆಳೆಸಿರುವ ಮರಗಳು

   

ರಾಮನಗರ: ಮಕ್ಕಳಿಲ್ಲದ ಕೊರಗಿಗೆ ರಸ್ತೆ ಬದಿ ಸಾಲು ಮರಗಳನ್ನು ನೆಟ್ಟು ಬೆಳೆಸಿದ್ದ ತಿಮ್ಮಕ್ಕ ಪರಿಸರ ಕಾಳಜಿಗೆ ಬಹುದೊಡ್ಡ ಪ್ರೇರಣೆ. ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್‌ನಲ್ಲಿ ಅವರು ಮಾಡಿದ ಈ ನಿಸ್ವಾರ್ಥ ಕೆಲಸವು, ತಿಮ್ಮಕ್ಕ ಅವರ ಹೆಸರನ್ನು ಹಳ್ಳಿಯಿಂದ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಿತು. ಅಂದಹಾಗೆ, ತಿಮ್ಮಕ್ಕನ ಪರಿಸರ ಪರಿಚಾರಿಕೆಯನ್ನು ನಾಡಿಗೆ ಪರಿಚಯಿಸಿದ ಕೀರ್ತಿ ‘ಪ್ರಜಾವಾಣಿ’ ದಿನಪತ್ರಿಕೆಯದ್ದು.

1994 ಜೂನ್ 19ರಂದು ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿದ್ದ ಅರೆಕಾಲಿಕ ವರದಿಗಾರ ಎಂ.ವಿ. ನೆಗಳೂರ ಅವರು ಬರೆದಿದ್ದ ‘ಸಾಲುಮರಗಳ ಸಂಗಾತಿ ತಿಮ್ಮಕ್ಕ’ ಎಂಬ ಲೇಖನವು, ತಿಮ್ಮಕ್ಕನ ಹೆಸರಿನ ಮುಂದೆ ‘ಸಾಲುಮರ’ ಎಂಬ ಪದವು ಶಾಶ್ವತವಾಗಿ ಉಳಿಯುವಂತೆ ಮಾಡಿ ಕೀರ್ತಿ ತಂದಿತ್ತು. ಅಷ್ಟಕ್ಕೆ ಸುಮ್ಮನಾಗದ ತಿಮ್ಮಕ್ಕ, ಮಂದಿನ ತಮ್ಮ ಇಡೀ ಜೀವನವನ್ನು ಪರಿಸರ ಸೇವೆಗೆ ಮುಡಿಪಿಟ್ಟು ‘ವೃಕ್ಷಮಾತೆ’ ಎನಿಸಿಕೊಂಡರು.

ADVERTISEMENT

ಗಿಡಮರಗಳ ಲಾಲನೆ–ಪಾಲನೆ ಮತ್ತು ಪರಿಸರ ಸಂರಕ್ಷಣೆಗೆ ನಿಂತ ಸಾವಿರಾರು ಪರಿಸರ ಪ್ರೇಮಿಗಳಿಗೆ ಆದರ್ಶವಾದರು. ಅಕ್ಷರ ಜ್ಞಾನ ಇಲ್ಲದೆಯೂ ಜಗತ್ತು ಮೆಚ್ಚುವಂತಹ ಕಾರ್ಯ ಮಾಡಿದ ಅವರು ಹುಲಿಕಲ್ ಹೆಸರನ್ನು ವಿಶ್ವಕ್ಕೆ ಪರಿಚಯಿಸಿದರು. ಪರಿಸರ ಸಂರಕ್ಷಣೆ ವಿಚಾರದಲ್ಲಿ ರಾಷ್ಟ್ರ–ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರಿದರು.

ರಾಜ್ಯ ಸರ್ಕಾರದ ಪರಿಸರ ರಾಯಭಾರಿಯೂ ಆಗಿದ್ದ ಅವರು, ಇಳಿ ವಯಸ್ಸನ್ನೂ ಲೆಕ್ಕಿಸದೆ ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಕಡೆವರೆಗೂ ಭಾಗವಹಿಸುತ್ತಲೇ ಬಂದಿದ್ದರು. ಸರ್ಕಾರ ಅವರ ಹೆಸರಿನಲ್ಲಿ ರಾಜ್ಯದಾದ್ಯಂತ ಅಭಿವೃದ್ಧಿಪಡಿಸಿರುವ ವೃಕ್ಷೋದ್ಯಾನಗಳು ಸರ್ಕಾರ ಮತ್ತು ಜನರು ಮರಗಳ ‘ಮಹಾತಾಯಿ’ಯ ಮೇಲಿಟ್ಟಿರುವ ಗೌರವಕ್ಕೆ ಸಾಕ್ಷಿಯಾಗಿದೆ.

ಫೌಂಡೇಷನ್ ಸ್ಥಾಪನೆ: ತಿಮ್ಮಕ್ಕ ಅವರ ಹೆಸರಿನಲ್ಲಿ ಅವರ ದತ್ತುಪುತ್ರ ಬಳ್ಳೂರು ಉಮೇಶ್ ಅವರು 2015ರಲ್ಲಿ ‘ಸಾಲುಮರದ ತಿಮ್ಮಕ್ಕ ಇಂಟರ್‌ನ್ಯಾಷನಲ್ ಫೌಂಡೇಷನ್’ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ ನೀಡಿದವರನ್ನು ಗುರುತಿಸಿ ಪ್ರತಿ ವರ್ಷ ಫೌಂಡೇಷನ್‌ನಿಂದ ‘ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್’ ನೀಡಲಾಗುತ್ತಿದೆ.

ಗಿಡ ನೆಡುವುದು, ಪರಿಸರ ಜಾಗೃತಿ, ಅಭಿಯಾನ ಸೇರಿದಂತೆ ಪ್ರಕೃತಿ ಪರ ಚಟುವಟಿಕೆಗಳಿಗೆ ತಿಮ್ಮಕ್ಕನ ಹೆಸರು ಸದಾ ಸ್ಪೂರ್ತಿಯಾಗಿದೆ. ಸರ್ಕಾರದ ಪರಿಸರ ರಾಯಭಾರಿಯಾಗಿದ್ದ ತಿಮ್ಮಕ್ಕ ಅವರ ಹೆಸರಿನಲ್ಲಿ ರಾಜ್ಯದಾದ್ಯಂತ ಉದ್ಯಾನಗಳು, ವೃಕ್ಷೋದ್ಯಾನಗಳು ತಲೆ ಎತ್ತಿವೆ. ಕೊನೆ ಉಸಿರಿರುವವರೆಗೆ ‍ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತಿಮ್ಮಕ್ಕ ತೊಡಗಿಸಿಕೊಂಡು ಬಂದಿದ್ದರು.

ನನಸಾಗದ ಕನಸು: ಮರಗಳನ್ನೇ ಮಕ್ಕಳಂತೆ‌ ಬೆಳೆಸಿ ವಿಶ್ವಖ್ಯಾತಿ ಗಳಿಸಿದ್ದ ಸಾಲುಮರದ‌ ತಿಮ್ಮಕ್ಕ ಅವರಿಗೆ, ತಮ್ಮೂರಿನಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬ ಕನಸು ಮಾತ್ರ ನನಸಾಗಲೇ ಇಲ್ಲ. ತಮಗೆ ಮಕ್ಕಳಿಲ್ಲದಿದ್ದರೂ, ತಮ್ಮೂರಿನ ಹೆಣ್ಣು ಮಕ್ಕಳು ಹೆರಿಗೆಗಾಗಿ ದೂರದ ಆಸ್ಪತ್ರೆಗೆ ಹೋಗಲಾಗದೆ ಪರದಾಡುತ್ತಿದ್ದನ್ನು ತಿಮ್ಮಕ್ಕ ಕಣ್ಣಾರೆ ಕಂಡಿದ್ದರು. ಹಲವರಿಗೆ ಮನೆಯಲ್ಲೇ‌ ಹೆರಿಗೆಯಾಗಿ ಆರೋಗ್ಯ ಸಮಸ್ಯೆ ಉಂಟಾಗುವುದನ್ನು ನೋಡಿ ಮರುಗಿದ್ದರು.

ಗರ್ಭಿಣಿಯರ ಹೆರಿಗೆಗೆ ಯಾವುದೇ ಸಮಸ್ಯೆಯಾಗಬಾರದೆಂದು ತಿಮ್ಮಕ್ಕ ಅವರು ‘ನಮ್ಮೂರಿನಲ್ಲಿ ಒಂದು ಹೆರಿಗೆ ಆಸ್ಪತ್ರೆ ಕಟ್ಟಿಸಿ ಪುಣ್ಯ ಕಟ್ಟಿಕೊಳ್ಳಿ’ ಎಂದು ವಿವಿಧ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಗೆ ಕೈ ಮುಗಿದು ಮನವಿ ಮಾಡುತ್ತಲೇ ಬಂದಿದ್ದರು. ಆದರೆ, ಅವರ ಕನಸು ಮಾತ್ರ ಕೈಗೂಡಲಿಲ್ಲ.

ಜಾಗ ಮಂಜೂರಾಗಿತ್ತು: ಅಜ್ಜಿಯ ಬೇಡಿಕೆಗೆ ದಶಕದ ಹಿಂದೆ ಸ್ಪಂದಿಸಿದ್ದ ರಾಜ್ಯ ಸರ್ಕಾರ, ಗ್ರಾಮ ಪಂಚಾಯಿತಿ ಕೇಂದ್ರವಾದ ಹುಲಿಕಲ್ ಗ್ರಾಮದಲ್ಲಿ ಅಜ್ಜಿ ಹೆಸರಿನಲ್ಲೇ ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡಲು ಆಲೋಚಿಸಿತ್ತು. ಅದಕ್ಕಾಗಿ ಎರಡು ಎಕರೆ ಜಾಗ ಸಹ ಮಂಜೂರು‌ ಮಾಡಿತ್ತು. ಆದರೆ, ವಿವಿಧ ಕಾರಣಗಳಿಗಾಗಿ ಆಸ್ಪತ್ರೆ ತಲೆ ಎತ್ತಲಿಲ್ಲ.

‘ಆಸ್ಪತ್ರೆಗಾಗಿ ಅಜ್ಜಿ ಮುಖ್ಯಮಂತ್ರಿಗಳಿಂದಿಡಿದು ಸಚಿವರು ಹಾಗೂ ಅಧಿಕಾರಿಗಳಿಗೆ ಕೈ ಮುಗಿದು ಬೇಡಿಕೊಂಡಿದ್ದರು. ಆದರೆ, ಅಜ್ಜಿ ಬಯಸಿದ ಆಸ್ಪತ್ರೆ ನಿರ್ಮಾಣವಾಗಲಿಲ್ಲ. ನಮ್ಮೂರಿನಲ್ಲಿ ಆಸ್ಪತ್ರೆಯಾಗಲಿಲ್ಲ ಎಂಬ ನೋವು ಅಜ್ಜಿಯನ್ನು ಕಡೆವರೆಗೆ ಕಾಡುತ್ತಲೇ ಇತ್ತು’ ಎಂದು ತಿಮ್ಮಕ್ಕ ಅವರ ಪುತ್ರ ಬಳ್ಳೂರು ಉಮೇಶ್ ‘ಪ್ರಜಾವಾಣಿ’ ಜೊತೆ ಬೇಸರ ತೋಡಿಕೊಂಡರು.

‘ನಮ್ಮೂರಿಗೆ ಮಂಜೂರಾಗಿದ್ದ ಆಸ್ಪತ್ರೆಯನ್ನು ರದ್ದುಪಡಿಸಿ, ಬೇರೆ ಊರಿಗೆ ಮಂಜೂರು ಮಾಡಲಾಯಿತು. ಆಸ್ಪತ್ರೆಗಾಗಿ ಊರಿನವರು‌ ಸಹ ಅಜ್ಜಿಗೆ ದನಿಯಾಗಿ ಎಷ್ಟೇ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ’ ಎಂದು ಸ್ಥಳೀಯ ಮುಖಂಡ ಕಿರಣ್ ಬೇಸರ ವ್ಯಕ್ತಪಡಿಸಿದರು.

ಸಾಲುಮರದ ತಿಮ್ಮಕ್ಕ ಅವರ ಹುಲಿಕಲ್ ಗ್ರಾಮಕ್ಕೆ ಭೇಟಿ ನೀಡಿದ್ದ ಕ್ರಾಂತಿಕಾರಿ ಕವಿ ಸಿದ್ದಲಿಂಗಯ್ಯ
ಹುಲಿಕಲ್‌ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಅವರಿಗೆ ಸರ್ಕಾರ ಕೊಟ್ಟಿದ್ದ ಮನೆ
ರಸ್ತೆ ವಿಸ್ತರಣೆಗಾಗಿ ತಾವು ನೆಟ್ಟಿರುವ ಸಾಲುಮರಗಳನ್ನು ಕಡಿಯಬೇಡಿ ಎಂದು ಸಾಲುಮರದ ತಿಮ್ಮಕ್ಕ ಅವರು 2019ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಕೈ ಮುಗಿದು ಮನವಿ ಮಾಡಿದ್ದ ಕ್ಷಣ. ದತ್ತುಪುತ್ರ ಬಳ್ಳೂರು ಉಮೇಶ್ ಅಂದು ಸಚಿವರಾಗಿದ್ದ ಡಾ. ಜಿ. ಪರಮೇಶ್ವರ್ ಇದ್ದಾರೆ

ಮರಗಳಿಗೆ ಕೊಡಲಿ ಪೆಟ್ಟು ತಪ್ಪಿಸಿದ್ದರು

ಪತಿ ಜೊತೆಗೂಡಿ ತಾನು ನೆಟ್ಟಿದ್ದ ಗಿಡಗಳನ್ನು ಪೋಷಿಸಿ ಬೆಳೆಸುವ ಜೊತೆಗೆ ಅವುಗಳ ರಕ್ಷಣೆಗಾಗಿ ತಿಮ್ಮಕ್ಕ ಅವರು ನಿರಂತರವಾಗಿ ಹೋರಾಡಿಕೊಂಡೇ ಬಂದಿದ್ದರು. ಸ್ಥಳೀಯರು ಮರಗಳ ರೆಂಬೆ ಕೊಂಬೆಗಳನ್ನು ಕಡಿದು ಹಾಳು ಮಾಡುವುದರ ವಿರುದ್ಧ ಸಿಡಿಯುತ್ತಿದ್ದ ತಿಮ್ಮಕ್ಕ ಆ ವಿಷಯದಲ್ಲಿ ಎಂದಿಗೂ ರಾಜಿಯಾದವರಲ್ಲ. ಹಲಗೂರಿನಿಂದ ಬಾಗೇಪಲ್ಲಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ವಿಸ್ತರಣೆ ಮಾಡಲು ಹಿಂದಿನ ಮೈತ್ರಿ ಸರ್ಕಾರ ಮುಂದಾದಾಗ ತಿಮ್ಮಕ್ಕ ಅವರು ಬೆಳ ಸಾಲುಮರಗಳನ್ನೇ ನೆಲಕ್ಕೆ ಉರುಳಿಸುವ ಯತ್ನ ನಡೆದಿತ್ತು. ಈ ವಿಷಯ ತಿಮ್ಮಕ್ಕ ಅವರ ಗಮನಕ್ಕೆ ಬರುತ್ತಿದ್ದಂತೆ ಅದರ ವಿರುದ್ಧ ದನಿ ಎತ್ತಿದರು. ಪರಿಸರ ಪ್ರೇಮಿಗಳು ಸಹ ದನಿಗೂಡಿಸಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ತಿಮ್ಮಕ್ಕ ಮರಗಳನ್ನು ಕಡಿಯದಂತೆ ಕೈ ಮುಗಿದು ಬೇಡಿದ್ದರು. ಅಜ್ಜಿಯ ಮಾತಿಗೆ ಸ್ಪಂದಿಸಿದ ಎಚ್‌ಡಿಕೆ ಸಾಲುಮರಗಳನ್ನು ರಕ್ಷಿಸುವ ಸಲುವಾಗಿ ರಸ್ತೆಯ ಪಥವನ್ನೇ ಬದಲಿಸುವಂತೆ ಸೂಚನೆ ನೀಡಿ ಮರಗಳನ್ನು ಉಳಿಸಿದ್ದರು. ಹುಲಿಕಲ್‌ನಲ್ಲಿ ನೀರವ ಮೌನ ಸಾಲುಮರಗಳನ್ನು ಬೆಳೆಸಿ ತಮ್ಮೂರಿನ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸುದ್ದಿ ತಿಳಿಯುತ್ತಿದ್ದಂತೆ ಹುಲಿಕಲ್‌ನಲ್ಲಿ ನೀರವ ಮೌನ ಆವರಿಸಿತ್ತು. ಸಂಬಂಧಿಕರು ಕಣ್ಣೀರು ಹಾಕಿದರು. ಪಾಳುಬಿದ್ದಂತಿದ್ದ ಅಜ್ಜಿಯ ನಿವಾಸವನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ವಚ್ಛಗೊಳಿಸಿದರು. ಅಜ್ಜಿ ಫೋಟೊ ಫ್ಲೆಕ್ಸ್ ಅಳವಡಿಸಿ ನಿಧನಕ್ಕೆ ಶ್ರಧ್ದಾಂಜಲಿ ಅರ್ಪಿಸಿದರು. ಸಂಜೆ 4.30ರ ಸುಮಾರಿಗೆ ಗ್ರಾಮಕ್ಕೆ ಶವ ಬಂದಾಗ ಶಾಸಕ ಎಚ್.ಸಿ. ಬಾಲಕೃಷ್ಣ ಸ್ವಾಮೀಜಿಗಳು ಸ್ಥಳಿಯ ಜನಪ್ರತಿನಿಧಿಗಳು ಸೇರಿದಂತೆ ಗ್ರಾಮಸ್ಥರು ಹೂವಿನಹಾರ ಹಾಕಿ ಹಿರಿಯ ಜೀವಕ್ಕೆ ನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.