ADVERTISEMENT

ರಾಮನಗರ | ಸರ್ಕಾರಿ ಶಾಲೆ ವಿಲೀನಕ್ಕೆ ವಿರೋಧ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:38 IST
Last Updated 19 ಫೆಬ್ರುವರಿ 2026, 4:38 IST
ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ರಾಮನಗರ ತಾಲ್ಳೂಕಿನ ಸಂಗಬಸವನದೊಡ್ಡಿ ಸರ್ಕಾರಿ ಶಾಲೆಯ ವಿಲೀನ ವಿರೋಧಿ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು
ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ರಾಮನಗರ ತಾಲ್ಳೂಕಿನ ಸಂಗಬಸವನದೊಡ್ಡಿ ಸರ್ಕಾರಿ ಶಾಲೆಯ ವಿಲೀನ ವಿರೋಧಿ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು   

ರಾಮನಗರ: ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ತಾಲ್ಳೂಕಿನ ಸಂಗಬಸವನದೊಡ್ಡಿ ಸರ್ಕಾರಿ ಶಾಲೆಯನ್ನು ಮಾಯಗಾನಹಳ್ಳಿ ಕೆಪಿಎಸ್ ಮ್ಯಾಗ್ನೇಟ್ ಶಾಲೆಯೊಂದಿಗೆ ವಿಲೀನ ಮಾಡಲು ಶಿಕ್ಷಣ ಇಲಾಖೆ ಮುಂದಾಗಿರುವುದನ್ನು ವಿರೋಧಿಸಿ, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಒ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಗ್ರಾಮದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನವಾಜ್, ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ) ಅನ್ವಯ ಮಗುವಿನ ಮನೆಯ ಹತ್ತಿರದಲ್ಲೇ ಶಾಲೆಯಿರಬೇಕು ಎಂಬ ನಿಯಮವಿದೆ. ಆದರೆ ಮ್ಯಾಗ್ನೆಟ್ ಯೋಜನೆಯು ಈ ಸಾಂವಿಧಾನಿಕ ಹಕ್ಕನ್ನು ನೇರವಾಗಿ ಉಲ್ಲಂಘಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೆಪಿಎಸ್ ಮ್ಯಾಗ್ನೆಟ್ ಯೋಜನೆಯು ಗ್ರಾಮೀಣ ಭಾಗದ ಬಡ ಮಕ್ಕಳನ್ನು ಅಕ್ಷರದಿಂದ ವಂಚಿಸುವ ವ್ಯವಸ್ಥಿತ ಸಂಚಾಗಿದೆ. ಹಳ್ಳಿಗಳ ಶಾಲೆಗಳನ್ನು ದೂರದ ಕೆಪಿಎಸ್ ಶಾಲೆಗೆ ವಿಲೀನ ಮಾಡುವುದರಿಂದ ಹಳ್ಳಿ ಮಕ್ಕಳು ಶಾಲೆಯನ್ನು ತೊರೆಯುತ್ತಾರೆ. ಇದೀಗ ಮಾಯಗಾನಹಳ್ಳಿಯಲ್ಲಿ ಕೆಪಿಎಸ್ ಶಾಲೆ ಆರಂಭಿಸಿ ಸಂಗಬಸವನದೊಡ್ಡಿ ಶಾಲೆಯನ್ನು ವಿಲೀನ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ’ ಎಂದರು.

‘ಸರ್ಕಾರದ ಈ ನಡೆಯನ್ನು ನಮ್ಮ ಸಂಘಟನೆಯು ಬಲವಾಗಿ ವಿರೋಧಿಸುತ್ತದೆ. ಈ ಕುರಿತು, ಜಿಲ್ಲೆಯಾದ್ಯಂತ ಗ್ರಾಮಗಳ ಮಟ್ಟದಲ್ಲಿ ಜನ ಜಾಗೃತಿ ಮೂಡಿಸಲಾಗುತ್ತಿದೆ. ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯುವವರೆಗೆ ಸಂಘಟನೆಯು ಯೋಜನೆ ವಿರುದ್ಧ ಹೋರಾಟ ನಡೆಸಲಿದೆ’ ಎಂದು ಹೇಳಿದರು.

ADVERTISEMENT

ವಿದ್ಯಾರ್ಥಿಗಳು, ಪೋಷಕರು ಹಾಗೂ ಸಂಘಟನೆ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.