
ರಾಮನಗರ: ‘ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯದಿಂದ ರಾಷ್ಟ್ರೀಯ ಏಕತಾ ದಿನ-ಸರ್ದಾರ್@150 ಏಕತಾ ಪಾದಯಾತ್ರೆಯನ್ನು ನ. 18ರಂದು ಹಮ್ಮಿಕೊಳ್ಳಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಈ ಏಕತಾ ಪಾದಯಾತ್ರೆ ಯಶಸ್ವಿಗೊಳಿಸಲು ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.
‘ನ. 25ರೊಳಗೆ ಈ ಕಾರ್ಯಕ್ರಮ ದೇಶದ ಪ್ರತಿ ಜಿಲ್ಲೆಯಲ್ಲೂ ನಡೆಯಲಿದೆ. ಜಿಲ್ಲೆಯಲ್ಲಿ ನಡೆಯುವ ಏಕತಾ ಪಾದಯಾತ್ರೆಯಲ್ಲಿ ಶಾಲಾ– ಕಾಲೇಜು ವಿದ್ಯಾರ್ಥಿಗಳು, ಎನ್‌ಎಸ್‌ಎಸ್, ಎನ್‌ಸಿಸಿ ಕೆಡೆಟ್‌ಗಳು, ಎಲ್ಲಾ ಸಂಘ-ಸಂಸ್ಥೆಗಳು, ಸ್ವಯಂ ಸೇವಕರು, ನಾಗರಿಕರು, ಜನಪ್ರತಿನಿಧಿಗಳು, ಸರ್ಕಾರಿ ನೌಕರರು, ಸಿಬ್ಬಂದಿ ಭಾಗವಹಿಸಬೇಕು’ ಎಂದು ತಿಳಿಸಿದರು.
‘ನಾಲ್ಕೈದು ಕಿ.ಮೀ. ಏಕತಾ ಪಾದಯಾತ್ರೆ ನಡೆಯಲಿದೆ. ಕಾರ್ಯಕಮಕ್ಕೆ ಚಾಲನೆ ನೀಡುವ ಸ್ಥಳದಲ್ಲಿ ಪುಟ್ಟ ವೇದಿಕೆ, ಬ್ಯಾನರ್, ಧ್ವನಿವರ್ಧಕ ಹಾಗೂ ವಾಹನ, ಟೀ ಶರ್ಟ್‌ಗಳು ಸೇರಿದಂತೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು’ ಎಂದು ಮೈ ಭಾರತ್‌ನ ಜಿಲ್ಲಾ ಯುವ ಅಧಿಕಾರಿ ಶ್ರೀವಾಣಿ ಅವರಿಗೆ ಸೂಚಿಸಿದರು.
‘ಪೊಲೀಸ್, ಲೋಕೋಪಯೋಗಿ ಇಲಾಖೆ, ರಾಮನಗರ ನಗರಸಭೆ, ಸಾರ್ವಜನಿಕ ಹಾಗೂ ಪದವಿ ಪೂರ್ವ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಕ್ರೀಡಾ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಪಾದಯಾತ್ರೆ ನಡೆಯುವ ರಸ್ತೆಯ ಇಕ್ಕೆಲಗಳಲ್ಲಿ ಕಸ ಹಾಗೂ ತ್ಯಾಜ್ಯಗಳಿಲ್ಲದಂತೆ ಸ್ವಚ್ಛಗೊಳಿಸಬೇಕು’ ಎಂದರು.
‘ಸಾರ್ವಜನಿಕ ಶೌಚಾಲಯಗಳ ಸ್ಪಚ್ಚತೆ ಕಾಪಾಡಿಕೊಳ್ಳಬೇಕು. ಪಾದಯಾತ್ರೆ ಜರುಗುವ ಪ್ರತಿ ಕಿ.ಮೀ. ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯಿಂದ ಪಾಯಿಚಿಟ್‌ಗಳನ್ನು ರಚಿಸಿಕೊಂಡು ಅಲ್ಲಿ ನುರಿತ ವ್ಶೆದ್ಯರು, ನರ್ಸ್ ಹಾಗೂ ಅಗತ್ಯ ಔಷಧ ಹೊಂದಿರುವ ತಂಡ ರಚಿಸಿಕೊಂಡು ಪ್ರಥಮ ಚಿಕಿತ್ಸೆ ನೀಡಲು ಸಿದ್ದರಿರಬೇಕು’ ಎಂದು ಸಲಹೆ ನೀಡಿದರು.
ಶ್ರೀವಾಣಿ ಮಾತನಾಡಿ, ‘ಕಳೆದ ಅ. 6ರಂದು ಕಾರ್ಯಕ್ರಮದ ಡಿಜಿಟಲ್ ಹಂತದ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವಿಯಾ ಚಾಲನೆ ನೀಡಿದ್ದಾರೆ. ಮುಂದುವರಿದ ಭಾಗವಾಗಿ 15-29 ವರ್ಷ ವಯೋಮಿತಿಯ ಯುವಜನರಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ರೀಲ್ ಸ್ಪರ್ಧೆ, ಪ್ರಬಂಧ ಬರೆಯುವ ಸ್ಪರ್ಧೆ ಮತ್ತು ಸರ್ದಾರ್ @150 ಯುವ ನಾಯಕರ ಕಾರ್ಯಕ್ರಮವನ್ನು ಮೈ ಭಾರತ್ ಪೋರ್ಟಲ್‌ನಲ್ಲಿ ಆಯೋಜಿಸಲಾಗಿದೆ’ ಎಂದು ತಿಳಿಸಿದರು.
‘ಸ್ಪರ್ಧೆಗಳ ಕುರಿತು ಹೆಚ್ಚಿನ ಮಾಹಿತಿಗೆ ಮೈ ಭಾರತ್ ಪೋರ್ಟಲ್‌ನ (www.mybharat.gov.in) ಜಾಲತಾಣಕ್ಕೆ ಭೇಟಿ ನೀಡಿ ಹಾಗೂ ದೇವನಹಳ್ಳಿಯಲ್ಲಿರುವ ಮೈ-ಭಾರತ್ ಕಚೇರಿ, ದೂ.ಸಂಖ್ಯೆ: 8328673178 ಅನ್ನು ಸಂಪರ್ಕಿಸಬಹುದಾಗಿದೆ’ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಬಿನೋಯ್, ಡಿಯುಡಿಸಿ ಯೋಜನಾ ನಿರ್ದೇಶಕ ಶೇಖರ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.
ಪಾದಯಾತ್ರೆ ಮಾರ್ಗ ಎಲ್ಲಿ?
ಜಿಲ್ಲಾಧಿಕಾರಿ ಕಚೇರಿಯಿಂದ ಹೊರಡುವ ಪಾದಯಾತ್ರೆಯು ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ವಾಟರ್ ಟ್ಯಾಂಕ್ ವೃತ್ತ ಕಾಮಣ್ಣನ ಗುಡಿ ವೃತ್ತ ಹಳೆ ಬಸ್ ನಿಲ್ದಾಣ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾದು ರಾಯರದೊಡ್ಡಿ ವೃತ್ತದಲ್ಲಿ (ಆರ್.ವಿ.ಸಿ.ಎಸ್ ಕಲ್ಯಾಣ ಮಂಟಪ) ಅಂತ್ಯಗೊಳ್ಳಲಿದೆ. ಜಿಲ್ಲೆಯ ಯುವಜನರಲ್ಲಿ ಏಕತೆ ದೇಶಭಕ್ತಿ ಮತ್ತು ನಾಗರಿಕ ಜವಾಬ್ದಾರಿಯ ಮನೋಭಾವ ಜಾಗೃತಗೊಳಿಸುವ ಗುರಿ ಹೊಂದಿದೆ. ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಬೇಕು. ಪಟೇಲ್ ಅವರ ಏಕತಾ ಭಾರತದ ದೃಷ್ಟಿಕೋನವನ್ನು ಗೌರವಿಸಬೇಕು. ಅದಕ್ಕಾಗಿ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.