
‘ರಾಷ್ಟ್ರೀಯ ಏಕತಾ ದಿನ: ಸರ್ದಾರ್@150’ ಪ್ರಯುಕ್ತ ರಾಮನಗರದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾಡಳಿತ, ಮೈ ಭಾರತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಏಕತಾ ಪಾದಯಾತ್ರೆಗೆ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಜಿಲ್ಲಾಧಿಕಾರಿ ಕಚೇರಿ ಬಳಿ ಚಾಲನೆ ನೀಡಿದರು.
ರಾಮನಗರ: ‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಬಿಡಿ ಬಿಡಿಯಾಗಿ ಹಂಚಿ ಹೋಗಿದ್ದ 500ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಗ್ಗೂಡಿಸುವುದು ಸುಲಭದ ಕೆಲಸವಾಗಿರಲಿಲ್ಲ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಧೈರ್ಯ ಮತ್ತು ದೂರದೃಷ್ಟಿಯಿಂದಾಗಿ, ಎಲ್ಲಾ ಸಂಸ್ಥಾನಗಳನ್ನು ಭಾರತದಡಿ ತಂದು ಬಲಿಷ್ಠ ಭಾರತಕ್ಕೆ ಗಟ್ಟಿ ಅಡಿಪಾಯ ಹಾಕಿದರು’ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಬಣ್ಣಿಸಿದರು.
‘ರಾಷ್ಟ್ರೀಯ ಏಕತಾ ದಿನ: ಸರ್ದಾರ್@150’ ಕಾರ್ಯಕ್ರಮದ ಪ್ರಯುಕ್ತ ಜಿಲ್ಲಾಡಳಿತ, ಮೈ ಭಾರತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಏಕತಾ ನಡಿಗೆಗೆ ಚಾಲನೆ ನೀಡಿ ಹೆಜ್ಜೆ ಹಾಕಿದ ಅವರು, ರಾಯರದೊಡ್ಡಿಯಲ್ಲಿರುವ ಆರ್‌ವಿಸಿಎಸ್ ಕಲ್ಯಾಣ ಮಂಟಪದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಹಲವು ಸಂಸ್ಥಾನಗಳಾಗಿ ಹರಿದು ಹಂಚಿ ಹೋಗಿದ್ದ ಭಾರತವನ್ನು ಸ್ಥಳೀಯ ಮಹಾರಾಜರು ಆಳುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಅಖಂಡ ಭಾರತವನ್ನು ಒಗ್ಗೂಡಿಸುವ ಹೊಣೆ ದೇಶದ ಪ್ರಥಮ ಗೃಹಮಂತ್ರಿಯಾದ ಪಟೇಲ್ ಅವರದ್ದಾಗಿತ್ತು. ಇಡೀ ದೇಶವನ್ನು ಏಕೀಕೃತವಾಗಿಸಿದ ಅವರ ದೃಢ ನಿಶ್ಚಯ, ದೂರದೃಷ್ಟಿ ಹಾಗೂ ದೇಶಪ್ರೇಮದಿಂದಾಗಿ ಭಾರತ ಇಂದು ಶಕ್ತಿಶಾಲಿ ದೇಶವಾಗಿ ರೂಪುಗೊಂಡಿದೆ’ ಎಂದರು.
‘ದೇಶ ಸುಭದ್ರವಾಗಿರಲು ವ್ಯವಸ್ಥಿತ ಆಡಳಿತ ಅತ್ಯಗತ್ಯ. ಇಂದಿನ ಯುವಜನತೆಯೇ ಭಾರತದ ಶಕ್ತಿ. ದೇಶದ 142 ಕೋಟಿ ಜನಸಂಖ್ಯೆಯಲ್ಲಿ ಶೇ 40ಕ್ಕಿಂತ ಹೆಚ್ಚು ಯುವಜನರಿದ್ದಾರೆ. ಇದೊಂದು ನಮ್ಮ ದೇಶದ ದೊಡ್ಡ ಸಂಪತ್ತು. ಆದ್ದರಿಂದ, ನಾವು ಭಾರತವನ್ನು ಗೌರವಿಸಬೇಕು, ಪ್ರೀತಿಸಬೇಕು, ರಕ್ಷಿಸಬೇಕು. ಇದೇ ನಮ್ಮ ಕರ್ತವ್ಯ’ ಎಂದು ಹೇಳಿದರು.
‘ಇಂದು ಭಾರತವು ಕೇವಲ ಆರ್ಥಿಕ ಶಕ್ತಿಯಾಗಿರದೆ ರಕ್ಷಣಾ ಕ್ಷೇತ್ರದಲ್ಲಿಯೂ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರ್ ಸೇರಿದಂತೆ ಹಲವು ಕಾರ್ಯಾಚರಣೆಗಳಲ್ಲಿ ಭಾರತ ತನ್ನ ಸಾಮರ್ಥ್ಯ ಏನೆಂದು ವಿಶ್ವದ ಮುಂದೆ ಸಾಧಿಸಿ ತೋರಿಸಿದೆ. ಪಟೇಲ್ ಅವರ ಕನಸಿನಂತೆ ಜಗತ್ತಿನ ಅತಿ ದೊಡ್ಡ ಮತ್ತು ಸದೃಢ ರಾಷ್ಟ್ರವಾಗಿ ರೂಪುಗೊಳ್ಳುತ್ತಿದೆ’ ಎಂದು ತಿಳಿಸಿದರು.
‘ಶಿಕ್ಷಣವೇ ಪ್ರಗತಿಯ ಕೀಲಿ ಕೈ. ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ವಿದ್ಯಾರ್ಥಿಗಳೇ ನಾಳೆಯ ಭಾರತದ ನಿಜವಾದ ಶಕ್ತಿ. ದೇಶಭಕ್ತಿ ಜೊತೆಗೆ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯಲು ಯುವಜನರು ಸಂಕಲ್ಪ ಮಾಡಬೇಕು’ ಎಂದು ಸಲಹೆ ನೀಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಅವರು ಗಣ್ಯರನ್ನು ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಉಪ ವಿಭಾಗಾಧಿಕಾರಿ ಬಿನೋಯ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ, ಮೈ ಭಾರತ್ ಜಿಲ್ಲಾ ಅಧಿಕಾರಿ ಶ್ರೀವಾಣಿ, ಬಿಜೆಪಿ ಮುಖಂಡ ಗೌತಮ್ ಗೌಡ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಬಿಜೆಪಿ ಮುಖಂಡರು, ವಿದ್ಯಾರ್ಥಿಗಳು ಇದ್ದರು.
ಕಬ್ಬು ಬೆಳೆಗಾರರ ಬೆಂಬಲ ಬೆಲೆ ವಿಷಯದಲ್ಲಿ ಕೇಂದ್ರ–ರಾಜ್ಯ ಸರ್ಕಾರ ಹಾಗೂ ಸಕ್ಕರೆ ಮಾಲೀಕರ ಜವಾಬ್ದಾರಿ ಇದೆ. ಇದನ್ನು ಕೇಂದ್ರದ ಗಮನಕ್ಕೂ ತರಲಾಗಿದೆ. ಚಳಿಗಾಲದ ಅಧಿವೇಶನದಲ್ಲೂ ಪ್ರಧಾನಿ ಮತ್ತು ಸಚಿವರ ಗಮನ ಸೆಳೆಯಲಾಗುವುದುಡಾ. ಸಿ.ಎನ್. ಮಂಜುನಾಥ್, ಸಂಸದ
‘ರಾಜ್ಯಕ್ಕೆ 10 ವರ್ಷದಲ್ಲಿ ₹5 ಲಕ್ಷ ಅನುದಾನ’
‘ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಕಳೆದ ಹತ್ತು ವರ್ಷದಲ್ಲಿ ₹5 ಲಕ್ಷ ಅನುದಾನ ಬಂದಿದೆ. ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರ ಅದನ್ನು ಸಮರ್ಪಕವಾಗಿ ಬಳಸಬೇಕು. ಅದು ಬಿಟ್ಟು ಕೇಂದ್ರ ಸರ್ಕಾರ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬುದು ಸರಿಯಲ್ಲ. ರಾಜ್ಯದ ಪರವಾಗಿ ನಾವು ಕೂಡ ಕೇಂದ್ರದಲ್ಲಿ ದನಿ ಎತ್ತಿದ್ದೇವೆ’ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು. ‘ರಾಜ್ಯದ ಸಮಸ್ಯೆಗೆ ಕೇಂದ್ರ ಸರ್ಕಾರ ಸ್ಪಂದಿಸಿತ್ತಿಲ್ಲ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ರಾಜ್ಯದ ರೈಲ್ವೆ ಯೋಜನೆಗಳಿಗೆ ಏಳೂವರೆಗೆ ಸಾವಿರ ಕೋಟಿ ಅನುದಾನ ಬಂದಿದೆ. ರಾಜ್ಯಕ್ಕೆ ಅನುದಾನ ಬರುತ್ತಲೇ ಇದೆ. ಆದರೆ ಅದನ್ನ ಹೇಗೆ ಉಪಯೋಗಿಸುತ್ತೇವೆ ಎಂಬುದು ಮುಖ್ಯ. ರಾಜ್ಯದಲ್ಲೂ ಆಂತರಿಕ ಸಂಪನ್ಮೂಲ ಚನ್ನಾಗಿದೆ. ಅದನ್ನ ಶಾಶ್ವತ ಯೋಜನೆಗಳಿಗೆ ಹೆಚ್ಚು ಖರ್ಚು ಮಾಡಬೇಕು’ ಎಂದು ತಿರುಗೇಟು ನೀಡಿದರು. ‘ಮೇಕೆದಾಟು ಅಣೆಕಟ್ಟೆ ನಿರ್ಮಾಣ ಯೋಜನೆ ವಿರುದ್ಧ ತಮಿಳುನಾಡು ಅರ್ಜಿಯನ್ನು ಸುಪ್ರೀಂ ಕೋರ್ಟ ವಜಾಗೊಳಿಸಿರುವುದರಿಂದ ಯೋಜನೆಯ ಹಾದಿ ಸುಗಮವಾಗಿದೆ. ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅನುಮತಿ ಬೇಕು. ಅದಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ನೇತೃತ್ವದಲ್ಲಿ ನಿರಂತರ ಹೋರಾಟ ನಡೆಯುತ್ತಿದೆ. ಕುಡಿಯುವ ನೀರಿನ ಈ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡಬೇಕು. ನಾವೂ ಸಹ ಕೇಂದ್ರಕ್ಕೆ ಒತ್ತಾಯಿಸಬೇಕು’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.