ಚನ್ನಪಟ್ಟಣದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಟೇಶಪ್ಪ ಉದ್ಘಾಟಿಸಿದರು.
ಚನ್ನಪಟ್ಟಣ: ಸಮಾಜದ ಅಮೂಲ್ಯ ಆಸ್ತಿ ಆಗಿರುವ ಹಿರಿಯರ ರಕ್ಷಣೆ ಮತ್ತು ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಟೇಶಪ್ಪ ಅಭಿಪ್ರಾಯಪಟ್ಟರು.
ನಗರದಲ್ಲಿ ಭಾರತ ವಿಕಾಸ ಪರಿಷದ್ ಕಣ್ವ ಶಾಖೆ, ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಶನಿವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಹಿರಿಯರಿಗೆ ಪ್ರೀತಿ ಮತ್ತು ಸಹಾನುಭೂತಿ ಸಿಗುತ್ತಿಲ್ಲ. ತಂದೆ, ತಾಯಿ, ಅಜ್ಜ, ಅಜ್ಜಿ ಸೇರಿದಂತೆ ಹಿರಿಯರ ಕಡೆಗಣನೆ ಸಾಮಾನ್ಯವಾಗಿದೆ. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಇದನ್ನು ತಡೆಗಟ್ಟುವುದು ಯುವ ಪೀಳಿಗೆ ಜವಾಬ್ದಾರಿಯಾಗಿದೆ. ವಯಸ್ಸಾದವರಿಗೆ ಪ್ರೀತಿ ಹಾಗೂ ಗೌರವ ನೀಡಿದರೆ ಅವರ ಜೀವನ ನೆಮ್ಮದಿಯಾಗಿ ಇರಲಿದೆ ಎಂದರು.
ಸರ್ಕಾರಿ ಸಹಾಯಕ ಅಭಿಯೋಜಕಿ ಶಾರದ ಮಾತನಾಡಿ, ಹಿರಿಯ ನಾಗರಿಕರ ಕಾಯ್ದೆ ಜಾರಿಯಲ್ಲಿದೆ. ಮಕ್ಕಳಿಂದ ಅಥವಾ ಕುಟುಂಬದವರಿಂದ ತೊಂದರೆ ಎದುರಿಸಿದರೆ ಕಾನೂನು ನೆರವು ಪಡೆಯಬಹುದು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸಹಾಯ ಸಿಗಲಿದೆ. ಇದನ್ನು ಹಿರಿಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಾವಿಪ ಅಧ್ಯಕ್ಷ ಪುಟ್ಟಸ್ವಾಮಿಗೌಡ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ಎಸ್.ಬಿ.ಧನಂಜಯ, ಖಜಾಂಚಿ ಹೇಮಂತ್ ಹಿರಿಯರ ಹಕ್ಕುಗಳ ಕುರಿತು ಮಾತನಾಡಿದರು. ಲಯನ್ಸ್ ಸಂಸ್ಥೆ ಅಧ್ಯಕ್ಷ ವೆಂಕಟಸುಬ್ಬಯ್ಯ ಚಟ್ಟಿ, ತಾಲ್ಲೂಕು ಕಾನೂನು ಸೇವಾ ಸಮಿತಿ ಮೇಲ್ವಿಚಾರಕ ಕೃಷ್ಣಪ್ಪ, ಕಾರ್ಯಕಾರಿ ಸಮಿತಿ ಸದಸ್ಯ ಶಿವಶಂಕರ್, ಭಾವಿಪ ಕಾರ್ಯದರ್ಶಿ ಯೋಗೇಶ್ ಚಕ್ಕೆರೆ, ಭಾವಿಪ ಪದಾಧಿಕಾರಿಗಳಾದ ವಸಂತಕುಮಾರ್, ಗುರುಮಾದಯ್ಯ, ತಿಪ್ರೇಗೌಡ, ವಿ.ಟಿ.ರಮೇಶ್, ಬೆಸ್ಕಾಂ ಶಿವಲಿಂಗಯ್ಯ, ಎಲೆಕೇರಿ ಮಂಜುನಾಥ್ ಇತರರು ಭಾಗವಹಿಸಿದ್ದರು.
ಭಾರತ ವಿಕಾಸ ಪರಿಷತ್ ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಹಿರಿಯರಾದ ಲಕ್ಷ್ಮಣ್, ಗೋಪಾಲಗೌಡ, ಜಯಲಕ್ಷ್ಮಮ್ಮ ನಂಜಪ್ಪ ಇತರರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.