ರಾಮನಗರ: ಭಾರತ ಸೇವಾ ದಳದ ಜಿಲ್ಲಾ ಸಮಿತಿ ಆಯ್ಕೆ ಪ್ರಕ್ರಿಯೆಯು ಗುರುವಾರ ನಡೆಯಲಿದೆ. ಆಯಾ ಬೈಲಾ ಪ್ರಕಾರ ಚುನಾವಣೆ ನಡೆಸುತ್ತಿಲ್ಲ ಎಂದು ಆರೋಪಿಸಿ ಕೆಲವು ಪದಾಧಿಕಾರಿಗಳು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಪದಾಧಿಕಾರಿಗಳು, ರಾಜ್ಯದ ಮುಖ್ಯಮಂತ್ರಿ ಭಾರತ ಸೇವಾ ದಳದ ಗೌರವ ಅಧ್ಯಕ್ಷರಾಗಿರುತ್ತಾರೆ. ಹಾಗಾಗಿ ತಾವು ತಕ್ಷಣವೇ ಮಧ್ಯಪ್ರವೇಶಿಸಿ ಕೂಡಲೇ ಆಡಳಿತಾಧಿಕಾರಿಯನ್ನು ನೇಮಿಸಬೇಕು. ಸಂಸ್ಥೆಯಲ್ಲಿ ಆಗಿರುವಂತಹ ಅಕ್ರಮ ಹಾಗೂ ಭ್ರಷ್ಟಾಚಾರ ಮಾಡಿರುವ ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಕೇಂದ್ರ ಸಮಿತಿಯ ಸದಸ್ಯೆ ಕಲ್ಪನಾ ಶಿವಣ್ಣ, ಪದಾಧಿಕಾರಿಗಳಾದ ಚಂದ್ರಯ್ಯ, ಕೂ.ಗಿ.ಗಿರಿಯಪ್ಪ, ಪರಮಶಿವಯ್ಯ ಮನವಿ ಮಾಡಿದ್ದಾರೆ. ಈ ಕಾರಣಕ್ಕೆ ಗುರುವಾರ ನಡೆಯಲಿರುವ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿಯೂ ಹೇಳಿದ್ದಾರೆ.
‘ಭಾರತ ಸೇವಾದಳದ ರಾಮನಗರ ಜಿಲ್ಲಾ ಸಮಿತಿಯ ಚುನಾವಣೆಯನ್ನು ಸಂಸ್ಥೆಯ ಬೈಲಾ ವಿರುದ್ಧ ಸಂಘಟಿಸಲಾಗಿದೆ. ನೂತನವಾಗಿ ಸದಸ್ಯರಾದ ವ್ಯಕ್ತಿಯು 90 ದಿನದ ನಂತರ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂಬ ನಿಯಮವಿದೆ. ಆದರೆ ಅವಧಿಗೆ ಪೂರ್ವವಾಗಿಯೇ ಹೊಸ ಸದಸ್ಯರನ್ನು ಸೇರಿಸಿಕೊಂಡು ಪ್ರಕ್ರಿಯೆ ನಡೆಸಲಾಗುತ್ತಿದೆ’ ಎಂದು ಸಮಿತಿಯ ಹಿಂದಿನ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.