ADVERTISEMENT

ರಾಮನಗರ | 7.41 ಕೋಟಿ ಟ್ರಿಪ್ ‘ಶಕ್ತಿ’ ಪ್ರಯಾಣ

ಉಚಿತ ಪ್ರಯಾಣ ಸೌಲಭ್ಯದ ‘ಶಕ್ತಿ’ ಗ್ಯಾರಂಟಿಗೆ 2 ವರ್ಷ; ಸ್ತ್ರೀಯರಿಂದ ಉತ್ತಮ ಪ್ರತಿಕ್ರಿಯೆ

ಓದೇಶ ಸಕಲೇಶಪುರ
Published 16 ಜೂನ್ 2025, 5:36 IST
Last Updated 16 ಜೂನ್ 2025, 5:36 IST
ಶಕ್ತಿ ಯೋಜನೆ
ಶಕ್ತಿ ಯೋಜನೆ   

ರಾಮನಗರ: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆಯಡಿ, ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಮಹಿಳೆಯರು ಬರೋಬ್ಬರಿ 7.41 ಕೋಟಿ ಟ್ರಿಪ್ ಪ್ರಯಾಣ ಮಾಡಿದ್ದಾರೆ.

2023ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ, ಜೂನ್ 11ರಂದು ‘ಶಕ್ತಿ’ ಯೋಜನೆಗೆ ಚಾಲನೆ ನೀಡಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಮಹಿಳೆಯರು 7.41 ಕೋಟಿ ಟ್ರಿಪ್‌ ಪ್ರಯಾಣಿಸಿದ್ದು, ಅದರ ಒಟ್ಟು ಟಿಕೆಟ್ ಮೌಲ್ಯ ₹206.61 ಕೋಟಿ!

‘ಶಕ್ತಿ’ ಆರಂಭವಾದ ಮೊದಲ ವರ್ಷ (2023ರ ಜೂನ್ 11ರಿಂದ ಜುಲೈ 31ರವರೆಗೆ) ಮಹಿಳೆಯರು 4.40 ಕೋಟಿ ಟ್ರಿಪ್ ಪ್ರಯಾಣ ಮಾಡಿದ್ದರು. ಅದರ ಟಿಕೆಟ್ ಮೌಲ್ಯ ₹117.19 ಕೋಟಿಯಾಗಿತ್ತು. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಮಹಿಳೆಯರಿಂದ ಆರಂಭದಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ADVERTISEMENT

ಚನ್ನಪಟ್ಟಣ ಅಧಿಕ: ‘ಜಿಲ್ಲೆಯ ಚನ್ನಪಟ್ಟಣ ಡಿಪೊ ವ್ಯಾಪ್ತಿಯ ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ ಕಳೆದೆರಡು ವರ್ಷದಲ್ಲಿ ಅತಿ ಹೆಚ್ಚು ಮಹಿಳೆಯರು ಪ್ರಯಾಣಿಸಿದ್ದಾರೆ. ಇಲ್ಲಿ ಸಂಚರಿಸಿರುವ ಮಹಿಳೆಯರ ಒಟ್ಟು ಟ್ರಿಪ್ ಸಂಖ್ಯೆ 1.82 ಕೋಟಿ ಆಗಿದ್ದು, ಟಿಕೆಟ್ ಮೌಲ್ಯ ₹46.90 ಕೋಟಿಯಾಗಿದೆ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅತಿ ಹೆಚ್ಚು ಪ್ರಯಾಣಿಸಿರುವ ಮಹಿಳೆಯರಲ್ಲಿ ರಾಮನಗರ ಡಿಪೊ 2ನೇ ಸ್ಥಾನ, ಕನಕಪುರ 3ನೇ ಸ್ಥಾನ, 4ನೇ ಸ್ಥಾನದಲ್ಲಿ ಮಾಗಡಿ ಹಾಗೂ ಕಡೆಯ ಸ್ಥಾನದಲ್ಲಿ ಹಾರೋಹಳ್ಳಿ ಡಿಪೊ ಇದೆ. ಹಾರೋಹಳ್ಳಿಯಲ್ಲಿ ಮಹಿಳೆಯರು 95.17 ಕೋಟಿ ಟ್ರಿಪ್ ಪ್ರಯಾಣಿಸಿದ್ದು, ಒಟ್ಟು ಟಿಕೆಟ್ ಮೌಲ್ಯ ₹31.37 ಆಗಿದೆ. ಉಚಿತ ಪ್ರಯಾಣದ ಟಿಕೆಟ್ ಮೊತ್ತವನ್ನು ಸರ್ಕಾರ ಸಾರಿಗೆ ನಿಗಮಗಳಿಗೆ ಪ್ರತಿ ವರ್ಷ ಪಾವತಿಸುತ್ತದೆ’ ಎಂದು ಹೇಳಿದರು.

435 ಮಾರ್ಗದಲ್ಲಿ ಸಂಚಾರ: ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಆನೇಕಲ್ ಡಿಪೊ ಒಳಗೊಂಡಂತೆ ಇರುವ ಒಟ್ಟು 6 ಡಿಪೊಗಳ ವ್ಯಾಪ್ತಿಯಲ್ಲಿ ನಿತ್ಯ 435 ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ. ಶಕ್ತಿ ಯೋಜನೆ ಆರಂಭಕ್ಕೂ ಮುಂಚೆ ಇದ್ದ ಮಹಿಳಾ ಪ್ರಯಾಣಿಕರ ಸಂಖ್ಯೆ, ಯೋಜನೆ ಆರಂಭದ ಬಳಿಕ ತೀವ್ರಗತಿಯಲ್ಲಿ ಏರಿಕೆಯಾಗಿದೆ.

‘ಶಕ್ತಿ ಯೋಜನೆಯು ಮಹಿಳೆಯರ ಪಾಲಿಗೆ ವರವಾಗಿದೆ. ಯೋಜನೆಯಡಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದಾಗಿ ಸರ್ಕಾರಿ ಬಸ್‌ಗಳಲ್ಲಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ನೂಕುನುಗ್ಗಲು ಇರುತ್ತದೆ. ಬಸ್‌ಗಳಲ್ಲಿನ ಪ್ರಯಾಣ ಪ್ರಯಾಸ ಎನಿಸುತ್ತದೆ. ಸರ್ಕಾರ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಬಸ್‌ಗಳ ಸಂಖ್ಯೆಯನ್ನು ಸಹ ಹೆಚ್ಚಿಸಿದರೆ ನೂಕುನುಗ್ಗಲು ತಪ್ಪಲಿದೆ’ ಎಂದು ರಾಮನಗರದ ಲಿಂಗರಾಜು ಅಭಿಪ್ರಾಯಪಟ್ಟರು.

ರಾಮನಗರ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹತ್ತಲು ಮುಂದಾದ ಮಹಿಳೆಯರು (ಸಂಗ್ರಹ ಚಿತ್ರ)
ಮಹಿಳೆಯರ ಆತ್ಮಗೌರವ ಮತ್ತು ಸ್ವಾವಲಂಬನೆ ಹೆಚ್ಚಿಸುವಲ್ಲಿ ಶಕ್ತಿ ಯೋಜನೆಯು ಮಹತ್ವದ ಪಾತ್ರ ವಹಿಸಿದೆ. ಯೋಜನೆಯಿಂದಾಗಿ ಕಳೆದೆರಡು ವರ್ಷಗಳಲ್ಲಿ ಬದಲಾಗಿರುವ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸರ್ಕಾರ ಅಧ್ಯಯನ ಮಾಡಬೇಕು
– ಸುಮಂಗಲಾ ಸಿದ್ದರಾಜು ಸಾಹಿತಿ ರಾಮನಗರ
ಮಹಿಳಾ ಪರವಾದ ಯಾವುದೇ ಯೋಜನೆ ಜಾರಿಯಾದರೂ ಜನ ಅದನ್ನು ವಿರೋಧಿಸುತ್ತಾರೆ. ಇದಕ್ಕೆ ಕಾರಣ ನಮ್ಮಲ್ಲಿರುವ ಪುರುಷ ಪ್ರಧಾನ ವ್ಯವಸ್ಥೆ. ಈ ಮನಸ್ಥಿತಿಯನ್ನು ನಿಧಾನವಾಗಿ ಬದಲಾಯಿಸಿ ಸ್ತ್ರೀಯರ ಆತ್ಮಗೌರವ ಹೆಚ್ಚಿಸುವಲ್ಲಿ ಶಕ್ತಿ ಯೋಜನೆ ಪ್ರಮುಖ ಪಾತ್ರ ವಹಿಸಿದೆ
– ಮೇಘನ ರಾಮನಗರ
ಆರ್ಥಿಕ ಸಮಸ್ಯೆ ಕಾರಣಕ್ಕೆ ಹೊರಗೆ ಓಡಾಡಲು ಯೋಚಿಸುತ್ತಿದ್ದ ಹೆಣ್ಣು ಮಕ್ಕಳು ಇಂದು ಉದ್ಯೋಗ ಶಿಕ್ಷಣ ಸೇರಿದಂತೆ ಹಲವು ಉದ್ದೇಶಗಳಿಗೆ ಉಚಿತವಾಗಿ ಬಸ್‌ಗಳಲ್ಲಿ ಸಂಚರಿಸಲು ಶಕ್ತಿ ಯೋಜನೆ ನೆರವಾಗಿದೆ. ಸ್ತ್ರೀ ಸ್ವಾವಲಂಬನೆ ದೃಷ್ಟಿಯಲ್ಲಿ ಇದೊಂದು ಕ್ರಾಂತಿಕಾರಿ ಯೋಜನೆ
ಅರ್ಷಿಯಾ ರಾಮನಗರ
ಶಕ್ತಿ ಯೋಜನೆ ನಿಜಕ್ಕೂ ಸ್ತ್ರೀ ಸ್ವಾವಲಂಬನೆಗೆ ಪೂರಕವಾಗಿದೆ. ಯೋಜನೆ ಬಳಿಕ ಬಸ್ಸುಗಳು ತುಂಬಿ ತುಳುಕುತ್ತಿವೆ. ಹೆಚ್ಚಾಗಿರುವ ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಬಸ್ಸುಗಳ ಸಂಖ್ಯೆಯನ್ನು ಸಹ ಸರ್ಕಾರ ಹೆಚ್ಚಿಸಬೇಕು –
ಮಲ್ಲರಾಜೇ ಅರಸ್ ನಿವೃತ್ತ ಮುಖ್ಯ ಶಿಕ್ಷಕ ರಾಮನಗರ

‘ಸ್ತ್ರೀ ಸಬಲೀಕರಣಕ್ಕೆ ಕಾರಣವಾದ ಶಕ್ತಿ’ ‘ಶಕ್ತಿ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಮಹತ್ತರ ಕೊಡುಗೆ ನೀಡಿದೆ. ಯೋಜನೆಯಿಂದಾಗಿ ಮಹಿಳೆಯರ ಸಾಮಾಜಿಕ ಸ್ಥಿತಿಯು ನಿಧಾನವಾಗಿ ಬದಲಾವಣೆಯಾಗುತ್ತಿದೆ. ನಗರ ಪಟ್ಟಣ ಹಾಗೂ ಗ್ರಾಮೀಣ ಭಾಗದ ದುಡಿಯುವ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ಪಾಲಿಗೆ ಶಕ್ತಿಯು ವರವಾಗಿ ಪರಿಣಮಿಸಿದೆ. ಉದ್ಯೋಗಕ್ಕೆ ಹೋಗುತ್ತಿದ್ದ ಮಹಿಳೆಯರ ಪ್ರತಿ ತಿಂಗಳ ಓಡಾಟಕ್ಕೆ ಖರ್ಚಾಗುತ್ತಿದ್ದ ಎರಡ್ಮೂರು ಸಾವಿರ ಹಣ ಉಳಿತಾಯವಾಗುತ್ತಿದೆ. ಈ ಮೊತ್ತದ ಜೊತೆಗೆ ಮತ್ತೊಂದು ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿ ಮೊತ್ತವೂ ಮಹಿಳೆಯರಿಗೆ ಸಿಗುವುದರಿಂದ ಕುಟುಂಬದ ಆರ್ಥಿಕತೆಗೆ ಬಲ ಬಂದಿದೆ. ಯೋಜನೆಯಿಂದ ಪ್ರವಾಸೋದ್ಯಮ ವೃದ್ಧಿಯಾಗಿದ್ದು ಸಾರಿಗೆ ಸಂಸ್ಥೆಗಳ ಆದಾಯವೂ ವೃದ್ಧಿಯಾಗಿದೆ. ಯೋಜನೆಯು ರಾಜ್ಯದ ಆರ್ಥಿಕತೆಗೆ ತನ್ನದೇ ಆದ ಕೊಡುಗೆ ನೀಡಿದೆ’ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.