ADVERTISEMENT

ಆದಾಯ ಹೆಚ್ಚಳಕ್ಕೆ ಶಕ್ತಿ ಯೋಜನೆ ಸಹಕಾರಿ; ಎಂ. ಜಗದೀಶ್

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ಜಗದೀಶ್

​ಪ್ರಜಾವಾಣಿ ವಾರ್ತೆ
Published 27 ಜುಲೈ 2023, 6:31 IST
Last Updated 27 ಜುಲೈ 2023, 6:31 IST
ರಾಮನಗರದ ಕೆಎಸ್‌ಆರ್‌ಟಿಸಿ ಬಸ್ ಘಟಕದಲ್ಲಿ ಬುಧವಾರ ಕೆಎಸ್ಆರ್ ಟಿಸಿ ನೌಕರರ ಬಳಗ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವದಲ್ಲಿ ನೌಕರರನ್ನು ಸನ್ಮಾನಿಸಲಾಯಿತು
ರಾಮನಗರದ ಕೆಎಸ್‌ಆರ್‌ಟಿಸಿ ಬಸ್ ಘಟಕದಲ್ಲಿ ಬುಧವಾರ ಕೆಎಸ್ಆರ್ ಟಿಸಿ ನೌಕರರ ಬಳಗ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವದಲ್ಲಿ ನೌಕರರನ್ನು ಸನ್ಮಾನಿಸಲಾಯಿತು   

ರಾಮನಗರ: ‘ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯು ನಷ್ಟದಲ್ಲಿರುವ ಸಾರಿಗೆ ಸಂಸ್ಥೆಯ ಆದಾಯ ಹೆಚ್ಚಳಕ್ಕೆ ಸಹಕಾರಿಯಾಗಿದೆ. ರಾಮನಗರ ವಿಭಾಗದ 6 ಘಟಕಗಳು ನಿತ್ಯ ₹4.50 ಲಕ್ಷ ನಷ್ಟದಲ್ಲಿದ್ದವು. ಯೋಜನೆ ಜಾರಿ ಬಳಿಕ ನಷ್ಟದ ಕಡಿಮೆಯಾಗಿದೆ’ ಎಂದು ಕೆಎಸ್‌ಆರ್‌ಟಿಸಿ ರಾಮನಗರ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ಜಗದೀಶ್ ಹೇಳಿದರು

ನಗರದ ಬಿ.ಎಂ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ಘಟಕದಲ್ಲಿ ಬುಧವಾರ ಕೆಎಸ್ಆರ್ ಟಿಸಿ ನೌಕರರ ಬಳಗ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಂಯಂತ್ಯುತ್ಸವ ಮತ್ತು ನಿವೃತ್ತ ನೌಕಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ, ನೌಕರರು ಯಾವುದೇ ದೂರುಗಳಿಗೆ ಆಸ್ಪದವ ಇಲ್ಲದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರು ಘಟಕಗಳಿಂದ ನಿತ್ಯ 1.10 ಲಕ್ಷ ಮಹಿಳಾ ಪ್ರಯಾಣಿಕರು ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ’ ಎಂದರು.

ADVERTISEMENT

‘ಕೆಂಪೇಗೌಡ ಅವರ ಜಯಂತಿ ಒಂದು ದಿನಕ್ಕೆ ಸೀಮಿತವಾಗಬಾರದು. ಅವರು ಈ ನೆಲಕ್ಕೆ ನೀಡಿದ ಕೊಡುಗೆ ಅಪಾರ, ಅವರ ತತ್ವಾದರ್ಶಗಳನ್ನು ನೌಕರರು ಮೈಗೂಡಿಸಿಕೊಂಡು ಸಂಸ್ಥೆಗೆ ಕೀರ್ತಿ ತರಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಭಾಗೀಯ ಸಂಚಾರ ಅಧಿಕಾರಿ ಪುರುಷೋತ್ತಮ, ‘ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಬೆಂಗಳೂರು ನಿರ್ಮಾಣವಾಯಿತು. ಕೆರೆ– ಕಟ್ಟೆಗಳನ್ನು ನಿರ್ಮಿಸಿ ರಾಜಧಾನಿಯ ಅಭಿವೃದ್ಧಿಗೆ ಅಡಿಪಾಯ ಹಾಕಿದರು. ಇಂದು ನಗರ ಜಾಗತಿಕ ಮಟ್ಟಕ್ಕೆ ಬೆಳೆದಿದ್ದರೆ, ಅದಕ್ಕೆ ಕೆಂಪೇಗೌಡರ ಕೊಡುಗೆ ದೊಡ್ಡದು’ ಎಂದು ಬಣ್ಣಿಸಿದರು.

ಮಂಡ್ಯ ವಿಭಾಗದ ಭದ್ರತಾ ಮತ್ತು ಜಾಗೃತಾಧಿಕಾರಿ ಜಿ.ಎ. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ, ಸಂಚಾರ ಶಾಖೆಯ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಭಾಗೀಯ ತಾಂತ್ರಿಕ ಎಂಜಿನಿಯರ್ ಭಾಸ್ಕರ್, ಕಾರ್ಮಿಕ ಕಲ್ಯಾಣಾಧಿಕಾರಿ ಅಲ್ತಾಬ್ ಪಾಷಾ, ಆಡಳಿತಾಧಿಕಾರಿ ಎ.ಇ. ಜಯರಾಮ್, ಕಾನೂನು ಅಧಿಕಾರಿ ನಂದಿನಿ, ಅಂಕಿ ಅಂಶ ಅಧಿಕಾರಿ ವನಿತಾ ಪಟಗಾರ, ಡಿಎಸ್ಐ ಶೀಲಾ, ಪ್ರಭಾರ ಘಟಕ ವ್ಯವಸ್ಥಾಪಕ ಶಿವಣ್ಣ ಇದ್ದರು. ನಿರ್ವಾಹಕಿ ರುಕ್ಕಮ್ಮ ಸ್ವಾಗತಿಸಿದರು. ಚಾಲಕ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.