
ಲಕ್ಷ್ಮಣ
ರಾಮನಗರ: ಕೆರೆ ಬದಿ ಕುರಿಗಳ ಮೈ ತೊಳೆಯುತ್ತಿದ್ದ ದಂಪತಿ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಗುಂಗರಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಲಕ್ಷ್ಮಣ (71) ಮತ್ತು ಜಯಮ್ಮ (65) ಮೃತ ದಂಪತಿ. ಘಟನೆ ಕುರಿತು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಕೆರೆ ಬಳಿ ದಂಪತಿ ಕುರಿಗಳನ್ನು ಮೇಯಿಸುತ್ತಿದ್ದರು. ಮಧ್ಯಾಹ್ನದ 3 ಗಂಟೆ ಸುಮಾರಿಗೆ ಕುರಿಗಳಷ್ಟೇ ಮನೆಗೆ ಬಂದಿದ್ದವು. ದಂಪತಿ ಬಂದಿರಲಿಲ್ಲ. ಕುಟುಂಬದವರು ಕೆರೆ ಕಡೆಗೆ ಹೋಗಿ ಹುಡುಕಾಡಿದ್ದಾರೆ. ದಡದಲ್ಲಿ ದಂಪತಿಯ ಚಪ್ಪಲಿಗಳು ಹಾಗೂ ಕೆರೆಯಲ್ಲಿ ಜಯಮ್ಮ ಅವರ ಶವ ತೇಲುತ್ತಿದ್ದದ್ದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ, ಇಬ್ಬರ ಶವವನ್ನು ನೀರಿನಿಂದ ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಆಳವಾದ ಕೆರೆ ಬದಿ ಕುರಿ ತೊಳೆಯುತ್ತಿದ್ದ ದಂಪತಿ ಪೈಕಿ ಒಬ್ಬರು ಕಾಲು ಜಾರಿ ನೀರಿಗೆ ಬಿದ್ದಾಗ, ಮತ್ತೊಬ್ಬರು ರಕ್ಷಿಸಲು ಮುಂದಾಗಿ ಇಬ್ಬರೂ ಮುಳುಗಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.