
ಮಾಗಡಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ಉತ್ತರಾಧಿಕಾರಿಗೆ ನಾಯಕತ್ವ ಬಿಟ್ಟುಕೊಟ್ಟರೆ ಮುಂದಿನ 15 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಲಿದೆ’ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.
‘ನಾಳೆಯೇ ಅಧಿಕಾರ ಬಿಟ್ಟು ಕೊಡಲಿ ಎಂದು ನಾನು ಕೇಳುತ್ತಿಲ್ಲ. ಆದರೆ, ಒಳ್ಳೆಯ ಉತ್ತರಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರೆ ಮತ್ತಷ್ಟು ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಮುಂದುವರೆಯಲಿದೆ ಎನ್ನುವ ಆಶಯದೊಂದಿಗೆ ಈ ಮಾತು ಹೇಳುತ್ತಿರುವೆ’ ಎಂದರು.
ತಾಲ್ಲೂಕಿನ ಬಾಚೇನಹಟ್ಟಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ನನಗೆ ಇರುವ ಮಾಹಿತಿ ಪ್ರಕಾರ ಹೈಕಮಾಂಡ್ ಶೀಘ್ರದಲ್ಲೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ಮಾಡುವ ಸಾಧ್ಯತೆ ಇದೆ. ಆ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಬಗ್ಗೆ ತೀರ್ಮಾನವಾಗಲಿದೆ’ ಎಂದರು.
ಸಿದ್ದರಾಮಯ್ಯ ಅವರಿಗೆ ಅವರೇ ಸಾಟಿ. ಅವರು ನಮ್ಮ ಪ್ರಶ್ನಾತೀತ ನಾಯಕ. ಪಕ್ಷ ಅವರಿಗೆ ಮಹತ್ವದ ಹುದ್ದೆಗಳನ್ನು ನೀಡಿದೆ. ಅವರು ತಮ್ಮ ನಾಯಕತ್ವದಲ್ಲಿಯೇ ಸಮರ್ಪಕ ಉತ್ತರಾಧಿಕಾರಿಗೆ ಅಧಿಕಾರ ಹಸ್ತಾಂತರಿಸಬೇಕು. ಪಕ್ಷಕ್ಕೆ ಮಾರ್ಗದರ್ಶನ ಮಾಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.