
ರಾಮನಗರ: ಇಲ್ಲಿನ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಗೂಡಿನ ದರ ₹800ರ ಗಡಿ ದಾಟಿ ₹900 ತಲುಪಿದೆ. ದರ ಆರಕ್ಕೇರುತ್ತಿಲ್ಲ, ಮೂರಕ್ಕಿಳಿಯುತ್ತಿಲ್ಲ ಎಂಬ ಬೆಳಗಾರರ ಗೊಣಗಾಟದ ಮಧ್ಯೆ ಕಳೆದ ಒಂದು ವಾರದಿಂದ ಏರುಗತಿಯಲ್ಲಿರುವ ಧಾರಣೆಯು ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿದೆ.
ಏಷ್ಯಾ ಖಂಡದಲ್ಲೇ ರೇಷ್ಮೆಗೂಡಿನ ಅತಿದೊಡ್ಡದಾದ ಇಲ್ಲಿನ ಮಾರುಕಟ್ಟೆಯಲ್ಲಿ ಕಳೆದ 7 ದಿನಗಳ ಅವಧಿಯಲ್ಲಿ ಮಿಶ್ರತಳಿ (ಸಿ.ಬಿ) ಪ್ರತಿ ಕೆ.ಜಿ.ಗೆ ಕನಿಷ್ಠ ₹550ರಿಂದ ಗರಿಷ್ಠ ₹700 ದಾಟಿದೆ. ಇನ್ನು ದ್ವಿತಳಿ (ಬಿ.ವಿ) ಪ್ರತಿ ಕೆ.ಜಿ.ಗೆ ಕನಿಷ್ಠ ₹600ರಿಂದ ಗರಿಷ್ಠ ₹900ರ ಗಡಿ ಮುಟ್ಟಿರುವುದು ಬೆಳೆಗಾರರ ಪಾಲಿಗೆ ಶುಕ್ರದೆಸೆ ಬಂದಂತಾಗಿದೆ.
ವರ್ಷದ ದಾಖಲೆ: ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ರೇಷ್ಮೆಗೂಡು ಹರಾಜಾಗುತ್ತಿದೆ. ಈ ವರ್ಷ ಮೊದಲ ಬಾರಿಗೆ ಮಿಶ್ರತಳಿ ಗೂಡಿನ ದರ ದಾಖಲೆ ಗರಿಷ್ಠ ₹795 ಹಾಗೂ ದ್ವಿತಳಿಯು ಗರಿಷ್ಠ ₹905ಕ್ಕೆ ಮಾರಾಟವಾಗಿದೆ’ ಎಂದು ರಾಮನಗರದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ರೇಷ್ಮೆ ಜಂಟಿ ನಿರ್ದೇಶಕ ಎಂ. ಮಲ್ಲಿಕಾರ್ಜುನ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ರೈತ ಬಸವರಾಜು ಅವರು ನ.21ರಂದು ತಂದಿದ್ದ 102 ಕೆ.ಜಿ ಗೂಡು ₹905ಕ್ಕೆ ಹಾಗೂ ಮಾರನೇಯ ದಿನ ಮತ್ತೊಬ್ಬ ರೈತರ ಗೂಡು ₹900ಕ್ಕೆ ಹರಾಜಾಯಿತು. ಇದನ್ನು ಸ್ವತಃ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವೇ (ಕೆಎಸ್‌ಐಸಿ) ಖರೀದಿಸಿದೆ’ ಎಂದು ಹೇಳಿದರು.
ಚಳಿಗಾಲ ಕಾರಣ: ‘ಗೂಡಿನ ಧಾರಣೆ ಹೆಚ್ಚಳಕ್ಕೆ ಚಳಿಗಾಲದ ವಾತಾವರಣ ಕಾರಣ. ಸಾಮಾನ್ಯ ದಿನಗಳಲ್ಲಿ 28 ದಿನ ಇರುತ್ತಿದ್ದ ಹುಳು ಸಾಕಾಣಿಕೆ ಅವಧಿ, ಇದೀಗ 30 ದಿನ ಮೀರಿದೆ. ಇದರಿಂದಾಗಿ ಗೂಡು ಉತ್ಪಾದನೆ ತಗ್ಗಿದ್ದು, ಆವಕ ಕಮ್ಮಿಯಾಗಿದೆ. ಮಾರುಕಟ್ಟೆಗೆ ನಿತ್ಯ 45 ಮೆಟ್ರಿಕ್ ಟನ್ ಬರುತ್ತಿದ್ದ ಗೂಡು, ಈಗ 25ರಿಂದ 30 ಮೆಟ್ರಿಕ್ ಟನ್‌ಗೆ ಇಳಿದಿದೆ’ ಎಂದು ಮಾಹಿತಿ ನೀಡಿದರು.
‘ಇಪ್ಪತ್ತು ವರ್ಷದಿಂದ ರೇಷ್ಮೆ ಬೆಳೆಯುತ್ತಿದ್ದೇನೆ. ಮೊದಲಿಗೆ ಮಿಶ್ರತಳಿ ಬೆಳೆಯುತ್ತಿದ ನಾನು, ಕಾರ್ಮಿಕರ ಕೊರತೆಯಿಂದ ಕಳೆದೊಂದು ವರ್ಷದಿಂದ ದ್ವಿತಳಿ ಬೆಳೆಯಲಾರಂಭಿಸಿದೆ. 120 ಮೊಟ್ಟೆ ಚಾಕಿ ಹುಳುವಿಗೆ 102 ಕೆ.ಜಿ ರೇಷ್ಮೆ ಬಂದು ₹905 ದರ ಸಿಕ್ಕಿದೆ. ಕಡೆಗೂ ರೇಷ್ಮೆ ಆರ್ಥಿಕವಾಗ ನನ್ನ ಕೈ ಹಿಡಿಯಿತು’ ಎಂದು ಗರಿಷ್ಠ ದರ ಪಡೆದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆಸ್ತೂರಿನ ರೇಷ್ಮೆ ಬೆಳೆಗಾರ ಬಿ.ಬಿ. ಬಸವರಾಜು ಸಂತಸ ವ್ಯಕ್ತಪಡಿಸಿದರು.
ರಾಮನಗರದ ರೇಷ್ಮೆ ಮಾರುಕಟ್ಟೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಪಕ್ಕದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಿಂದಲೂ ಬೆಳೆಗಾರರು ಗೂಡುಗಳನ್ನು ತಂದು ಮಾರಾಟ ಮಾಡುತ್ತಾರೆ. ಬೇರೆ ಜಿಲ್ಲೆಗಳ ಮಾರುಕಟ್ಟೆಗಳು ಸ್ಥಳೀಯ ಹಾಗೂ ಅಕ್ಕಪಕ್ಕದ ತಾಲ್ಲೂಕುಗಳ ಬೆಳೆಗಾರರಿಗೆ ಮಾತ್ರ ಸೀಮಿತವಾಗಿದೆ.
ಚಳಿಗಾಲದ ಕಾರಣಕ್ಕೆ ಹಿಪ್ಪುನೇರಳೆ ಉತ್ಪಾದನೆ ಕಡಿಮೆಯಾಗಿದೆ. ಇದರಿಂದಾಗಿ ಮಾರುಕಟ್ಟೆಗೆ ರೇಷ್ಮೆಗೂಡಿನ ಆವಕ ಇಳಿಮುಖವಾಗಿದ್ದು ದರ ಏರಿಕೆಯಾಗಿದೆ. ಸದ್ಯದ ಸ್ಥಿತಿ ಇನ್ನೂ ಎರಡು ತಿಂಗಳು ಮುಂದುವರಿಯಲಿದೆ.– ಎಂ. ಮಲ್ಲಿಕಾರ್ಜುನ ಸ್ವಾಮಿ, ರೇಷ್ಮೆ ಜಂಟಿ ನಿರ್ದೇಶಕ, ರಾಮನಗರ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.