ADVERTISEMENT

ಮಾಗಡಿ: ಅದ್ದೂರಿ ಸೋಮೇಶ್ವರ ಬ್ರಹ್ಮ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 3:11 IST
Last Updated 26 ಜನವರಿ 2026, 3:11 IST
ಮಾಗಡಿ ಪಟ್ಟಣದ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ರಥಸಪ್ತಮಿ ಅಂಗವಾಗಿ ಭಾನುವಾರ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಜರುಗಿತು
ಮಾಗಡಿ ಪಟ್ಟಣದ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ರಥಸಪ್ತಮಿ ಅಂಗವಾಗಿ ಭಾನುವಾರ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಜರುಗಿತು   

ಮಾಗಡಿ: ಪಟ್ಟಣದ ಐತಿಹಾಸಿಕ ಪ್ರಸನ್ನ ಸೋಮೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಭಾನುವಾರ ಅದ್ದೂರಿಯಾಗಿ ನೆರವೇರಿತು. ರಥಸಪ್ತಮಿ ಅಂಗವಾಗಿ ಪ್ರತಿ ವರ್ಷದಂತೆ ಸೋಮೇಶ್ವರ ದೇವಾಲಯದಲ್ಲಿ ಬೆಳಗ್ಗೆ ರುದ್ರಹೋಮ, ಯಾತ್ರಾದಾನ ಸೇವೆ ಸೇರಿದಂತೆ ವಿವಿಧ ಪೂಜೆ, ವಿಧಿ ವಿಧಾನಗಳು ಜರುಗಿದವು.

ಮಧ್ಯಾಹ್ನ 12.40ರಿಂದ 1.30ರ ಶುಭ ಗಳಿಗೆಯಲ್ಲಿ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ರಥೋತ್ಸವಕ್ಕೆ ಚಾಳನೆ ನೀಡಲಾಯಿತು. ಭಕ್ತರು ಜೈಕಾರ ಹಾಕುತ್ತ ರಥ ಎಳೆದರು. ಬಾಳೆಹಣ್ಣು, ದವನವನ್ನು ರಥಕ್ಕೆ ಎಳೆದು ಪುನೀತರಾದರು.

ದೇವಸ್ಥಾನದ ಅರ್ಧ ಭಾಗದವರೆಗೂ ಮಾತ್ರ ರಥವನ್ನು ಎಳೆದು, ಸಂಜೆ ಮತ್ತೆ ರಥ ಎಳೆಯುವುದು ಇಲ್ಲಿನ ವಿಶೇಷ. ಶಾಸಕ ಎಚ್.ಸಿ. ಬಾಲಕೃಷ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಸೇರಿದಂತೆ ಗಣ್ಯರು ರಥೋತ್ಸವದಲ್ಲಿ ಭಾಗವಹಿಸಿದರು.

ADVERTISEMENT

ಈ ವೇಳೆ ಮಾತನಾಡಿದ ಬಾಲಕೃಷ್ಣ, ‘ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಮೊದಲ ಹಬ್ಬವಾಗಿ ರಥಸಪ್ತಮಿ ಆಚರಿಸಲಾಗುತ್ತದೆ. ಸೋಮವೇಶ್ವರ ದೇವಸ್ಥಾನವು ಕೆಂಪೇಗೌಡರ ಕಾಲದ ಐತಿಹಾಸಿಕ ದೇವಸ್ಥಾನವಾಗಿದೆ’ ಎಂದು ಹೇಳಿದರು.

‘ದೇವಸ್ಥಾನ ಅಭಿವೃದ್ಧಿಗಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರ ಸಹಕಾರದೊಂದಿಗೆ ₹20 ಕೋಟಿ ವೆಚ್ಚದ ನೀಲನಕ್ಷೆ ತಯಾರಿಸಲಾಗಿದೆ. ಗೋಪುರ ಸೇರಿದಂತೆ ಮೂಲಸೌಕರ್ಯಗಳಿಗೆ ಆದ್ಯತೆ ನೀಡಿ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದಲೇ ಅಭಿವೃದ್ಧಿ ಮಾಡಲಾಗುವುದು’ ಎಂದರು.

‘ದೇವರಿಗೆ ತಾಲ್ಲೂಕು ಮಾತ್ರವಲ್ಲದೆ ವಿವಿಧ ಭಾಗದ ಭಕ್ತರಿದ್ದಾರೆ. ದೇವಸ್ಥಾನದ ಹಿಂಭಾಗದಲ್ಲಿ 63 ಅಡಿ ಎತ್ತರದ ಶಿವನ ಪ್ರತಿಮೆ ನಿರ್ಮಾಣ ಮಾಡುವ ಗುರಿ ಇದೆ. ಮುಂದಿನ ವರ್ಷ ಹೊಸ ರಥದಲ್ಲಿ ಬ್ರಹ್ಮ ರಥೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲಾಗುವುದು’ ಎಂದು ತಿಳಿಸಿದರು.

ಎಚ್.ಎಂ. ರೇವಣ್ಣ ಮಾತನಾಡಿ, ‘ತಾಲ್ಲೂಕಿನ ಅಭಿವೃದ್ಧಿ ಜೊತೆಗೆ ಸಾಂಸ್ಕೃತಿಕ ವೈಭವವು ಮುಖ್ಯವಾಗಿದೆ. ಸೋಮೇಶ್ವರ ಸ್ವಾಮಿಯ ರಥ ಶಿಥಿಲವಾಗಿದೆ ಎಂದು ತಿಳಿದ ಕೂಡಲೇ ಬಾಲಕೃಷ್ಣ ಅವರು ಹೊಸ ರಥ ಮಾಡಿಸುತ್ತಿದ್ದಾರೆ. ಮುಂದಿನ ವರ್ಷ ಅವರಿಂದಲೇ ಹೊಸ ರಥ ಎಳೆಯೋಣ. ಕೆಂಪೇಗೌಡರ ಕಾಲದ ದೇವಸ್ಥಾನ ಅಭಿವೃದ್ಧಿಯಾಗಿ ಎಲ್ಲರಿಗೂ ಒಳಿತಾಗಲಿ’ ಎಂದು ಹೇಳಿದರು.

ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಸಂಜೆ ಸಂಗೀತೋತ್ಸವ ಮತ್ತು ಉಯ್ಯಾಲೋತ್ಸವ ನಡೆಯಿತು. ತಹಶೀಲ್ದಾರ್ ತೇಜಸ್ವಿನಿ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ, ಮುಖಂಡರಾದ ಜೆ.ಪಿ. ಚಂದ್ರೇಗೌಡ, ಬಾಲಾಜಿ ರಂಗನಾಥ್, ಪೂಜಾರಿಪಾಳ್ಯ ಕೃಷ್ಣಮೂರ್ತಿ, ಶೈಲಜಾ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಪಟೇಲ್, ಸದಸ್ಯರಾದ ಗೋಪಾಲ ದೀಕ್ಷಿತ್, ನಾಗರಾಜು, ಸತೀಶ್ ಪ್ರಸಾದ್, ಶಿವರಾಜು, ಮಂಜುನಾಥ್, ಪೂಜಾ ಶಾಂತಕುಮಾರ್, ಹೇಮಲತಾ ನಾಗರಾಜು ಹಾಗೂ ಇತರರು ಇದ್ದರು.

ಬ್ರಹ್ಮ ರಥೋತ್ಸವ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.