ADVERTISEMENT

ಮಾಗಡಿ: ಯಶಸ್ವಿ ಆಗುತ್ತ ಲಾಕ್‌ಡೌನ್‌?

ಏರುತ್ತಲೇ ಇದೆ ಕೊರೊನಾ ಸೋಂಕಿತರು, ಸಾವಿನ ಸಂಖ್ಯೆ; ಬೇಕಿದೆ ಜನರ ಸಹಕಾರ

ಆರ್.ಜಿತೇಂದ್ರ
Published 12 ಜುಲೈ 2020, 14:39 IST
Last Updated 12 ಜುಲೈ 2020, 14:39 IST
ಮಾಗಡಿ ತರಕಾರಿ ಮಾರುಕಟ್ಟೆಯಲ್ಲಿನ ಜನಸಂದಣಿ (ಸಂಗ್ರಹ ಚಿತ್ರ)
ಮಾಗಡಿ ತರಕಾರಿ ಮಾರುಕಟ್ಟೆಯಲ್ಲಿನ ಜನಸಂದಣಿ (ಸಂಗ್ರಹ ಚಿತ್ರ)   

ರಾಮನಗರ: ದಿನ ಕಳೆದಂತೆಲ್ಲ ಕೋವಿಡ್‌ ಸೋಂಕಿತರ ಮನೆಯಾಗುತ್ತಿರುವ ಮಾಗಡಿಯಲ್ಲಿ ಈ ಬಾರಿಯ ಸ್ವಯಂಪ್ರೇರಿತ ಲಾಕ್‌ಡೌನ್ ಪರಿಣಾಮ ಬೀರುತ್ತದೆಯಾ?

ಇಂತಹದ್ದೊಂದು ಪ್ರಶ್ನೆ ಮಾಗಡಿಯ ಜನಮಾನಸದಲ್ಲಿ ಕೇಳಿಬರತೊಡಗಿದೆ. ಕಳೆದೊಂದು ತಿಂಗಳಿನಿಂದಲೂ ಇಲ್ಲಿ ಆಗಾಗ್ಗೆ ಜನರು ಸ್ವಯಂಪ್ರೇರಿತವಾಗಿ ಲಾಕ್‌ಡೌನ್‌ ಹೇರಿಕೊಳ್ಳುತ್ತಲೇ ಇದ್ದಾರೆ. ಆದರೆ ಅದ್ಯಾವುದೂ ಅಷ್ಟು ಪರಿಣಾಮ ಬೀರಿಲ್ಲ. ಬದಲಾಗಿ ಸೋಂಕಿತರ ಸಂಖ್ಯೆ ದುಪ್ಪಟ್ಟು ಆಗುತ್ತಲೇ ಇದೆ. ಈ ವಿಚಾರದಲ್ಲಿ ಮಾತ್ರ ಉಳಿದೆಲ್ಲ ತಾಲ್ಲೂಕಿನಿಂದ ಮಾಗಡಿಯೇ ಮುಂದಿದೆ.

ಬೆಂಗಳೂರು ನಂಟು: ಮಾಗಡಿ ಪಟ್ಟಣ ಮಾತ್ರವಲ್ಲದೇ ಹಳ್ಳಿಗಳಲ್ಲೂ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದೆ. ಬೆಂಗಳೂರಿನೊಡನೆ ಇಲ್ಲಿನ ಜನರು ಹೊಂದಿರುವ ನಂಟು ಸೋಂಕು ಹೆಚ್ಚಳಕ್ಕೆ ಕಾರಣ ಇರಬಹುದು ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ADVERTISEMENT

ಮಾಗಡಿಯ ಹೆಚ್ಚಿನ ಮಂದಿ ತಮ್ಮ ವ್ಯಾಪಾರ-ವಹಿವಾಟು ಮೊದಲಾದ ಕಾರ್ಯಗಳಿಗೆ ಬೆಂಗಳೂರಿಗೆ ಹೋಗಿ ಬರುತ್ತಾರೆ. ಈ ಊರಿನ ಜನ ಜಿಲ್ಲಾ ಕೇಂದ್ರವಾದ ರಾಮನಗರಕ್ಕಿಂತ ರಾಜಧಾನಿಯತ್ತಲೇ ಹೆಚ್ಚು ಸಂಪರ್ಕ ಇಟ್ಟುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸದ್ಯ ಕೊರೊನಾ ಉಲ್ಬಣಗೊಂಡಿದ್ದು, ಅದರ ಪರಿಣಾಮ ಮಾಗಡಿಯ ಮೇಲೂ ಆಗುತ್ತಿದೆ. ಈಗಲೇ ಜನರು ತಮ್ಮ ಓಡಾಟಕ್ಕೆ ತಾವೇ ನಿರ್ಬಂಧ ಹೇರಿಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಅಧಿಕಾರಿಗಳು ಎಚ್ಚರಿಸುತ್ತಾರೆ.

ಕಡಿವಾಣ ಅಗತ್ಯ: ಕಳೆದ ಎರಡು ಅವಧಿಯ ಲಾಕ್‌ಡೌನ್‌ ಯಶಸ್ವಿ ಆಗದೇ ಇರುವುದಕ್ಕೆ ಸ್ಥಳೀಯ ಆಡಳಿತದ ವೈಫಲ್ಯದ ಜೊತೆಜೊತೆಗೆ ಸಾರ್ವಜನಿಕರೂ ಕಾರಣವಾಗಿದ್ದಾರೆ. ಅಂಗಡಿ-ಮುಂಗಟ್ಟುಗಳಲ್ಲಿ, ಮಾರುಕಟ್ಟೆಗಳಲ್ಲಿ ಕಿಕ್ಕಿರಿದು ನಿಂತು ಪರಸ್ಪರ ಅಂತರ ಮರೆತು ಖರೀದಿಯಲ್ಲಿ ತೊಡಗಿದ ಕಾರಣ ತಮಗೆ ಅರಿವಿಲ್ಲದೆಯೇ ಒಬ್ಬರಿಗೊಬ್ಬರು ಸೋಂಕು ಹಬ್ಬಿಸಲು ಕಾರಣವಾಗಿದ್ದಾರೆ. ಮಾಸ್ಕ್‌ ಧರಿಸುವುದು ಕಡ್ಡಾಯ ಎಂತಿದ್ದರೂ ಜನರು ಅದನ್ನು ನಿರ್ಲಕ್ಷಿಸಿ ಓಡಾಡತೊಡಗಿದ್ದಾರೆ. ಪರಿಣಾಮವಾಗಿ ರೋಗ ನಿಯಂತ್ರಣ ಕಷ್ಟವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಆಗಬೇಕಾದ್ದು ಏನು?: ಇದೇ 13ರ ಮಧ್ಯಾಹ್ನದಿಂದ 23ರವರೆಗೂ ಮಾಗಡಿ ಪಟ್ಟಣದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿ ಇರಲಿದೆ. ಈ ಸಮಯದಲ್ಲಿ ಎಲ್ಲ ವರ್ತಕರು ಅಂಗಡಿ-ಮುಂಗಟ್ಟು ಮುಚ್ಚಿ ಸಹಕಾರ ನೀಡಬೇಕು. ಜನರು ಅಷ್ಟೇ ತೀರ ಅಗತ್ಯ ವಸ್ತು ಖರೀದಿ ಇಲ್ಲವೇ ಆರೋಗ್ಯ ಸೇವೆಗಳಿಗೆ ಮಾತ್ರ ಹೊರಗೆ ಬರಬೇಕು. ಇಷ್ಟಾದಲ್ಲಿ ಕೊರೊನಾ ಹರಡುವಿಕೆಯನ್ನು ತಕ್ಕಮಟ್ಟಿಗೆ ನಿಯಂತ್ರಣಕ್ಕೆ ತರಬಹುದು ಎನ್ನುತ್ತಾರೆ ಸ್ಥಳೀಯ ಶಾಸಕ ಎ.ಮಂಜುನಾಥ್‌.

ತಾಲ್ಲೂಕಿನ ಜನರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ಧಾವಿಸಿ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು. ಇದರಿಂದ ಸೋಂಕು ಮತ್ತೊಬ್ಬರಿಗೆ ಹರಡುವುದನ್ನು ತಪ್ಪಿಸಬಹುದು. ಸೋಂಕು ಇದ್ದರೂ ಮುಚ್ಚಿಡುವುದು ಅಪರಾಧ. ಹೀಗಾಗಿ ಪ್ರತಿಯೊಬ್ಬರು ತಪಾಸಣೆಗೆ ಒಳಗಾಗಬೇಕು ಎನ್ನುತ್ತಾರೆ ತಾಲ್ಲೂಕಿನ ವೈದ್ಯಾಧಿಕಾರಿ ಡಾ. ಸತೀಶ್‌.

ಮೃತ್ಯಕೂಪ: ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ನಿಂದ 8 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 7 ಮಂದಿ ಮಾಗಡಿಯವರೇ ಆಗಿರುವುದು ದುರಂತ. ಇಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಹೀಗಾಗಿ ರೋಗ ನಿಯಂತ್ರಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.