ಹಾರೋಹಳ್ಳಿ: ತಾಲ್ಲೂಕಿನ ಹತ್ತಾರು ಹಳ್ಳಿಗಳ ಜೀವನಾಡಿಯಾಗಿರುವ ಸುವರ್ಣಮುಖಿ ಎಡದಂಡೆ ನಾಲೆಗಳು ದುರಸ್ತಿ ಇಲ್ಲದೆ ಸೊರಗಿದ್ದು, ರೈತರ ಬದುಕು ದುಸ್ತರವಾಗಿದೆ.
ತಾಲ್ಲೂಕಿನ ಅರ್ಧದಷ್ಟು ಗ್ರಾಮಗಳು ವೃಷಭಾವತಿ ಹಾಗೂ ಸುವರ್ಣಮುಖಿ ನಾಲೆಗಳನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ರೈತರ ಹಿತ ಕಾಯಬೇಕಾದ ಸರ್ಕಾರ ತನ್ನ ಜವಾಬ್ದಾರಿ ಮರೆತಿದ್ದು, ಇದರಿಂದ ರೈತರು ತಮ್ಮ ಸ್ವಂತ ಹಣದಲ್ಲಿ ದುರಸ್ತಿ ಕೆಲಸಕ್ಕೆ ಮುಂದಾಗಿದ್ದಾರೆ.
ಹತ್ತಾರು ಹಳ್ಳಿಗಳ ಜೀವನಾಡಿ: ಸುವರ್ಣಮುಖಿ ಎಡದಂಡೆ ನಾಲೆಗಳನ್ನು ನಂಬಿ ಮೇಡಮಾರನಹಳ್ಳಿ, ರಾಮಸಾಗರ, ಬನ್ನಿಕುಪ್ಪೆ, ಹೊನ್ನಾಲಗನದೊಡ್ಡಿ, ಹನುಮನಹಳ್ಳಿ, ಚೀಲೂರು, ವಡೇರಹಳ್ಳಿ, ಕಾಳೇಗೌಡನದೊಡ್ಡಿ, ಕೆಂಪಯ್ಯ ದೊಡ್ಡಿ, ಬಸವನ ಬನ್ನಿಕುಪ್ಪೆ ಹೀಗೆ ಹಲವು ಗ್ರಾಮಗಳು ಬೇಸಾಯ ಮಾಡುತ್ತಿದ್ದಾರೆ. ಆದರೆ, ನಾಲೆಯಲ್ಲಿ ಗಿಡಗಂಟೆಗಳು ಬೆಳೆದಿದ್ದು, ರೈತರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ರೈತರೇ ಸ್ವಚ್ಛತಾ ಕಾರ್ಯಕ್ಕೆ ಕೈಹಾಕಿದ್ದಾರೆ.
ಸುವರ್ಣಮುಖಿ ನಾಲೆಯಲ್ಲಿ ಹರಿಯುವ ನೀರಿಗೆ ಕಾರ್ಖಾನೆಯ ತ್ಯಾಜ್ಯ ನೀರನ್ನು ಬಿಡುತ್ತಿದ್ದು, ಇದರಿಂದ ನಾಲೆ ಗಬ್ಬೇದು ನಾರುತ್ತಿದೆ. ಜಿಲ್ಲಾಡಳಿತ ಕನಿಷ್ಠ ಪಕ್ಷ ನೀರನ್ನು ಶುದ್ಧೀಕರಿಸಿ ನಾಲೆಗಳಿಗೆ ಹರಿಸಬಹುದಿತ್ತು. ಆ ಕೆಲಸವನ್ನೂ ಮಾಡಿಲ್ಲ.
ಅಸಮರ್ಪಕ ನಿರ್ವಹಣೆ: ನಾಲೆಗಳಲ್ಲಿ ಅಲ್ಲಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ನಾಲೆ ಪಕ್ಕದಲ್ಲಿ ಗಿಡಗಂಟೆ ಬೆಳೆದು ನೀರು ಸರಾಗವಾಗಿ ಹರಿಯುವುದಕ್ಕೆ ಅಡ್ಡಿಯಾಗಿದೆ. ಹಾಗಾಗಿ ರೈತರ ಜಮೀನುಗಳಿಗೆ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ. ನಾಲೆ ಅಸಮರ್ಪಕ ನಿರ್ವಹಣೆಯೇ ಇದಕ್ಕೆ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಹಲವು ಯೋಜನೆಗಳಿಗೆ ನೂರಾರು ಕೋಟಿ ಹಣ ಖರ್ಚು ಮಾಡಿದರೂ ಸಹ ರೈತರಿಗೆ ಪ್ರಯೋಜನವಾಗಿಲ್ಲ. ನಾಲೆಗಳ ದುರಸ್ತಿಗೆ ಅನುದಾನವಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಸ್ತಿ ಕಾರ್ಯವಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಸುವರ್ಣ ಮುಖಿ ಎಡದಂಡೆ ನಾಲೆ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು ಆದಷ್ಟು ಬೇಗ ರೈತರ ಸಮಸ್ಯೆ ಬಗೆಹರಿಸಲಾಗುವುದುಕೊಟ್ರೇಶ್ ಸಹಾಯಕ ಕಾರ್ಯಪಾಲಕ ಅಭಿಯಂತರ ಸಣ್ಣ ನೀರಾವರಿ ಇಲಾಖೆ ರಾಮನಗರ
ನೀರಾವರಿ ಯೋಜನೆಗಳು ರೈತರ ಪಾಲಿಗೆ ಶಾಪ
ನಾಲೆಯಿಂದ ರೈತರಿಗೆ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಮಳೆಗಾಲದಲ್ಲೇ ಈ ಭಾಗದ ರೈತರಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಇನ್ನೂ ಬೇಸಿಗೆ ಬೆಳೆಗೆ ನೀರು ಕನಸಿನ ಮಾತು. ನಿರ್ವಹಣೆ ಇಲ್ಲದೆ ನಾಲೆ ಹಾಳಾಗಿದ್ದು ನೀರಾವರಿ ಯೋಜನೆಗಳು ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿವೆ ನಂದಕುಮಾರ್ ಹನುಮನಹಳ್ಳಿ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.