ADVERTISEMENT

ರಾಮನಗರ: ‘ಶಿಕ್ಷಕರ ಸಮಸ್ಯೆ ಜೀವಂತವಾಗಿ ಇಟ್ಟ ಪುಟ್ಟಣ್ಣ’

ಜೆಡಿಎಸ್‌ ನಿಯೋಜಿತ ಅಭ್ಯರ್ಥಿ ಎ.ಪಿ.ರಂಗನಾಥ್ ಆರೋಪ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 8:40 IST
Last Updated 13 ಸೆಪ್ಟೆಂಬರ್ 2020, 8:40 IST
ಚನ್ನಪಟ್ಟಣದಲ್ಲಿ ಶಿಕ್ಷಕರ ಕ್ಷೇತ್ರದ ಜೆ.ಡಿ.ಎಸ್ ನಿಯೋಜಿತ ಅಭ್ಯರ್ಥಿ ಎ.ಪಿ.ರಂಗನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಚನ್ನಪಟ್ಟಣದಲ್ಲಿ ಶಿಕ್ಷಕರ ಕ್ಷೇತ್ರದ ಜೆ.ಡಿ.ಎಸ್ ನಿಯೋಜಿತ ಅಭ್ಯರ್ಥಿ ಎ.ಪಿ.ರಂಗನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಚನ್ನಪಟ್ಟಣ: ’ಹದಿನೆಂಟು ವರ್ಷಗಳಿಂದ ಶಿಕ್ಷಕರ ಪ್ರತಿನಿಧಿಯಾಗಿರುವ ಪುಟ್ಟಣ್ಣ ಅವರು ಶಿಕ್ಷಕರ ಸಮಸ್ಯೆಗಳನ್ನು ಇಂದಿಗೂ ಜೀವಂತವಾಗಿ ಇಟ್ಟಿದ್ದಾರೆ’ ಎಂದು ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆಡಿಎಸ್‌ ನಿಯೋಜಿತ ಅಭ್ಯರ್ಥಿ ಎ.ಪಿ.ರಂಗನಾಥ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ನಿಂದ ಗೆದ್ದು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಪುಟ್ಟಣ್ಣ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಗೆಲುವು ಸಾಧಿಸಿ ಪಕ್ಷಾಂತರ ಮಾಡಿದ್ದೆ ಅವರ ಸಾಧನೆ. ಈಗ ಗೆಲ್ಲುವ ಭ್ರಮೆಯಲ್ಲಿ ಬಿಜೆಪಿಗೆ ಸೇರಿದ್ದು, ಈ ಬಾರಿ ಪ್ರಜ್ಞಾವಂತ ಶಿಕ್ಷಕ ಮತದಾರರು ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.

’ವಕೀಲನಾದರೂ ಶಿಕ್ಷಕರ ಬಗ್ಗೆ ಮೊದಲಿನಿಂದಲೂ ವಿಶೇಷವಾದ ಕಾಳಜಿ ಹೊಂದಿ ಶಿಕ್ಷಕರ ಸೌಲಭ್ಯಗಳಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ಕ್ಷೇತ್ರಕ್ಕೆ ಒಳಪಡುವ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಶಿಕ್ಷಕರು, ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಬಾರಿ ಶಿಕ್ಷಕರು ನನಗೆ ಗೆಲುವು ತಂದು ಕೊಡುವ ವಿಶ್ವಾಸವಿದೆ’ ಎಂದರು.

ADVERTISEMENT

ಕೊರೊನಾ ಸಂದರ್ಭದಲ್ಲಿ ಶಿಕ್ಷಕ ಸಮುದಾಯ ತೀರಾ ಸಂಕಷ್ಟಕ್ಕೆ ಒಳಗಾಗಿದ್ದರು. ಶಿಕ್ಷಕರ ಪ್ರತಿನಿಧಿಯಾಗಿದ್ದುಕೊಂಡು ಪುಟ್ಟಣ್ಣ ಶಿಕ್ಷಕರ ನೋವಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಹೋರಾಟ ಮಾಡಿ ಸರ್ಕಾರದ ಮೇಲೆ ಒತ್ತಡ ತಂದಿದ್ದೇನೆ. ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕೋರಿ ಪತ್ರ ಬರೆದ ಪರಿಣಾಮ ಸರ್ಕಾರ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿಸಿದರು.

ಜೆಡಿಎಸ್ ಹಿರಿಯ ಮುಖಂಡ ಸಿಂ.ಲಿಂ.ನಾಗರಾಜು ಮಾತನಾಡಿ, ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಹೆಸರಿನಿಂದ ಪುಟ್ಟಣ್ಣ ಅವರು ಶಿಕ್ಷಕರ ಪ್ರತಿನಿಧಿಯಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಉಪಸಭಾಪತಿಯಾಗಿ ಅಧಿಕಾರ ಅನುಭವಿಸಿ ತಾನು ಮತ್ತು ತನ್ನ ಕುಟುಂಬವನ್ನು ಅಭಿವೃದ್ಧಿಪಡಿಸಿಕೊಂಡು ಕೋಟ್ಯಂತರ ಮೌಲ್ಯದ ವಿದ್ಯಾಸಂಸ್ಥೆ ಕಟ್ಟಿಕೊಂಡಿದ್ದಾರೆ ಎಂದು ಆರೋಪಿಸಿದರು.

ಜೆ.ಡಿ.ಎಸ್ ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ, ಬೆಂಗಳೂರು ನಗರ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್, ವಕೀಲ ದಿಲೀಪ್ ಕುಮಾರ್, ಶಾಸಕರ ಆಪ್ತ ಸಹಾಯಕ ಕೆಂಚೇಗೌಡ, ಮುಖಂಡ ಮಧುಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.