ADVERTISEMENT

ಚಿಕ್ಕ ತಿರುಪತಿಯೆಂದೇ ಹೆಸರಾದ ಕ್ಷೇತ್ರ ಕಲ್ಲಹಳ್ಳಿ ಶ್ರೀನಿವಾಸಸ್ವಾಮಿ ದೇವಾಲಯ

ವೈಕುಂಠ ಏಕಾದಶಿ

ಬರಡನಹಳ್ಳಿ ಕೃಷ್ಣಮೂರ್ತಿ
Published 17 ಡಿಸೆಂಬರ್ 2018, 12:50 IST
Last Updated 17 ಡಿಸೆಂಬರ್ 2018, 12:50 IST
ಕಲ್ಲಹಳ್ಳಿ ಶ್ರೀವೆಂಕಟರಮಣಸ್ವಾಮಿ ದೇವಾಲಯ
ಕಲ್ಲಹಳ್ಳಿ ಶ್ರೀವೆಂಕಟರಮಣಸ್ವಾಮಿ ದೇವಾಲಯ   

ಕನಕಪುರ: ತಾಲ್ಲೂಕಿನಲ್ಲಿ ಧಾರ್ಮಿಕವಾಗಿ ಪ್ರಸಿದ್ಧಿ ಪಡೆದಿರುವ ಚಿಕ್ಕತಿರುಪತಿಯೆಂದೇ ಹೆಸರಾಗಿರುವ ಕಲ್ಲಹಳ್ಳಿ ಶ್ರೀನಿವಾಸ ದೇವಾಲಯದಲ್ಲಿ ವೈಕುಂಠ ಏಕಾದಶಿ ಕಾರ್ಯಕ್ರಮ ಡಿ.18ರಂದು ವಿಜೃಂಭಣೆಯಿಂದ ನೆರವೇರಲಿದೆ.

ಸುಮಾರು 900 ವರ್ಷಗಳಷ್ಟು ಹಳೆಯದಾದ ಪ್ರಾಚೀಲ ಇತಿಹಾಸ ಹೊಂದಿರುವ ದೇಗುಲ ಇದಾಗಿದೆ. ಇಂತಹ ಧಾರ್ಮಿಕ ಕ್ಷೇತ್ರದಲ್ಲಿ ಪೂಜೆ ಪುರಸ್ಕಾರ ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ತೀರಾ ಹಳೆಯದಾದ ದೇವಾಲಯವನ್ನು 1998ರಲ್ಲಿ ಬೆಂಗಳೂರಿನ ಶಿಂಧೆ ಬ್ರದರ್ಸ್ ಜೀರ್ಣೋದ್ಧಾರಕ್ಕೆ ಮುಂದಾದರು.

ದೇವಾಲಯದ ಸುತ್ತಲೂ ಹೊಸದಾಗಿ ಕಾಂಪೌಂಡ್‌, ರಾಜಗೋಪುರ, ಕಲ್ಯಾಣೋತ್ಸವ ಮಂಟಪ, ವೈಕುಂಠದ್ವಾರ, ದಂರ್ಪಣ ಮಂದಿರ‌, ಭಕ್ತರಿಗೆ ಶೌಚಾಲಯ, ದೇವರ ಪ್ರಸಾದಕ್ಕೆ ತಳಿಗೆ ಮನೆಯ ನಿರ್ಮಾಣ ಕಾರ್ಯ 2012ರ ವೇಳೆಗೆ ಪೂರ್ಣಗೊಂಡಿತು.

ADVERTISEMENT

ಸ್ಥಳ ಮಹಿಮೆಯಿಂದ ಈ ದೇವಾಲ‌ಯ ಚಿಕ್ಕತಿರುಪತಿಯೆಂದೇ ಪ್ರಖ್ಯಾತಿ ಪಡದಿದೆ. ಇಲ್ಲಿ ನಡೆಯುವ ವೈಕುಂಠ ಏಕಾದಶಿ ಮತ್ತು ಜಾತ್ರಾ ಮಹೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬಂದು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಶ್ರೀವೆಂಕಟರಮಣಸ್ವಾಮಿ ನಿತ್ಯ ಪೂಜಾಭಿಷೇಕ ಹಾಗೂ ಪ್ರಸಾದ ವಿನಿಯೋಗ ಸಮಿತಿ ವತಿಯಿಂದ ಪ್ರತಿ ಶನಿವಾರ ಭಕ್ತರಿಗೆ ದಾಸೋಹ ನಡೆಯಲಿದೆ.

ಕಲ್ಲಹಳ್ಳಿ ಸೇರಿದಂತೆ ಸುತ್ತಲಿನ ಹಳ್ಳಿಗಳ ಜನರು ಶ್ರೀನಿವಾಸ ಜಾತ್ರಾ ಮಹೋತ್ಸವ ಹಾಗೂ ಕಲ್ಯಾಣೋತ್ಸವ ನೆರವೇರಿಸುತ್ತಾರೆ. ವೈಕುಂಠ ಏಕಾದಶಿಯ ಅಂಗವಾಗಿ ಸೋಮವಾರ ರಾತ್ರಿ 12ಗಂಟೆ ನಂತರ ದೇವರಿಗೆ ಹಾಲಿನ ಅಭಿಷೇಕ ನೆರವೇರಿಸಿ ದೇವರ ಉತ್ಸವ ಮೂರ್ತಿಗೆ ಒಡವೆ ಹಾಗೂ ವಿವಿಧ ಹೂಗಳಿಂದ ಅಲಂಕಾರ ನಡೆಯಲಿದೆ.

ಮಂಗಳವಾರ ಬೆಳಗಿನ ಜಾವ 4ಕ್ಕೆ ವೈಕುಂಠ ದ್ವಾರದಲ್ಲಿ ಶ್ರೀದೇವಿ ಮತ್ತು ಭೂದೇವಿ ಸಮೇತ ಶ್ರೀನಿವಾಸಸ್ವಾಮಿ ಉತ್ಸವ ಮೂರ್ತಿಯನ್ನು ಇಟ್ಟು ವೈಕುಂಠ ದ್ವಾರ ತೆರೆಯಲಾಗುತ್ತದೆ. ಬೆಳಿಗ್ಗೆ 5ಗಂಟೆ ನಂತರ ಭಕ್ತರಿಗೆ ದರ್ಶನ ಅವಕಾಶ ನೀಡಲಾಗುತ್ತದೆ. ರಾತ್ರಿ 11ಗಂಟೆಯವರೆಗೂ ಭಕ್ತರು ದರ್ಶನ ಮಾಡಬಹುದಾಗಿದೆ.

ಹಲವು ವರ್ಷಗಳಿಂದ ಪೂಜಾ ಕಾರ್ಯ ನೆರವೇರಿಸಿಕೊಂಡು ಬಂದಿರುವ ಅರ್ಚಕರ ಕುಟುಂಬ ದೇವರ ಪೂಜಾ ಕಾ‌ರ್ಯ ನೆರವೇರಿಸಿಕೊಡಲಿದೆ. ದೇವರಿಗೆ ಹರಕೆ ಹೊತ್ತು ಪ್ರತಿವರ್ಷ ಪ್ರಸಾದ ಮತ್ತು ಲಾಡು ವಿತರಣೆ ಮಾಡುವ ಕುಟುಂಬಗಳು ಎಂದಿನಂತೆ ತಮ್ಮ ಸೇವೆ ಮುಂದುವರಿಸಲಿವೆ.

ವೈಕುಂಠ ಏಕಾದಶಿಗೆ ಸುಮಾರು 50 ಸಾವಿರದಷ್ಟು ಭಕ್ತರು ಬರುವ ನಿರೀಕ್ಷೆ ಇದೆ. ಭಕ್ತರಿಗೆ ಲಾಡು ಹಂಚಿಕೆ ಮಾಡಲು ಸಿದ್ದತೆ ನಡೆದಿದೆ. ದೇವಾಲಯ ಮುಜರಾಯಿ ಇಲಾಖೆಗೆ ಸೇರಿರುವುದರಿಂದ ತಹಶೀಲ್ದಾರ್‌ ದೇವಾಲಯದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ.

ದೇವಾಲಯದ ಸುತ್ತ ಸೂಕ್ತ ಭದ್ರ ಒದಗಿಸಿ, ಶ್ರಿನಿವಾಸನ ದರ್ಶನ ಪಡೆದು ವೈಕುಂಠದ್ವಾರ ಪ್ರವೇಶ ಮಾಡಲು ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.