ADVERTISEMENT

ಕೆಂಪೇಗೌಡರು ಕಟ್ಟಿಸಿದ ಕೆರೆಗೆ ಕುತ್ತು

ಚಾರಿತ್ರಿಕ ಭಾರ್ಗಾವತಿ ಕೆರೆಗೆ ಒಳಚರಂಡಿ ಕಲ್ಮಶ l ಕಣ್ಣೆತ್ತಿ ನೋಡದ ಅಧಿಕಾರಿಗಳು l 27ರಂದು ಕೆಂಪೇಗೌಡರ ಜಯಂತಿ

ದೊಡ್ಡಬಾಣಗೆರೆ ಮಾರಣ್ಣ
Published 25 ಜೂನ್ 2021, 4:13 IST
Last Updated 25 ಜೂನ್ 2021, 4:13 IST
ಮಾಗಡಿಯ ಭಾರ್ಗಾವತಿ ಕೆರೆಯ ಏರಿಯ ದುಃಸ್ಥಿತಿ
ಮಾಗಡಿಯ ಭಾರ್ಗಾವತಿ ಕೆರೆಯ ಏರಿಯ ದುಃಸ್ಥಿತಿ   

ಮಾಗಡಿ: ಮುಮ್ಮಡಿ ಕೆಂಪೇಗೌಡರು ನಿರ್ಮಿಸಿದ ಭಾರ್ಗಾವತಿ ಕೆರೆಗೆ ಸಂಕಷ್ಟದಲ್ಲಿದೆ. ಶತಮಾನಗಳ ಇತಿಹಾಸ ಹೊಂದಿರುವ ಕೆರೆಗೆ ಕಾಯಕಲ್ಪ ನೀಡುವಲ್ಲಿ ಸ್ಥಳೀಯ ಆಡಳಿತ ಸೇರಿದಂತೆ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಕೆರೆಯ ಕಲ್ಮಶದಿಂದ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಸ್ಥಳೀಯರಿದ್ದಾರೆ. ಇಂತಹ ಸಂದರ್ಭದಲ್ಲೇ ಕೆಂಪೇಗೌಡರ ಜಯಂತಿಗೆ ಸಿದ್ಧತೆಯೂ ನಡೆಯುತ್ತಿದೆ.

ಮುಮ್ಮಡಿ ಕೆಂಪೇಗೌಡರು ತಮ್ಮ ಮಡದಿ ಭಾರ್ಗಾವತಿಯ ಸವಿನೆನಪಿಗಾಗಿ ಕಟ್ಟಿಸಿರುವ ಸಿಹಿನೀರಿನ ತಟಾಕವೇಈ ಭಾರ್ಗಾವತಿ ಕೆರೆ. ಸುಮಾರು 235 ಎಕರೆ ಪ್ರದೇಶದಲ್ಲಿರುವ ಈ ಕೆರೆ ಹಿಂದೆ ಕುಡಿಯುವ ನೀರಿನ ತಾಣವಾಗಿತ್ತು. ರೈತರ ಬದುಕಿಗೆ ಆಸರೆಯಾಗಿತ್ತು. ಆದರೆ, ಇಂದು ಮಾಗಡಿ ನಗರ ಸಂಪೂರ್ಣ ಒಳಚರಂಡಿ ನೀರಿನ ತಾಣವಾಗಿದೆ. ಈ ಕೆರೆಯನ್ನು ಅಭಿವೃದ್ಧಿಗೊಳಿಸಲು ಅಥವಾ ಕಲ್ಮಶವನ್ನು ತಡೆಯಲು ಜಿಲ್ಲಾಡಳಿತ, ಸಚಿವರು, ಅಧಿಕಾರಿಗಳು, ಕೆಂಪೇಗೌಡರ ಹೆಸರಿನ ಸಂಘ–ಸಂಸ್ಥೆಗಳೂ ಆಸಕ್ತಿ ವಹಿಸಿಲ್ಲ ಎಂಬುದು ಸ್ಥಳೀಯರ ದೂರಾಗಿದೆ.

‘ಕೆರೆಗೆ 7 ವರ್ಷಗಳಿಂದಲೂ ಒಳಚರಂಡಿ ಕಲುಷಿತ ಹರಿಯ
ಬಿಡಲಾಗಿದೆ. ಇದನ್ನು ನಿಲ್ಲಿಸಿ, ಕೆರೆಯನ್ನು ಸ್ವಚ್ಛವಾಗಿರಿಸಿ ಎಂದು ಸಾಕಷ್ಟು ಬಾರಿ ಹೋರಾಟ ಮಾಡಿದ್ದೇವೆ. ತಹ
ಶೀಲ್ದಾರರಿಗೆ ಮನವಿಯೂ ನೀಡಲಾಗಿದೆ. ಆದರೆ ಯಾರೂ ಇತ್ತ ತಿರುಗಿ ನೋಡಿಲ್ಲ. ಜಿಲ್ಲಾಡಳಿತವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ’ ಎಂದು ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಆಗ್ರಹಿಸಿದರು.

ADVERTISEMENT

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಪುರಸಭೆ ವತಿಯಿಂದ 2014ರಲ್ಲಿ ಬಹುಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಒಳಚರಂಡಿ ಪೈಪ್‌ಗಳ ಅಳವಡಿಕೆ ಆರಂಭವಾಯಿತು. ಭೂ ಸಮತಳಿ, ಇಳಿಜಾರಿನ ಕಡೆ ನಕ್ಷೆ ತಯಾರಿಸದೆ, ಗುತ್ತಿಗೆದಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅವೈ
ಜ್ಞಾನಿಕ ಕಳಪೆ ಕಾಮಗಾರಿ ನಡೆಯಿತು. ಹಣ ಖರ್ಚಾಗಿದೆ. ಅಂದಿನಿಂದ ಇಂದಿನ ತನಕ ಪಟ್ಟಣದಲ್ಲಿ ಒಂದಲ್ಲ ಒಂದು ಕಡೆ ಒಳಚರಂಡಿ ಚೇಂಬರ್ ಕಟ್ಟಿಕೊಂಡು ಕಲುಷಿತ ರಸ್ತೆಯ ಮೇಲೆ ಹರಿಯುತ್ತಿದೆ. ದುರ್ಗಂಧ ಬೀರುವುದು ನಡೆದಿದೆ ಇದೆ. ಕೊನೆಗೆ ಭಾರ್ಗಾವತಿ ಕೆರೆಗೆ ಕಲುಷಿತ ಸೇರಿಕೊಳ್ಳುತ್ತಿದೆ.

ಪಟ್ಟಣದ ಒಳಚರಂಡಿಯ ಕೊಳವೆಮಾರ್ಗಕ್ಕೆ ಪರಂಗಿಚಿಕ್ಕನ ಪಾಳ್ಯದ ಬಳಿ ಬಯೋಮೇಥಾನೇಷನ್ ಪ್ಲಾಂಟ್ ಕ್ರಷರ್ ಮೆಷಿನ್ ರೂಂ ಮತ್ತು ವೆಟ್ವೆಲ್ ನಿರ್ಮಿಸಿದರು. ಪುರ ಗ್ರಾಮದ ಎತ್ತರದ ಪ್ರದೇಶದ ಮೇಲೆ ಒಳಚರಂಡಿ ಯೋಜನೆಯಡಿ 3.70 ಎಂಎಲ್‌ಡಿ ಸಾಮರ್ಥ್ಯದ ಮಲಿನ ನೀರಿನ ಶುದ್ಧೀಕರಣ ಘಟಕದ ನಿರ್ಮಿಸಿದರು. ಆದರೆ, ಪಿ.ಸಿ.ಪಾಳ್ಯದ ಬಳಿ ಇರುವ ಚಾರಿತ್ರಿಕ ಭಾರ್ಗಾವತಿ ಕೆರೆಯ ಅಂಚಿನಲ್ಲಿ ಪಂಪ್ ಹೌಸ್ ಮಾತ್ರ ನಿರ್ಮಿಸಿ ಕೈತೊಳೆಕೊಳ್ಳಲಾಗಿದೆ.

‘ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಒಳಚರಂಡಿಯ ಕಲುಷಿತ ನೀರು ಶುದ್ಧೀಕರಣ ಘಟಕಕ್ಕೆ ಹರಿಯದೆ, ಕೆಂಪೇಗೌಡರು ನಿರ್ಮಿಸಿದ ಭಾರ್ಗಾವತಿ ಕೆರೆಯ ಒಡಲು ಸೇರುತ್ತಿದೆ. ಇಲ್ಲಿನ ನೀರು ಕಪ್ಪುಬಣ್ಣಕ್ಕೆ ತಿರುಗಿದೆ. ಕೆರೆಯ ನೀರಿನಲ್ಲಿ ತೊಳೆದ ಬಟ್ಟೆ ಧರಿಸಿದರೆ ಮೈಮೇಲೆ ಗುಳ್ಳೆಗಳು ಏಳುತ್ತಿವೆ. ಜೊತೆಗೆ ಚರ್ಮರೋಗ ಬರುತ್ತಿದೆ. ಕೆರೆಯ ನೀರು ಕುಡಿದ ಪ್ರಾಣಿ ಪಕ್ಷಿಗಳಿಗೆ ರೋಗ ಬಂದು ಮೃತಪಟ್ಟಿವೆ. ಕೆರೆಯ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲೂ ವಾಸನೆಯ ಕಪ್ಪುಬಣ್ಣದ ಕೂಡಿದ ನೀರು ಬರುತ್ತಿದೆ’ ಎಂಬುದು ಕೆರೆ ಸುತ್ತಲಿನ ಗ್ರಾಮಸ್ಥರು ದೂರು.

‘ಪುರ ಗ್ರಾಮದ ರಸ್ತೆಯ ಬಳಿ ನಿರ್ಮಿಸಿರುವ ಮಲಿನ ನೀರಿನ ಶುದ್ಧೀಕರಣ ಘಟಕಕ್ಕೆ 7 ವರ್ಷ ಕಳೆದರೂ ಒಳಚರಂಡಿಯ ಕಲುಷಿತ ಹರಿಯದೆ ಎಲ್ಲವೂ ಕೆರೆಯ ಒಡಲು ಸೇರಿ 4 ಅಡಿ ಎತ್ತರದ ಹೂಳು ತುಂಬಿದೆ’ ಎಂದು ರೈತ ಸಂಘದ ಹಿರಿಯ ಮುಖಂಡ ಚನ್ನರಾಯಪ್ಪ ತಿಳಿಸಿದರು.

ಪರಂಗಿ ಚಿಕ್ಕನ ಪಾಳ್ಯ, ಪುರ ಗ್ರಾಮ, ಮಾಡಬಾಳ್, ಉಡುವೆಗೆರೆ, ನೇತೇನಹಳ್ಳಿ, ನೆಸೆಪಾಳ್ಯ, ಗುಮ್ಮಸಂದ್ರ ಗ್ರಾಮದ ನಿವಾಸಿಗಳಿಗೆ ಕೆರೆಯಿಂದ ಕೆಟ್ಟವಾಸನೆ ಬರುತ್ತದೆ. ಕೆರೆಯನ್ನು ಶುದ್ಧೀಕರಿಸಬೇಕು ಎಂದು ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಿದರೂ ಪ್ರಯೋಜನ ವಾಗಿಲ್ಲ ಎಂದು ಪಿ.ಸಿ.ಪಾಳ್ಯದ ಹೋರಾಟಗಾರ ಗಂಗರಾಜು ಹೇಳಿದರು.

ಪುರಸಭೆ ಮಾಡಬೇಕು

‘ಒಳಚರಂಡಿ ಕಾಮಗಾರಿಯನ್ನು ಪುರಸಭೆಗೆ ಒಪ್ಪಿಸಿದ್ದೇವೆ. ಅವರೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು’ ಎಂದು ಒಳಚರಂಡಿ ಮಂಡಳಿ ಅಧಿಕಾರಿಗಳು ತಿಳಿಸಿದರು.

ಅಶ್ವತ್ಥನಾರಾಯಣಗೆ ಮನವಿ

24 ವರ್ಷಗಳಿಂದಲೂ ಕೆಂಪೇಗೌಡ ಜಯಂತ್ಯುತ್ಸವದ ಅಂಗವಾಗಿ, ಅನ್ನದಾಸೋಹ, ಉಚಿತ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ ನಡೆಸಿಕೊಂಡು ಬಂದಿದ್ದೇವೆ. ಪುರಾತನ ದೇಗುಲಗಳನ್ನು ದುರಸ್ತಿ ಮಾಡಿಸಿದ್ದೇವೆ. ಗುಡಿಗೋಪುರ, ಕೋಟೆಕೊತ್ತಲ ಉಳಿಸಲು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಭಾರ್ಗಾವತಿ ಕೆರೆಗೆ ಹರಿಯುತ್ತಿರುವ ಒಳಚರಂಡಿ ಕಲುಷಿತ ತಡೆಗಟ್ಟುವಂತೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರಿಗೆ ಮನವಿ ಸಲ್ಲಿಸಿದ್ದೇವೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೆರೆಕಟ್ಟೆ ದುರಸ್ತಿಪಡಿಸಲಾಗುತ್ತದೆ.

ಎಚ್.ಎಂ.ಕೃಷ್ಣಮೂರ್ತಿ, ಅಧ್ಯಕ್ಷ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಹಾಗೂ ಸದಸ್ಯ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ.

ಡಿಸಿಎಂ ಇತ್ತ ನೋಡಲಿ

ಪಟ್ಟಣದ ಒಳಚರಂಡಿ ಕಲುಷಿತವನ್ನು ಭಾರ್ಗಾವತಿ ಕೆರೆಗೆ ಹರಿಯಬಿಟ್ಟಿರುವುದರ ವಿರುದ್ಧ ಸಾಕಷ್ಟು ಬಾರಿ ಹೋರಾಟ ಮಾಡಿದ್ದೇವೆ. ಪುರಸಭೆ, ಪರಿಸರ ಇಲಾಖೆ, ನೀರಾವರಿ ಇಲಾಖೆ ಅಧಿಕಾರಿಗಳು ಸೇರಿದಂತೆ ತಹಶೀಲ್ದಾರ್‌, ಜಿಲ್ಲಾಧಿಕಾರಿಯವರು ಇಂತಹ ಚಾರಿತ್ರಿಕ ಕೆರೆಯತ್ತ ಒಂದು ಬಾರಿಯೂ ಬಂದಿಲ್ಲ. ಇನ್ನು ಎಲ್ಲ ಮಟ್ಟದ ಜನಪ್ರತಿನಿಧಿಗಳು, ನಮ್ಮ ತಾಲ್ಲೂಕಿನವರೆ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರೂ ಕೆಂಪೇಗೌಡರು ಕಟ್ಟಿದ ಕೆರೆಯ ಅಭಿವೃದ್ಧಿಯತ್ತ ಮನಸ್ಸು ಮಾಡಬೇಕು. ಕೆಂಪೇಗೌಡರ ಕಾಲದ ಈ ಕೆರೆಯನ್ನು ಉಳಿಸಬೇಕು. ಇಲ್ಲದಿದ್ದರೆ ಕೆಂಪೇಗೌಡರ ಹೆಸರಿಗೇ ಮಸಿ ಬಳಿದಂತೆ.

ಹೊಸಪಾಳ್ಯ ಲೋಕೇಶ್, ಅಧ್ಯಕ್ಷ, ರೈತ ಸಂಘ– ಹಸಿರು ಸೇನೆ, ಮಾಗಡಿ.

ರಾಜಕೀಯಕ್ಕೆ ಮಾತ್ರ ಕೆಂಪೇಗೌಡರು

ಕೆಂಪೇಗೌಡ ವಂಶಜರ ಜನೋಪಯೋಗಿ ಸೇವಾ ಕಾರ್ಯಗಳನ್ನು ಉಳಿಸುವ ಬದಲು ರಾಜಕೀಯ ಲಾಭಕ್ಕೆ ಕೆಂಪೇಗೌಡರ ಹೆಸರು ಬಳಸಲಾಗುತ್ತಿದೆ. ಕೆರೆಕಟ್ಟೆ, ಸ್ಮಾರಕಗಳನ್ನು ಉಳಿಸದಿದ್ದರೆ ಅನಾಹುತಕ್ಕೆ ಎಲ್ಲರೂ ಬಲಿಯಾಗಬೇಕಿದೆ. ಮಾಗಡಿ ಸೀಮೆಯಲ್ಲೇ 297 ಕೆರೆಗಳಿವೆ. ಚೋಳರು, ರಾಷ್ಟ್ರಕೂಟರು, ಹೊಯ್ಸಳರು, ಗಂಗರು, ಸ್ಥಳೀಯ ಪಾಳೇಗಾರರು, ಕೆಂಪೇಗೌಡರ ವಂಶಜರು ಅನ್ನದಾತರ ರಕ್ಷಣೆಗಾಗಿ ಕೆರೆಕಟ್ಟೆ, ಕಲ್ಯಾಣಿ, ಗುಡಿಗೋಪುರ ನಿರ್ಮಿಸಿದ್ದಾರೆ. ಇವರ ಹೆಸರೆಲ್ಲವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರ ಕಾರ್ಯಗಳ ಉಳಿಸಿಕೊಳ್ಳುವ ಕೆಲಸ, ಭಾರ್ಗಾವತಿ ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯ ಆಗುತ್ತಿಲ್ಲ.

ಎಸ್.ಜಿ.ವನಜ, ರಾಜ್ಯ ಪ್ರತಿನಿಧಿ, ಕರ್ನಾಟಕ ಪ್ರಾಂತ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.