
ಕನಕಪುರ ಎಂಎಚ್ಎಸ್ ಮೈದಾನದ ಬಳಿಯ ರೆವಿನ್ಯೂ ಇನ್‌ಸ್ಪೆಕ್ಟರ್ ಕಚೇರಿ ಮೇಲೆ ಬುಧವಾರ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು
ಕನಕಪುರ: ಪಿತ್ರಾರ್ಜಿತ ಆಸ್ತಿ ಪೌತಿ ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಮೂವರು ಕಂದಾಯ ಅಧಿಕಾರಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ಕಂದಾಯ ನಿರೀಕ್ಷಕ ತಂಗರಾಜು, ಗ್ರಾಮ ಲೆಕ್ಕಾಧಿಕಾರಿ ಚಂದ್ರೇಗೌಡ, ಕಂಪ್ಯೂಟರ್ ಆಪರೇಟರ್ ಉಮೇಶ್ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಪಿರ್ತಾರ್ಜಿತ ಆಸ್ತಿ ಪೌತಿ ಖಾತೆ ಮಾಡಲು ಅರಳಿಗುಡ್ಡೆ ತಾಂಡ್ಯದ ಬಲರಾಮ ನಾಯ್ಕ್ 2022ರಲ್ಲಿ ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ಪೌತಿ ಖಾತೆ ಮಾಡಿಕೊಡದೆ ತಡೆ ಮಾಡಿದ್ದಾರೆ. ಖಾತೆ ಬದಲಾವಣೆಗಾಗಿ ಮೂರು ವರ್ಷ ಕಚೇರಿಗೆ ಅಲೆದಾಡಿ ಸುಮ್ಮನಾಗಿದ್ದರು.
ತಂಗರಾಜು ಹಾಗೂ ಚಂದ್ರೇಗೌಡ ಅವರನ್ನು ಸಂಪರ್ಕಿಸಿದಾಗ ಖಾತೆ ಮಾಡಿ ಕೊಡಲು ₹5.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.
ಲೋಕಾಯುಕ್ತ ಅಧಿಕಾರಿಗಳ ಸೂಚನೆಯಂತೆ ಇಬ್ಬರಿಗೂ ₹2 ಲಕ್ಷ ಮುಂಗಡ ಕೊಟ್ಟಿದ್ದ ದೂರುದಾರರು, ಬುಧವಾರ ಕಚೇರಿಯಲ್ಲಿ ₹2 ಲಕ್ಷ ಲಂಚ ಕೊಡುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದರು.
ಜಿಲ್ಲಾ ಲೋಕಾಯುಕ್ತ ಎಸ್.ಪಿ ಸ್ನೇಹಾ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಶಿವಪ್ರಕಾಶ್ ನೇತೃತ್ವದಲ್ಲಿ ಅಧಿಕಾರಿಗಳಾದ ವಿಜಯ್‌ಕುಮಾರ್, ಸಂದೀಪ್‌ಕುಮಾರ್ ಹಾಗು ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.