ADVERTISEMENT

'ಪ್ರವಾಸಿಗರೇ ಮತದಾನ ಮರೆಯದಿರಿ' ಅಭಿಯಾನ

ಪ್ರವಾಸೋದ್ಯಮ ಇಲಾಖೆ ವತಿಯಿಂದ ಜನಜಾಗೃತಿ ಯತ್ನ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 14:32 IST
Last Updated 4 ಏಪ್ರಿಲ್ 2019, 14:32 IST
ಜಿಲ್ಲಾ ಸಂಕೀರ್ಣದ ಆವರಣದಲ್ಲಿ ಗುರುವಾರ 'ಪ್ರವಾಸಿಗರೇ ಮತದಾನ ಮರೆಯದಿರಿ' ಅಭಿಯಾನಕ್ಕೆ ಚುನಾವಣಾಧಿಕಾರಿ ಕೆ. ರಾಜೇಂದ್ರ ಚಾಲನೆ ನೀಡಿದರು
ಜಿಲ್ಲಾ ಸಂಕೀರ್ಣದ ಆವರಣದಲ್ಲಿ ಗುರುವಾರ 'ಪ್ರವಾಸಿಗರೇ ಮತದಾನ ಮರೆಯದಿರಿ' ಅಭಿಯಾನಕ್ಕೆ ಚುನಾವಣಾಧಿಕಾರಿ ಕೆ. ರಾಜೇಂದ್ರ ಚಾಲನೆ ನೀಡಿದರು   

ರಾಮನಗರ: ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರಲ್ಲಿ ಮತದಾನ ಜಾಗೃತಿ ಮೂಡಿಸಲು 'ಪ್ರವಾಸಿಗರೇ ಮತದಾನ ಮರೆಯದಿರಿ' ವಿನೂತನ ಅಭಿಯಾನವು ಆರಂಭಗೊಂಡಿದೆ.

ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಈ ಅಭಿಯಾನ ಆರಂಭಿಸಿದೆ. ಜಿಲ್ಲೆಯಲ್ಲಿ 14 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದ್ದು, ಈ ತಾಣಗಳಿಗೆ ಪ್ರತಿ ತಿಂಗಳು ಸರಾಸರಿ 10 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇಲ್ಲಿ ಕಾರ್ಯ ನಿರ್ವಹಿಸುವ ಪ್ರವಾಸೋದ್ಯಮ ಇಲಾಖೆಯ 'ಪ್ರವಾಸಿಮಿತ್ರ'ರು ಬರುವ ಪ್ರವಾಸಿಗರಿಗೆ ಲೋಕಸಭಾ ಚುನಾವಣೆ ದಿನಾಂಕದಂದು ತಪ್ಪದೇ ಮತ ಚಲಾಯಿಸುವಂತೆ ಮನವಿ ಮಾಡಲಿದ್ದಾರೆ. ಜಿಲ್ಲೆಯ 24 ಪ್ರವಾಸಿ ಮಿತ್ರರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಎಲ್ಲೆಲ್ಲಿ ಜಾಗೃತಿ: ರಾಮನಗರ ತಾಲ್ಲೂಕಿನ ರಾಮದೇವರ ಬೆಟ್ಟ, ರೇವಣ್ಣಸಿದ್ದೇಶ್ವರ ಬೆಟ್ಟ, ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್, ಕಣ್ವ ಜಲಾಶಯ, ಬೇವೂರು ತಿಮ್ಮಪ್ಪನ ಬೆಟ್ಟ, ಅಪ್ರಮೇಯಸ್ವಾಮಿ ದೇವಾಲಯ, ಮಾಗಡಿ ತಾಲ್ಲೂಕಿನ ಸಾವನದುರ್ಗ, ರಂಗನಾಥಸ್ವಾಮಿ ದೇಗುಲ, ಮಂಚನಬೆಲೆ ಜಲಾಶಯ ಹಾಗೂ ಕನಕಪುರ ತಾಲ್ಲೂಕಿನ ಸಂಗಮ- ಮೇಕೆದಾಟು, ಕಬ್ಬಾಳಮ್ಮ ದೇವಾಲಯ, ಚುಂಚಿಫಾಲ್ಸ್ ಮತ್ತು ಕಲ್ಲಹಳ್ಳಿಯ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ತಲಾ ಇಬ್ಬರು 'ಪ್ರವಾಸಿಮಿತ್ರರು' ಬರುವ ಪ್ರವಾಸಿಗರಿಗೆ ಮತಜಾಗೃತಿ ಪ್ರಚಾರ ಸಾಮಾಗ್ರಿಗಳನ್ನು ನೀಡಿ ಮನವಿ ಮಾಡಲಿದ್ದಾರೆ.

ADVERTISEMENT

ಮತ ಜಾಗೃತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ 'ಜನಪದ ಹಾಗೂ ಮಾಚ್೯ ಆಫ್ ಕರ್ನಾಟಕ' ಮಾಸಿಕಗಳನ್ನು ವಿತರಿಸಲಾಗುತ್ತಿದ್ದು, ಮತದಾನ ಮಹತ್ವ ಸಾರುವ ಕರ ಪತ್ರಗಳನ್ನು ಪ್ರವಾಸಿ ತಾಣಗಳಲ್ಲಿ ಹಂಚಲಾಗುತ್ತಿದೆ.

ಚಾಲನೆ: ಅಭಿಯಾನಕ್ಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಕೆ. ರಾಜೇಂದ್ರ ಗುರುವಾರ ಚಾಲನೆ ನೀಡಿದರು.

‘ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಅವರೆಲ್ಲರೂ ಚುನಾವಣೆಯ ದಿನ ತಪ್ಪದೇ ಮತ ಚಲಾಯಿಸಿ ನಂತರ ಪ್ರವಾಸ ಹೊರಡಬೇಕು’ ಎಂದು ಮನವಿ ಮಾಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಸ್. ಶಂಕರಪ್ಪ ಹಾಗೂ ಪ್ರವಾಸಿ ಮಿತ್ರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.