ADVERTISEMENT

ಮಾಗಡಿ ಪಟ್ಟಣಕ್ಕೆ ಬೇಕು ತರಕಾರಿ ಮಾರುಕಟ್ಟೆ

ದೊಡ್ಡಬಾಣಗೆರೆ ಮಾರಣ್ಣ
Published 2 ಜೂನ್ 2019, 19:45 IST
Last Updated 2 ಜೂನ್ 2019, 19:45 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಮಾಗಡಿ: ಪಟ್ಟಣದ ಕಂದಕ ರಸ್ತೆಯ ಮೇಲೆ ನಡೆಯುತ್ತಿರುವ ತರಕಾರಿ ಮಾರುಕಟ್ಟೆ ಅಪಾಯಕಾರಿಯಾಗಿದೆ.

ನಿತ್ಯ ಮುಂಜಾನೆ 3 ಗಂಟೆಗೆ ಗ್ರಾಮೀಣ ಭಾಗದ ರೈತರು ತರಕಾರಿ, ಹೂವು, ಹಣ್ಣು ಮಾರಲು ಬರುತ್ತಾರೆ. ರಸ್ತೆಯ ತುಂಬೆಲ್ಲಾ ಕಾಯಿಪಲ್ಯೆ, ಹೂವು, ಹಣ್ಣು ಚಿಲ್ಲರೆ ಮಾರುವ ಪಾದಚಾರಿ ವ್ಯಾಪಾರಿಗಳು ಅಂಗಡಿ ಇಟ್ಟುಕೊಂಡಿರುತ್ತಾರೆ. 30 ಅಡಿ ರಸ್ತೆಯಲ್ಲಿ ಆಟೋ ರಿಕ್ಷಾ ಹೋಗಿ ಬರಲು ಕೂಡಾ ಜಾಗ ಇರುವುದಿಲ್ಲ. ಬಸ್‌ಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕಿದೆ. ವಾಹನಗಳು ಪಾದಚಾರಿಗಳ ಮೇಲೆ ಹರಿದು ಅಪಘಾತಗಳಾಗಿವೆ.

ಕಂದಕ ರಸ್ತೆಯಿಂದ ಡೂಮ್‌ ಲೈಟ್‌ ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡು ಬದಿಗಳಲ್ಲಿ ಸಹಸ್ರಾರು ಮಹಿಳೆಯರು ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಣೆ ಕಂಡುಕೊಂಡಿದ್ದಾರೆ. ಇದೇ ರಸ್ತೆಯಲ್ಲಿ ನ್ಯಾಯಾಧೀಶರ ವಸತಿಗೃಹಗಳು, ಸರ್ಕಾರಿ ಬಾಲಕಿಯರ ಮಾದರಿ ಶಾಲೆ, ಜಿಕೆಬಿಎಂಎಸ್‌, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಬಾಲಕಿಯರ ವಿದ್ಯಾರ್ಥಿ ನಿಲಯ, ಬಿಡಿಸಿಸಿ ಬ್ಯಾಂಕ್‌ಗಳು ಇವೆ. ಎರಡು ರಸ್ತೆಗಳು ತೀರಾ ಇಕ್ಕಟ್ಟಾಗಿವೆ. ನಡೆದು ಹೋಗಲು ಹರಸಾಹಸ ಪಡಬೇಕಿದೆ.

ADVERTISEMENT

ಬಿಡಿಸಿಸಿ ಬ್ಯಾಂಕ್‌ ಕಟ್ಟಡ ಕಟ್ಟಿಸಲು ಪುಟ್‌ಪಾತ್‌ ತರಕಾರಿ ವ್ಯಾಪಾರಿಗಳನ್ನು ತೆರವುಗೊಳಿಸುವ ವಿಚಾರವಾಗಿ ಅಂದಿನ ಶಾಸಕ ಎಚ್‌.ಸಿ.ಬಾಲಕೃಷ್ಣ ಮತ್ತು ಇಂದಿನ ಶಾಸಕ ಎ.ಮಂಜುನಾಥ ಬೆಂಬಲಿಗರ ನಡುವೆ ಬೀದಿಕಾಳಗವೇ ನಡೆದಿತ್ತು. ಪುರಸಭೆ ಮಾರುಕಟ್ಟೆಯ ನೂರಾರು ಮಳಿಗೆಗಳಿವೆ. ದಲಾಲರ ಕೈಗೆ ಸಿಲುಕಿ, ಪುರಸಭೆಯಿಂದ ಅಂಗಡಿ ಮಳಿಗೆ ಬಾಡಿಗೆ ಪಡೆದವರು, ಮೂರನೆ ವ್ಯಕ್ತಿಗೆ ಹೆಚ್ಚಿನ ಬಾಡಿಗೆಗೆ ನೀಡಿದ್ದಾರೆ.

ನೂತನ ತರಕಾರಿ ಮಾರುಕಟ್ಟೆ ಕಟ್ಟಿಸಿ, ಪಾದಚಾರಿ ತರಕಾರಿ ವ್ಯಾಪಾರಿಗಳಿಗೆ ಶಾಶ್ವತವಾಗಿ ಅನುಕೂಲ ಮಾಡಿಕೊಡುವುದಾಗಿ ಶಾಸಕ ಎ.ಮಂಜುನಾಥ್‌ ಭರವಸೆ ನೀಡಿದ್ದರು. ಅದಿನ್ನೂ ಈಡೇರಿಲ್ಲ. ಡೂಮ್‌ ಲೈಟ್‌ ಸರ್ಕಲ್‌ ಬಳಿ ಹೈಟೆಕ್‌ ಹೂವು, ಹಣ್ಣು, ತರಕಾರಿ ಮಾರುಕಟ್ಟೆ ನಿರ್ಮಿಸಲು ಮಂಜೂರಾತಿ ಸಿಕ್ಕಿದೆ. ಅಡಿಗಲ್ಲು ಹಾಕಬೇಕಿದೆ ಎಂದು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ ತಿಳಿಸಿದ್ದರು. ಆದರೆ ಅದಿನ್ನೂ ಕಾರ್ಯಗತವಾಗಬೇಕಿದೆ.

ಪುರಸಭೆ ವತಿಯಿಂದ ಹತ್ತಾರು ವರ್ಷಗಳಿಂದಲೂ ಪುಟ್‌ಪಾತ್‌ ಸುಂಕ ವಸೂಲಿಗೆ ಒಬ್ಬರು ನಿಯೋಜಿತರಾಗಿದ್ದಾರೆ. ಬೀದಿಬದಿ ತರಕಾರಿ ವ್ಯಾಪಾರಿಗಳಿಂದ ನಿತ್ಯವೂ ದುಬಾರಿ ಸುಂಕ ವಸೂಲಿ ಮಾಡುತ್ತಿದ್ದಾರೆ. ಆದರೆ ಕುಡಿಯುವ ನೀರು, ನೆರಳು, ಶೌಚಾಲಯ ಇತರ ಮೂಲಭೂತ ಸವಲತ್ತುಗಳಿಲ್ಲ.

ಕನಕಾಂಬರ ಹೂವು, ತರಕಾರಿ ಬೆಳೆಯುವ ರೈತರಿಗೆ ಅಂದಿನ ಸಚಿವ ಎಚ್.ಎಂ.ರೇವಣ್ಣ ಆಡಳಿತದ ಅವಧಿಯಲ್ಲಿ ಹಾಪ್‌ಕಾಮ್ಸ್‌ನಿಂದ ಮಳಿಗೆ ಆರಂಬಿಸಿದ್ದರು. 2 ವರ್ಷಗಳ ಕಾಲ, ಹೂವು, ಹಣ್ಣು, ತರಕಾರಿ ಖರೀದಿಸಿ ಮಾರಾಟ ಮಾಡಲಾಯಿತು. ನಂತರ ಹಾಪ್‌ಕಾಮ್ಸ್‌ ಮಳಿಗೆ ಮುಚ್ಚಲಾಯಿತು.

ರಾಮರಾಜ ಅರಸ್‌ ರಸ್ತೆಯಲ್ಲಿ ಪುಟ್‌ಪಾತ್‌ ಮೇಲೆ ಹೂವು ಹಣ್ಣು ಮಾರಾಟ ಮಾಡಲಾಗುತ್ತಿದೆ. ಆ ರಸ್ತೆಯಲ್ಲಿ ಪುಟ್‌ಪಾತ್‌ ಮಾಯವಾಗಿದೆ. ಪಾದಚಾರಿಗಳಿಗೆ ಇನ್ನಿಲ್ಲದ ಕಿರಿಕಿರಿಯಾಗುತ್ತಿದೆ. ರೈತರು ಮಾರುಕಟ್ಟೆಗೆ ತಂದ ತಾಜಾ ತರಕಾರಿ, ಹೂವು ಇತರ ಪದಾರ್ಧಗಳನ್ನು ತೂಕಮಾಡದೆ, ಸಗಟಾಗಿ ಬಾಚಿಕೊಂಡು ವಂಚಿಸಲಾಗುತ್ತಿದೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ದೂರಿದರು.

ಕುಂಬಾರ, ಚಮ್ಮಾರ, ಸುಣಗಾರ, ಬಿದಿರಿನ ಮಂಕರಿ ಮಾರುವ ಮೇದ, ಇತರ ಕುಶಲಕರ್ಮಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಕುಂಬಾರರ ಸಂಘದ ಅಧ್ಯಕ್ಷ ವೆಂಕಟೇಶ್‌ ಕುಂಬಾರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.