ADVERTISEMENT

ಡಿ.ಸಿ. ಕಚೇರಿಗೆ ಟೊಯೊಟಾ ಕಾರ್ಮಿಕರ ಮುತ್ತಿಗೆ

ಜಿಲ್ಲಾಡಳಿತದ ಮಧ್ಯಪ್ರವೇಶಕ್ಕೆ ಒತ್ತಾಯ * ವಿವಿಧ ಸಂಘಟನೆಗಳ ಸಾಥ್‌

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 21:09 IST
Last Updated 18 ಡಿಸೆಂಬರ್ 2020, 21:09 IST
ಪ್ರತಿಭಟನೆ ಉದ್ದೇಶಿಸಿ ರೈತ ಸಂಘದ ಉಪಾಧ್ಯಕ್ಷೆ ಅನಸೂಯಮ್ಮ ಮಾತನಾಡಿದರು
ಪ್ರತಿಭಟನೆ ಉದ್ದೇಶಿಸಿ ರೈತ ಸಂಘದ ಉಪಾಧ್ಯಕ್ಷೆ ಅನಸೂಯಮ್ಮ ಮಾತನಾಡಿದರು   

ರಾಮನಗರ: ಕಾರ್ಮಿಕರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿ ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ ಕಂಪನಿಯ ನೂರಾರು ಕಾರ್ಮಿಕರು ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕೆಂಬಾವುಟ ಹಿಡಿದು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಸಾಲಾಗಿ ನಿಂತ ಕಾರ್ಮಿಕರು ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಅಮಾನತುಗೊಂಡಿರುವ ಕಾರ್ಮಿಕರನ್ನು ಕೂಡಲೇ ಸೇವೆಗೆ ಮರಳಿ ಪಡೆಯಬೇಕು. ಕಾರ್ಖಾನೆಯಲ್ಲಿ ಕಾರ್ಮಿಕರ ಶೋಷಣೆ ನಿಲ್ಲಬೇಕು. ಈ ವಿಚಾರದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತವು ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.

ಆರಂಭದಲ್ಲಿ ಕಾರ್ಮಿಕರಿಗೆ ಜಿಲ್ಲಾ ಸಂಕೀರ್ಣ ಪ್ರವೇಶಕ್ಕೆ ‍ಪೊಲೀಸರು ಅನುಮತಿ ನೀಡಲಿಲ್ಲ. ರಸ್ತೆಯಲ್ಲಿ ಅಪಘಾತಗಳಾದ ಕಾರಣ ಪ್ರತಿಭಟನಾಕಾರರಿಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿಗೆ ಅವಕಾಶ ದೊರೆಯಿತು. ವಿವಿಧ ಪಕ್ಷ ಹಾಗೂ ಸಂಘಟನೆಗಳು ಪ್ರತಿಭಟನೆಗೆ ಕೈ ಜೋಡಿಸಿದ್ದವು. ಇದರಿಂದಾಗಿ ಜಿಲ್ಲಾ ಸಂಕೀರ್ಣದ ಕಚೇರಿಗಳು ‘ದಿಗ್ಬಂಧನಕ್ಕೆ ಒಳಗಾಗಿದ್ದವು. ಸಾರ್ವಜನಿಕರ ಕೆಲಸ ಕಾರ್ಯಗಳಿಗೂ ಅಡ್ಡಿಯಾಯಿತು.

ADVERTISEMENT

ರಾಜ್ಯ ರೈತ ಸಂಘದ ಉಪಾಧ್ಯಕ್ಷೆ ಅನಸೂಯಮ್ಮ ಮಾತನಾಡಿ ‘ಕೈಗಾರಿಕೆಗಳಿಗೆ ಜಮೀನು, ಕಚ್ಚಾ ವಸ್ತುಗಳನ್ನು ನೀಡುವುದು ರೈತರು. ಬಹುತೇಕ ಕಾರ್ಮಿಕರು ರೈತ ಕುಟುಂಬಗಳಿಗೆ ಸೇರಿದವರೇ ಆಗಿದ್ದಾರೆ. ಆದರೆ, ಸರ್ಕಾರಗಳು ಕಾರ್ಮಿಕರ ಬೆಂಬಲಕ್ಕೆ ನಿಲ್ಲದೇ ಬಂಡವಾಳಶಾಹಿಗಳ ಪರವಾಗಿ ವರ್ತಿಸುತ್ತಿವೆ’ ಎಂದು ದೂರಿದರು.

ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ‘ಸದ್ಯದ ಬಿಕ್ಕಟ್ಟಿಗೆ ಸರ್ಕಾರವೇ ಹೊಣೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ತಮ್ಮ ಜವಾಬ್ದಾರಿ ಅರಿತು ಸಮಸ್ಯೆ ಇತ್ಯರ್ಥ ಮಾಡಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ‘ಕೈಗಾರಿಕೆಗಳಿಗೆ ನಮ್ಮವರ ಭೂಮಿ, ನೀರು, ವಿದ್ಯುತ್ ಅನ್ನು ನೀಡುವ ಸರ್ಕಾರ ಕಾರ್ಮಿಕರ ನೆರವಿಗೆ ಯಾಕೆ’ ಧಾವಿಸುವುದಿಲ್ಲ ಎಂದು ಪ್ರಶ್ನಿಸಿದರು. ‘ಕುಮಾರಸ್ವಾಮಿ, ದೇವೇಗೌಡ, ಡಿ.ಕೆ. ಶಿವಕುಮಾರ್ ಅವರಂತಹ ಘಟಾನುಘಟಿ ನಾಯಕರಿದ್ದರೂ ಜಿಲ್ಲೆಯ ಕಾರ್ಮಿಕರು ಬೀದಿಗೆ ಬಿದ್ದಿರುವುದು ವಿಷಾದನೀಯ. ಕಾರ್ಖಾನೆ ಆಡಳಿತ ಮಂಡಳಿ ಉದ್ಧಟತನ ಬಿಟ್ಟು ಕಾರ್ಮಿಕರ ಜೊತೆ ಕೈಜೋಡಿಸಬೇಕು’ ಎಂದರು.

ಕಾರ್ಮಿಕರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿ ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ ಕಂಪನಿಯ ನೂರಾರು ಕಾರ್ಮಿಕರು ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಟಿಕೆಎಂ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಪ್ರಸನ್ನಕುಮಾರ್ ಚಕ್ಕೆರೆ ಮಾತನಾಡಿ, ‘ಬಹುರಾಷ್ಟ್ರೀಯ ಕಂಪನಿಯಾದ ಟೊಯೊಟಾಗೆ ಸರ್ಕಾರ ಭೂಮಿ, ತೆರಿಗೆ ವಿನಾಯಿತಿ ಸೇರಿದಂತೆ ಹಲವು ವಿನಾಯಿತಿ ನೀಡಿದೆ. ಆದರೆ ಕಂಪನಿ ಮಾತ್ರ ಸರ್ಕಾರ, ಅಧಿಕಾರಿಗಳ ಮಾತಿಗೆ ಮನ್ನಣೆ ನೀಡುತ್ತಿಲ್ಲ. ಹೀಗಾಗಿ ಆಡಳಿತ ಮಂಡಳಿಯನ್ನು ನಿಯಂತ್ರಿಸಲು ಸರ್ಕಾರ ಪ್ರತಿನಿಧಿಯನ್ನು ನೇಮಕ ಮಾಡಬೇಕು’ ಎಂದು ಒತ್ತಾಯಿಸಿದರು. ಸಮಸ್ಯೆ ಬಗೆಹರಿಸದಿದ್ದಲ್ಲಿ ಕಾರ್ಮಿಕರು ಕುಟುಂಬಗಳೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಜಿಲ್ಲಾಡಳಿತದ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಕಾರ್ಮಿಕರಿಂದ ಮನವಿ ಸ್ವೀಕರಿಸಿದರು.

ಹೆಚ್ಚಿನ ಪೊಲೀಸ್‌ ಭದ್ರತೆ
ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದ ಕಾರಣಕ್ಕೆ ಡಿವೈಎಸ್‌ಪಿ ಪುರುಷೋತ್ತಮ ನೇತೃತ್ವದಲ್ಲಿ ಹೆಚ್ಚಿನ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು. ಮೂವರು ಸರ್ಕಲ್ ಇನ್‌ಸ್ಪೆಕ್ಟರ್, 7 ಎಸ್ಐ, 15 ಎಎಸ್‍ಐ ಹಾಗೂ 50ಕ್ಕೂ ಹೆಚ್ಚು ಕಾನ್‌ಸ್ಟೆಬಲ್‌ಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು.

ಹೋರಾಟಗಾರರ ಬೆಂಬಲ: ಕಾರ್ಮಿಕರ ಹೋರಾಟಕ್ಕೆ ರಾಜ್ಯ ರೈತ ಸಂಘದ ವಿವಿಧ ಬಣಗಳು ಬೆಂಬಲ ಸೂಚಿಸಿದ್ದವು. ಇದರೊಟ್ಟಿಗೆ ಬಹುಜನ ಸಮಾಜ ಪಕ್ಷ, ಸಿಐಟಿಯು, ಎಐಸಿಟಿಯು ಮುಖಂಡರು ಸಹ ಭಾಗಿಯಾಗಿದ್ದರು. ಕನ್ನಡ ಪರ ಸಂಘಟನೆಗಳಾದ ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಕರ್ನಾಟಕ ರಣಧೀರ ಪಡೆ ಮೊದಲಾದ ಸಂಘಟನೆಗಳು ಬೆಂಬಲ ಸೂಚಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.