ADVERTISEMENT

ಚಿತ್ರೀಕರಣ ಸಂದರ್ಭದಲ್ಲಿ ದುರಂತದ ‘ಕಪ್ಪು ಚುಕ್ಕೆ’

‘ಮಾಸ್ತಿಗುಡಿ’ ಬಳಿಕ ಮತ್ತೊಂದು ಅವಘಡ; ರಾಮನಗರದ ಹೆಸರಿಗೆ ಅಪಕೀರ್ತಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 19:50 IST
Last Updated 11 ಆಗಸ್ಟ್ 2021, 19:50 IST
ಲವ್‌ ಯೂ ರಚ್ಚು ಚಿತ್ರದ ಚಿತ್ರೀಕರಣ ಸಂದರ್ಭ ಅವಘಡ ನಡೆದ ಸ್ಥಳ
ಲವ್‌ ಯೂ ರಚ್ಚು ಚಿತ್ರದ ಚಿತ್ರೀಕರಣ ಸಂದರ್ಭ ಅವಘಡ ನಡೆದ ಸ್ಥಳ   

ರಾಮನಗರ: ಜಿಲ್ಲೆಯು ತನ್ನ ಪ್ರಾಕೃತಿಕ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳಿಂದ ರಾಜ್ಯದ ಜನರ ಗಮನ ಸೆಳೆಯುತ್ತಿದ್ದು, ಚಿತ್ರರಂಗದ ಮಂದಿಯನ್ನೂ ತನ್ನತ್ತ ಆಕರ್ಷಿಸಿದೆ. ಆದರೆ ಈಚಿನ ದಿನಗಳಲ್ಲಿ ನಡೆಯುತ್ತಿರುವ ಅವಘಡಗಳು ಜಿಲ್ಲೆಯ ಹೆಸರಿಗೆ ಕಪ್ಪುಚುಕ್ಕೆ ಆಗುತ್ತಿವೆ.

ಗಾಂಧಿ ನಗರದ ಮಂದಿಗೆ ಸನಿಹದಲ್ಲೇ ಇರುವ ರಾಮನಗರ ಜಿಲ್ಲೆಯು ಚಿತ್ರೀಕರಣಕ್ಕೆ ಬೇಕಾದ ಎಲ್ಲ ಬಗೆಯ ತಾಣಗಳನ್ನು ಹೊಂದಿದೆ. ಸಿನಿಮಾಗಳಿಗೆ ಬೇಕಾದ ಹಳ್ಳಿಯ ವಾತಾವರಣ, ಧಾರ್ಮಿಕ ಸನ್ನಿವೇಶ, ಅರಣ್ಯ, ಬೆಟ್ಟಗುಡ್ಡಗಳಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣಗಳು ಆಗಿಂದಾಗ್ಗೆ ನಡೆಯುತ್ತಲೇ ಇರುತ್ತವೆ. ಆದರೆ ಇವುಗಳಿಗೆ ಪೊಲೀಸರು, ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳೂ ಸೇರಿದಂತೆ ಯಾವುದರಿಂದಲೂ ಅನುಮತಿ ಪಡೆಯುತ್ತಿಲ್ಲ. ದುರಂತಗಳು ನಡೆದಾಗಲಷ್ಟೇ ಇವು ಸುದ್ದಿಯಾಗುತ್ತಿವೆ.

ರಾಮನಗರದ ರಾಮದೇವರ ಬೆಟ್ಟವು ಶೋಲೆ ಬೆಟ್ಟ ಎಂದೇ ಪ್ರಸಿದ್ಧಿ. ಅಮಿತಾಬ್ ಬಚ್ಚನ್‌ ಅಭಿನಯದ ‘ಶೋಲೆ’ ಹಿಂದಿ ಚಲನಚಿತ್ರದ ಚಿತ್ರೀಕರಣ ಇಲ್ಲಿಯೇ ನಡೆದಿತ್ತು. ಈ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ನಟ ಅಮಿತಾಭ್ ಬಚ್ಚನ್ ಹಾಗೂ ಖಳನಟ ಅಮ್ಜದ್ ಖಾನ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು ಎಂದು ಹಿರಿಯರು ಸ್ಮರಿಸುತ್ತಾರೆ.

ADVERTISEMENT

2016ರ ನವೆಂಬರ್‌ನಲ್ಲಿ ಮಾಗಡಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮಾಸ್ತಿಗುಡಿ ಸಿನಿಮಾ ಚಿತ್ರೀಕರಣ ವೇಳೆ ನೀರಿನಲ್ಲಿ ಮುಳುಗಿ ಉದಯೋನ್ಮುಖ ಕಲಾವಿದರಾದ ಉದಯ್‌ ಹಾಗೂ ಅನಿಲ್‌ ಪ್ರಾಣ ಕಳೆದುಕೊಂಡಿದ್ದರು. ಇದೀಗ ಬಿಡದಿಯ ಜೋಗರದೊಡ್ಡಿ ಬಳಿ ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ಸಾಹಸ ಕಲಾವಿದ ವಿವೇಕ್ ಪ್ರಾಣ ಬಿಟ್ಟಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸದೇ ನಿರ್ಲಕ್ಷ್ಯ ತೋರಿರುವುದೇ ಈ ಘಟನೆಗಳಿಗೆ ಪ್ರಮುಖ ಕಾರಣವಾಗಿದೆ.

ಅನುಮತಿ ಕಡ್ಡಾಯ: ಚಿತ್ರೀಕರಣ ನಡೆಸುವ ಮುನ್ನ ಸಿನಿಮಾ ತಂಡಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಅನುಮತಿ ಪಡೆಯಬೇಕು. ಚಿತ್ರೀಕರಣ ಸ್ಥಳದಲ್ಲಿ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕೆಲವು ಷರತ್ತುಗಳೂ ಇರುತ್ತವೆ. ಅದ್ಯಾವುದನ್ನು ಸಿನಿಮಾ ತಂಡಗಳು ಪಾಲನೆ ಮಾಡದಿರುವುದೇ ದುರ್ಘಟನೆಗೆ ಕಾರಣವಾಗುತ್ತಿವೆ.

ಫಿಲಂ ಸಿಟಿಯಲ್ಲಿಯೂ ಚಿತ್ರೀಕರಣ ಮಾಡುವಾಗ ಅನುಮತಿ ಪಡೆದಿರಬೇಕು. ಅನುಮತಿಯು ನಿರ್ಬಂಧಿತ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸುವ ಅವಕಾಶ ಕಲ್ಪಿಸುವುದಿಲ್ಲ. ರಕ್ಷಿತ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸುವಂತಿಲ್ಲ. ಭದ್ರತೆಯ ಕಾರಣದಿಂದಾಗಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದ ಸ್ಥಳ ತಲುಪುವುದು ಹೇಗೆ ಎಂಬುದನ್ನು ಇನ್ನೊಬ್ಬರಿಗೆ ಗೊತ್ತುಪಡಿಸುವ ರೀತಿಯಲ್ಲಿ ಚಿತ್ರೀಕರಣ ಮಾಡಬಾರದು.

ಭದ್ರತಾ ದೃಷ್ಟಿಯಿಂದ ಪ್ರವೇಶ ನಿರ್ಬಂಧಿಸಲ್ಪಟ್ಟ ಯಾವುದೇ ಪ್ರದೇಶಗಳ ಸ್ಥಳ ನಿರ್ದೇಶನವನ್ನು ಸೂಚಿಸುವಂತೆ ಚಿತ್ರೀಕರಣ ಮಾಡಬಾರದು. ಚಿತ್ರೀಕರಣದ ಸ್ಥಳದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ಆ ಸ್ಥಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಚಿತ್ರೀಕರಣದ ಬಗ್ಗೆ ಪೊಲೀಸರಿಗೆ ಮುಂಚಿತವಾಗಿ ಮಾಹಿತಿ ನೀಡಿ ಭದ್ರತೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಷರತ್ತುಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.