ADVERTISEMENT

ರೈಲಿನಲ್ಲಿ ದರೋಡೆ: ಆರೋಪಿಗಳ ಬಂಧನ

ಬೆಂಗಳೂರು–ಮೈಸೂರು ಮಾರ್ಗದ ರೈಲುಗಳಲ್ಲಿ ಹೆಚ್ಚುವರಿ ಭದ್ರತೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 17:20 IST
Last Updated 25 ಡಿಸೆಂಬರ್ 2018, 17:20 IST
ಕೀರ್ತಿರಾಜ್‌
ಕೀರ್ತಿರಾಜ್‌   

ರಾಮನಗರ: ಬೆಂಗಳೂರು–ಮೈಸೂರು ಮಾರ್ಗದ ರೈಲುಗಳಲ್ಲಿ ಪ್ರಯಾಣಿಕರನ್ನು ದರೋಡೆ ಮಾಡುತ್ತಿದ್ದ ಆರೋಪಿಗಳನ್ನು ರೈಲ್ವೆ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ 23–24ರ ವಯಸ್ಸಿನವರೇ ಆಗಿದ್ದಾರೆ.

ಬೆಂಗಳೂರಿನ ನಾಯಂಡಹಳ್ಳಿ ನಿವಾಸಿಗಳಾದ ಅಭಿಷೇಕ್ ಅಲಿಯಾಸ್ ಶುಕ್ಲ (25), ಕೀರ್ತಿರಾಜ್‌ ಅಲಿಯಾಸ್ ಮೋಟು (24), ಮನೋಜ್ ಅಲಿಯಾಸ್ ಗುನ್ನಾ (24), ಸುನಿಲ್ (22) ಹಾಗೂ ಭರತ್ ಅಲಿಯಾಸ್ ಮಂಡ್ರೆ ಬಂಧಿತರು.

ಇದೇ ತಿಂಗಳ 20ರಂದು ಶಿವಮೊಗ್ಗ ಎಕ್ಸ್‌ಪ್ರೆಸ್‌ (ತಾಳಗುಪ್ಪ) ಹಾಗೂ 22ರಂದು ಬೆಂಗಳೂರು–ಮೈಸೂರು ನೈಟ್‌ ಕ್ವೀನ್‌ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ದರೋಡೆ ನಡೆದಿತ್ತು. ಆರೋಪಿಗಳ ಬಗ್ಗೆ ಪ್ರಯಾಣಿಕರು ನೀಡಿದ ಮಾಹಿತಿ ಹಾಗೂ ಸಿಸಿಟಿವಿ ಕ್ಯಾಮೆರಾಗಳಲ್ಲಿ ದೊರೆತ ಚಹರೆ ಗುರುತಿನ ಆಧಾರದ ಮೇಲೆ ರೈಲ್ವೆ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಇದೇ ಆರೋಪಿಗಳು ರೈಲು ನಿಲ್ದಾಣಗಳಲ್ಲಿ ಮತ್ತೆ ದರೋಡೆಗೆ ಹೊಂಚು ಹಾಕುತ್ತಿದ್ದ ಸಂದರ್ಭ ಅವರನ್ನು ಬಂಧಿಸಲಾಯಿತು. ಆರೋಪಿಗಳೆಲ್ಲರೂ ಯುವಕರಾಗಿದ್ದು, ಹಣದ ಆಸೆಗೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ರೈಲುಗಳಿಗೆ ಭದ್ರತೆ: ದರೋಡೆ ಹಿನ್ನೆಲೆಯಲ್ಲಿ ಬೆಂಗಳೂರು–ಮೈಸೂರು ಭಾಗದಲ್ಲಿ ಸಂಜೆ ಹಾಗೂ ರಾತ್ರಿಹೊತ್ತಿನಲ್ಲಿ ಸಂಚರಿಸುವ ರೈಲುಗಳಿಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.

ಕಳೆದ ಮೂರು ದಿನಗಳಿಂದ ಈ ರೈಲುಗಳಿಗೆ ಪ್ರತಿ ರೈಲಿಗೆ ಐವರು ಸಿಬ್ಬಂದಿಯಂತೆ ನಿಯೋಜನೆ ಮಾಡಲಾಗಿತ್ತು. ಆರೋಪಿಗಳ ಬಂಧನವಾದ ಹಿನ್ನೆಲೆಯಲ್ಲಿ ಈ ಸಂಖ್ಯೆಯನ್ನು ಮಂಗಳವಾರದಿಂದ ಎರಡಕ್ಕೆ ಇಳಿಸಲಾಗಿದೆ. ರೈಲು ನಿಲ್ದಾಣಗಳಲ್ಲಿನ ಸಂಶಯಾಸ್ಪದ ವ್ಯಕ್ತಿಗಳ ಮೇಲೂ ನಿಗಾ ವಹಿಸಲಾಗುತ್ತಿದೆ.

ಸಿಬ್ಬಂದಿ ಕೊರತೆ: ಸಿಬ್ಬಂದಿಯ ಕೊರತೆಯ ಹಿನ್ನೆಲೆಯಲ್ಲಿ ರೈಲು ಹಾಗೂ ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಭದ್ರತೆ ಒದಗಿಸಲು ಆಗುತ್ತಿಲ್ಲ ಎನ್ನುವುದು ರೈಲ್ವೆ ಪೊಲೀಸರ ಅಳಲು.

ಈ ಮಾರ್ಗದಲ್ಲಿ ನಿತ್ಯ ಸುಮಾರು 80 ಸಾವಿರದಿಂದ 1 ಲಕ್ಷ ಸಂಖ್ಯೆಯ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದರೆ ಇಬರ ಭದ್ರತೆಗೆ ಬೆರಳಣಿಕೆಯ ಪೊಲೀಸರು ಮಾತ್ರವೇ ಇದ್ದಾರೆ. ಚನ್ನಪಟ್ಟಣದಲ್ಲಿ ರೈಲ್ವೆ ಪೊಲೀಸ್ ಹೊರ ಠಾಣೆ ಇದ್ದು , ಇಲ್ಲಿ ಒಬ್ಬರು ಎಎಸ್‌ಐ, ಒಬ್ಬರು ಹೆಡ್‌ ಕಾನ್‌ಸ್ಟೆಬಲ್‌ ಹಾಗೂ ಮೂವರು ಕಾನ್‌ಸ್ಟೆಬಲ್‌ಗಳು ಇದ್ದಾರೆ.

ರಾಮನಗರದಲ್ಲಿ ಇಬ್ಬರು ಹಾಗೂ ಮದ್ದೂರಿನಲ್ಲಿ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ. ಮಂಡ್ಯದಲ್ಲಿರುವ ಹೊರ ಠಾಣೆಯಲ್ಲಿ ಒಬ್ಬರು ಸಬ್‌ ಇನ್‌ಸ್ಪೆಕ್ಟರ್ ಹಾಗೂ ಬೆರಳೆಣಿಕೆಯ ಕಾನ್‌ಸ್ಟೆಬಲ್‌ಗಳಿದ್ದಾರೆ. ಬೆಂಗಳೂರಿನ ಠಾಣೆಯಲ್ಲೂ 20ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಹೆಚ್ಚುವರಿ ಸಿಬ್ಬಂದಿಯ ಅಗತ್ಯ ಇದೆ. ಆಗಷ್ಟೇ ಸೂಕ್ತ ಭದ್ರತೆ ಒದಗಿಸಲು ಸಾಧ್ಯ ಎನ್ನುವುದು ಪೊಲೀಸರ ಸಮಜಾಯಿಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.