ADVERTISEMENT

ಸ್ವಾರ್ಥ ರಹಿತವೇ ನಿಜವಾದ ಸೇವೆ : ಪನ್ನಗ ಶಯನಂ

ಕೌಟುಂಬಿಕ ಸಭೆ ಮತ್ತು ಸಾಂಸ್ಕೃತಿಕ ರಸಸಂಜೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 14:50 IST
Last Updated 20 ಡಿಸೆಂಬರ್ 2019, 14:50 IST
ಚನ್ನಪಟ್ಟಣದಲ್ಲಿ ನಡೆದ ಭಾವಿಪ ಕೌಟುಂಬಿಕ ಸಭೆ ಕಾರ್ಯಕ್ರಮವನ್ನು ಪನ್ನಗ ಶಯನಂ ಉದ್ಘಾಟಿಸಿದರು
ಚನ್ನಪಟ್ಟಣದಲ್ಲಿ ನಡೆದ ಭಾವಿಪ ಕೌಟುಂಬಿಕ ಸಭೆ ಕಾರ್ಯಕ್ರಮವನ್ನು ಪನ್ನಗ ಶಯನಂ ಉದ್ಘಾಟಿಸಿದರು   

ಚನ್ನಪಟ್ಟಣ: ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಹಾಗೂ ಸ್ವಾರ್ಥರಹಿತ ಸೇವೆ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದು ಭಾರತ ವಿಕಾಸ ಪರಿಷತ್ ಮೈಸೂರು ಪ್ರಾಂತ್ಯದ ಅಧ್ಯಕ್ಷ ಪನ್ನಗ ಶಯನಂ ಹೇಳಿದರು.

ಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯಲ್ಲಿ ಭಾರತ್ ವಿಕಾಸ್ ಪರಿಷತ್ ಕಣ್ವ ಶಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕೌಟುಂಬಿಕ ಸಭೆ ಮತ್ತು ಸಾಂಸ್ಕೃತಿಕ ರಸಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತ ಸಾಂಸ್ಕೃತಿಕ ಶ್ರೀಮಂತ ದೇಶ. ಇಲ್ಲಿನ ಸಂಸ್ಕೃತಿ, ಪರಂಪರೆಗೆ ವಿಶ್ವಮಟ್ಟದಲ್ಲಿ ಹೆಚ್ಚಿನ ಮನ್ನಣೆ ಇದೆ. ಮಕ್ಕಳಿಗೆ ಸಂಸ್ಕೃತಿ ಪರಿಚಯಿಸುವ ಕಾರ್ಯವಾಗಬೇಕು. ಸಂಘಟನೆ ಜತೆಗೆ ಸೇವೆ ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು. ದೇಶದ ಏಕತೆ ಮತ್ತು ಸಮಗ್ರತೆಗೆ ಪೂರಕ ಕಾರ್ಯಕ್ರಮ ರೂಪಿಸಿ ಯುವಕರನ್ನು ಜಾಗೃತಿಗೊಳಿಸಬೇಕಾಗಿದೆ ಎಂದರು.

ADVERTISEMENT

ಪ್ರಾಂತ ಸಂಚಾಲಕ ಡಿ.ಪಿ.ಸ್ವಾಮಿ ಮಾತನಾಡಿ, ಭಾರತ ವಿಕಾಸ ಪರಿಷತ್‌ ಸೇವಾ ಕಾರ್ಯ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಸಂಸ್ಥೆ ಉತ್ತಮ ಧ್ಯೇಯೋದ್ದೇಶ ಹೊಂದಿದೆ. ಭಾರತೀಯ ಸನಾತನ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ. ಶಾಖೆ ಆರಂಭವಾಗಿ ಎರಡು ದಶಕಗಳಾಗಿವೆ. ಅಂದಿನಿಂದಲೂ ಉತ್ತಮ ಕಾರ್ಯ ಮಾಡುತ್ತಿರುವುದು ಸ್ವಾಗತಾರ್ಹ. ಶಾಶ್ವತ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಪರಿಷತ್ ಗೆ ಭದ್ರ ಬುನಾದಿ ಹಾಕಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಣ್ವ ಶಾಖೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ, ಸಂಸ್ಥೆ ಉಚಿತವೈದ್ಯ ಸೇವೆ, ಸ್ವಯಂಪ್ರೇರಿತ ರಕ್ತದಾನ ಶಿಬಿರ, ಅಂಗವಿಕಲರಿಗೆ ಸಲಕರಣೆಗಳ ವಿತರಣೆ ಕಾರ್ಯ ಮಾಡುತ್ತಿದೆ. ಗುರುವಂದನೆ, ದೇಶಭಕ್ತಿ ಗೀತೆಗಳ ಸಮೂಹ ಗಾಯನ ಸ್ಪರ್ಧೆ, ಪೌರಾಣಿಕ ನಾಟಕ ಪ್ರದರ್ಶನ, ಮಹಿಳಾ ಸಂಬಂಧಿತ ಕಾರ್ಯಕ್ರಮ ಆಯೋಜಿಸಿದೆ ಎಂದು ವಿವರಿಸಿದರು.

ರಾಮನಗರ ಶಾಖೆ ಅಧ್ಯಕ್ಷ ಅಂಬರೀಶ್, ಸಂಚಾಲಕ ಡಾ.ಬಿ.ಕೆ.ರಾಘವೇಂದ್ರ, ಕೋಶಾಧ್ಯಕ್ಷ ತಿಪ್ರೆಗೌಡ, ಕಾರ್ಯದರ್ಶಿ ಬಿ.ಎನ್.ಕಾಡಯ್ಯ, ಶಿವರಾಮ ಭಂಡಾರಿ, ಡಿ.ಸಿ.ಸುರೇಶ್, ಗೋವಿಂದಯ್ಯ, ಟಿ.ಚೆನ್ನಪ್ಪ, ಕೃಷ್ಣಮ್ಮ ಭಾಗವಹಿಸಿದ್ದರು.

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸಿ.ಸಿ.ರಾಮಲಿಂಗೇಶ್ವರ್, ಗುರುಮಾದಯ್ಯ, ಯೋಗೀಶ್ ಚಕ್ಕೆರೆ, ಎಂ.ಎಚ್.ಕೃಷ್ಣಕುಮಾರ್ ಅವರನ್ನು ಸನ್ಮಾನಿಸಲಾಯಿತು. ಜಾನಪದ ಕಲಾವಿದರಾದ ಬೇವೂರು ರಾಮಯ್ಯ, ಎಚ್.ಕೃಷ್ಣೇಗೌಡ, ಡಿ.ಸಿ.ಸುರೇಶ್, ಡಿ.ಪುಟ್ಟಸ್ವಾಮಿಗೌಡ, ಸುಕನ್ಯಾ ಕೆಂಪರಾಜು ಗೀತಗಾಯನ ನಡೆಸಿಕೊಟ್ಟರು. ಉಪಪ್ರಾಂಶುಪಾಲರಾದ ಬಿ.ಪಿ.ಪಾರ್ವತಮ್ಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.