ADVERTISEMENT

ಹೊಸ ಯೋಜನೆಗಳಿಗೆ ಹರ್ಷ: ಕೃಷಿ ಕಡೆಗಣನೆ ಆರೋಪ

ಕೇಂದ್ರ ಬಜೆಟ್‌: ಜನರಿಂದ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 12:43 IST
Last Updated 5 ಜುಲೈ 2019, 12:43 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ರಾಮನಗರ: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಸಂಸತ್‌ನಲ್ಲಿ ಮಂಡಿಸಿದ ಹೊಸ ಸರ್ಕಾರದ ಮೊದಲ ಬಜೆಟ್‌ಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲವು ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ವಿತ್ತ ಸಚಿವರು ಮಹಿಳೆಯರು, ಯುವಜನರ ಮೆಚ್ಚುಗೆ ಗಳಿಸಿದ್ದಾರೆ. ಸ್ಟಾರ್ಟ್‌ ಅಪ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸ್ವ ಉದ್ಯೋಗವನ್ನು ಪ್ರೋತ್ಸಾಹಿಸುವ ಕಾರ್ಯಕ್ಕೆ ಯುವಜನರಿಂದ ಒಲವು ವ್ಯಕ್ತವಾಗಿದೆ. ಅಂತೆಯೇ ಗೃಹ ಸಾಲದ ಮೇಲಿನ ಬಡ್ತಿಗೆ ತೆರಿಗೆ ವಿನಾಯಿತಿ, ಜಿಎಸ್‌ಟಿ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ, ಡಿಜಿಟಲ್‌ ವಹಿವಾಟಿಗೆ ಒತ್ತು ಮೊದಲಾದ ಅಂಶಗಳನ್ನು ಜನರು ಮೆಚ್ಚಿದ್ದಾರೆ. ಸ್ತ್ರೀಯರಿಗಾಗಿ ‘ನಾರಿ ಟು ನಾರಾಯಣಿ’ ಯೋಜನೆ ಘೋಷಿಸಿರುವುದಕ್ಕೆ ಮಹಿಳೆಯರೂ ಖುಷಿ ಪಟ್ಟಿದ್ದು, ಇನ್ನಾದರೂ ಎಲ್ಲ ಕ್ಷೇತ್ರದಲ್ಲಿ ಸಮಾನತೆ ಜಾರಿಯಾಗಲಿ ಎಂದು ಆಶಿಸಿದ್ದಾರೆ.

ಆದರೆ ಪೆಟ್ರೋಲ್, ಡೀಸೆಲ್‌ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಅರ್ಥ ಸಚಿವರ ನಿರ್ಧಾರವು ಬಡ ಹಾಗೂ ಮಧ್ಯಮ ವರ್ಗದ ಜನರ ಬೇಸರಕ್ಕೆ ಕಾರಣವಾಗಿದೆ. ಇದರೊಟ್ಟಿಗೆ ಚಿನ್ನದ ಮೇಲಿನ ಆಮದು ಸುಂಕವೂ ಏರಿಕೆಯಾಗಿರುವುದು ಆಭರಣ ಪ್ರಿಯರ ಉಬ್ಬೇರಿಸಿದೆ. ₨5 ಲಕ್ಷದ ಒಳಗೆ ಇರುವವರಿಗೆ ಮಾತ್ರ ಆದಾಯ ತೆರಿಗೆ ವಿನಾಯಿತಿ ಸಿಕ್ಕಿದ್ದು, ಉಳಿದವರಿಗೆ ಎಂದಿನಂತೆ ತೆರಿಗೆ ಹೇರಿರುವುದಕ್ಕೆ ಕಾರ್ಮಿಕ ವಲಯದಿಂದ ನಿರಾಸಾದಾಯಕ ಪ್ರತಿಕ್ರಿಯೆ ಸಿಕ್ಕಿದೆ.

ADVERTISEMENT

‘ಈಗಾಗಲೇ ಇಂಧನಗಳ ಬೆಲೆ ಗಗನಕ್ಕೇರಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅಗ್ಗವಾಗಿದ್ದರೂ ತೆರಿಗೆಯ ಭಾರದಿಂದ ದೇಸಿ ಮಾರುಕಟ್ಟೆಯಲ್ಲಿ ಅದರ ದರ ಏರುತ್ತಲೇ ಇದೆ. ಹೀಗಿರುವಾಗ ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಹೊರಿಸಲಾಗಿದೆ. ಇದರಿಂದ ಉಳಿದ ಸೇವೆಗಳೂ ದುಬಾರಿಯಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ರಾಮನಗರದ ಎಂಜಿನಿಯರ್‌ ರಾಮಕೃಷ್ಣ.

ಕೃಷಿ ಕ್ಷೇತ್ರ ಕಡೆಗಣನೆ: ಕೃಷಿ ಕ್ಷೇತ್ರವನ್ನು ವಿತ್ತ ಸಚಿವರು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎನ್ನುವುದು ರೈತ ಮುಖಂಡರ ಆರೋಪವಾಗಿದೆ.

‘ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ದರ ನಿಗದಿ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತಲೇ ಬರಲಾಗಿದೆ. ಡಾ. ಸ್ವಾಮಿನಾಥನ್‌ ನೇತೃತ್ವದ ಆಯೋಗವು ಸರ್ಕಾರಕ್ಕೆ ವರದಿ ನೀಡಿ ವರ್ಷಗಳೇ ಕಳೆಯುತ್ತಿವೆ. ಆದರೆ ಸರ್ಕಾರ ಈ ಬಜೆಟ್‌ನಲ್ಲೂ ರೈತ ಪರ ನಿರ್ಧಾರ ಪ್ರಕಟಿಸಿಲ್ಲ. ಕೃಷಿ ಸಾಲ ಮನ್ನಾ ಅಥವಾ ಬಡ್ಡಿ ಮನ್ನಾದ ಬಗ್ಗೆ ಪ್ರಸ್ತಾಪವೇ ಇಲ್ಲ. ರೈತರ ಕಣ್ಣೊರೆಸುವ ಕೆಲವು ಅಂಶಗಳಷ್ಟೇ ಬಜೆಟ್‌ನಲ್ಲಿ ಇವೆ’ ಎನ್ನುತ್ತಾರೆ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ ಸ್ವಾಮಿ.

‘ಶೂನ್ಯ ಕೃಷಿ ಪದ್ಧತಿಗೆ ಪ್ರೋತ್ಸಾಹ ನೀಡುವುದಾಗಿ ಸರ್ಕಾರ ಪ್ರಕಟಿಸಿದೆ. ಆದರೆ ವಾಸ್ತವದಲ್ಲಿ ಅದರಿಂದ ಹೆಚ್ಚು ಪ್ರಯೋಜನ ಇಲ್ಲ. ನಮ್ಮ ಜಮೀನುಗಳು ಈಗಾಗಲೇ ಕ್ಷಾರಯುಕ್ತವಾಗಿವೆ. ಹೀಗಿರುವಾಗ ರಸಗೊಬ್ಬರ, ಔಷಧ ಬಳಸದೆಯೇ ಕೃಷಿ ಮಾಡುವುದು ಆಗದ ಮಾತು’ ಎಂದು ಹೇಳಿದರು.

**

ನಿರೀಕ್ಷೆಗೆ ತಕ್ಕ ಬಜೆಟ್ ಅಲ್ಲ
ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ಜನರ ನಿರೀಕ್ಷೆಗೆ ತಕ್ಕನಾಗಿ ಇಲ್ಲ. ದೇಶದ ಜನರು ಬಹಳ ನಿರೀಕ್ಷೆ ಇಟ್ಟುಕೊಂಡು ಬಿಜೆಪಿಗೆ ಮತ ಹಾಕಿದ್ದರು. ಆದರೆ ಸಾಮಾನ್ಯರ ಬದುಕು ಬದಲಿಸುವ ಯಾವುದೇ ಯೋಜನೆಗಳು ಈ ಬಜೆಟ್ ನಲ್ಲಿ ಇಲ್ಲ. ಯುವಜನರಿಗೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿಲ್ಲ. ಕರ್ನಾಟಕಕ್ಕೂ ಯಾವುದೇ ಕೊಡುಗೆ ಸಿಕ್ಕಿಲ್ಲ

- ಡಿ.ಕೆ. ಶಿವಕುಮಾರ್,ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ

**
ಈ ಬಜೆಟ್‌ನಲ್ಲಿ ರೈತರ ಬಲಿದಾನವಾಗಿದೆ. ಕೃಷಿಕ ವರ್ಗಕ್ಕೆ ಬೇಕಾದ ಯಾವ ಯೋಜನೆಗಳನ್ನೂ ಪ್ರಕಟಿಸಿಲ್ಲ. ಕನಿಷ್ಠ ಬೆಂಬಲ ಬೆಲೆ ನೀತಿಯನ್ನೂ ಘೋಷಿಸಿಲ್ಲ. ರೈತರು ಆತ್ಮಹತ್ಯೆಗೆ ಹಾದಿ ಹಿಡಿದಿರುವ ಈ ದಿನಗಳಲ್ಲಿ ಅವರ ಮೇಲಿನ ಹೊರೆ ಇಳಿಸಲು ಕನಿಷ್ಠ ಕೃಷಿ ಸಾಲದ ಬಡ್ಡಿ ಮನ್ನಾ ಮಾಡಬಹುದಾಗಿತ್ತು. ಶೂನ್ಯ ಬಂಡವಾಳ ಕೃಷಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರುವುದು ಆಗದ ಮಾತು

- ಲಕ್ಷ್ಮಣಸ್ವಾಮಿ,ಜಿಲ್ಲಾ ಅಧ್ಯಕ್ಷ, ರೈತ ಸಂಘ

**
ವಿತ್ತ ಸಚಿವೆಯಾದ ನಿರ್ಮಲಾ ಅವರು ಮಹಿಳೆಯರ ಏಳ್ಗೆಯ ಸಲುವಾಗಿ ‘ನಾರಿ ಟು ನಾರಾಯಣಿ’ ಯೋಜನೆ ಘೋಷಿಸಿರುವುದು ಸಂತಸದ ವಿಚಾರ. ಇದು ಕೇವಲ ಘೋಷಣೆಗೆ ಸೀಮಿತ ಆಗಬಾರದು. ಮಹಿಳೆಯರ ಸಾಮಾಜಿಕ, ಆರ್ಥಿಕ ಹಾಗು ಶೈಕ್ಷಣಿಕ ಸ್ಥಿತಿಗತಿಯನ್ನು ಸುಧಾರಿಸುವ ಎಲ್ಲ ಅಂಶಗಳೂ ಹಂತಹಂತವಾಗಿ ಜಾರಿಗೊಳ್ಳಬೇಕು

- ಜಿ.ಸಿ. ಅರ್ಪಿತಾ, ಸಿವಿಲ್‌ ವಿಭಾಗದ ಮುಖ್ಯಸ್ಥೆ, ಅಮೃತಾ ಎಂಜಿನಿಯರಿಂಗ್‌ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.