ADVERTISEMENT

ನೇಕಾರರನ್ನು ಅಸಂಘಟಿತ ಪಟ್ಟಿಗೆ ಸೇರಿಸಿ

ಜಿಲ್ಲೆಯ ನೇಕಾರ ಮುಖಂಡರ ಸಭೆಯಲ್ಲಿ ಹಕ್ಕೋತ್ತಾಯ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 14:35 IST
Last Updated 15 ಜೂನ್ 2020, 14:35 IST
ನೇಕಾರರ ಮುಖಂಡರ ಸಭೆ ಸೋಮವಾರ ನಡೆಯಿತು
ನೇಕಾರರ ಮುಖಂಡರ ಸಭೆ ಸೋಮವಾರ ನಡೆಯಿತು   

ದೊಡ್ಡಬಳ್ಳಾಪುರ: ಅಸಂಘಟಿತ ಕಾರ್ಮಿಕರು ಎನ್ನುವ ಪಟ್ಟಿಗೆ ನೇಕಾರರನ್ನು ಸೇರಿಸಬೇಕು. ನೇಕಾರಿಕೆಗೆ ಅಗತ್ಯ ಇರುವ ಸಾಲ ಬಡ್ಡಿ ರಹಿತವಾಗಿ ನೀಡಬೇಕು. ಆಂಧ್ರಪ್ರದೇಶ, ತಮಿಳುನಾಡು ಮಾದರಿಯಲ್ಲಿ ಆರ್ಥಿಕ ನೆರವು ನೀಡಬೇಕು. ನೇಯ್ಗೆ ಪೂರ್ವ ಚಟುವಟಿಕೆಯಲ್ಲಿ ತೊಡಗಿರುವ ಎಲ್ಲರಿಗೂ ಗುರುತಿನ ಚೀಟಿ ನೀಡಬೇಕು ಎನ್ನುವ ಒತ್ತಾಯಗಳನ್ನು ಸರ್ಕಾರದ ಮುಂದಿಡಲಾಗಿದೆ. ಈ ಬೇಡಿಕೆಗಳು ಈಡೇರದಿದ್ದರೆ ರಾಜ್ಯದಾದ್ಯಂತ ಹೋರಾಟ ರೂಪಿಸುವುದಾಗಿ ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ಹೇಳಿದರು.

ನಗರದ ನೇಕಾರರ ಹೋರಾಟ ಸಮಿತಿ ಕಾರ್ಯಾಲಯದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ನೇಕಾರ ಮುಖಂಡರ ಸಭೆಯಲ್ಲಿ ಮಾತನಾಡಿದರು.

ಲಾಕ್‌ಡೌನ್‌ ನಿಂದ ನೇಯ್ಗೆ ಉದ್ಯಮ ಸ್ಥಗಿತವಾಗಿದೆ. ಉದ್ಯಮವನ್ನು ಅವಲಂಬಿಸಿರುವ ಲಕ್ಷಾಂತರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಈ ಸಂದರ್ಭದಲ್ಲಿ ಸರ್ಕಾರ ಉದ್ಯಮ ಉಳಿವಿಗಾಗಿ ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿ ಮೂರು ತಿಂಗಳಿಂದ ನೇಕಾರರ ಹೋರಾಟ ಸಮಿತಿ ವತಿಯಿಂದ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರಿಂದ ಸಣ್ಣ ಪ್ರಮಾಣದ ಪರಿಹಾರ ಘೋಷಣೆ ಮಾಡಿದೆ. ಅದರೆ, ನೇಕಾರರು ನೇಯ್ದ ಸೀರೆಗಳನ್ನು ಸರ್ಕಾರ ಖರೀದಿಸಬೇಕು. ಸರ್ಕಾರದ ಎಲ್ಲ ಇಲಾಖೆ ನೌಕರರು ಖರೀದಿಗೆ ಆದೇಶ ಮಾಡುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ನೇಕಾರರನ್ನು ರಕ್ಷಣೆ ಮಾಡಬೇಕು ಎಂದರು.

ADVERTISEMENT

ಸಭೆಯಲ್ಲಿ ಕರ್ನಾಟಕ ರಾಜ್ಯ ನೇಕಾರರ ಸಂಘದ ಅಧ್ಯಕ್ಷ ಎಂ.ಎಸ್.ನಾಗೇಂದ್ರ ಮಾತನಾಡಿ, ಕೊರೊನಾ ಪರಿಣಾಮದಿಂದಾಗಿ ಇಂದು ಹೆಚ್ಚಿನ ಸಂಕಷ್ಟ ಅನುಭವಿಸುತ್ತಿರುವವರು ನೇಕಾರರಾಗಿದ್ದಾರೆ. ಸರ್ಕಾರ ನೇಕಾರರ ನೆರವಿಗೆ ಧಾವಿಸದಿದ್ದರೆ ನೇಕಾರರು ಬೀದಿ ಪಾಲಾಗುತ್ತಾರೆ. ಈ ನಿಟ್ಟಿನಲ್ಲಿ ಸಂಘಟಿತ ಹೋರಾಟದ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಯಲಹಂಕ ನೇಕಾರರ ಮುಖಂಡ ಅಮರನಾಥ, ವಿಜಯಪುರದ ನೇಕಾರರ ಮುಖಂಡ ಅಂಬರೀಶ್, ದೇವಾಂಗ ಮಂಡಳಿ ಕಾರ್ಯದರ್ಶಿ ಎ.ಎಸ್.ಕೇಶವ, ಟಿಎಂಸಿ ಬ್ಯಾಂಕ್ ಅಧ್ಯಕ್ಷ ಕೆ.ಪಿ.ವಾಸುದೇವ್, ಉಪಾಧ್ಯಕ್ಷ ಕೆ.ಜಿ.ಮಂಜುನಾಥ್, ಮುಖಂಡರಾದ ಕೆ.ಜಿ.ಗೋಪಾಲ್, ರಂಗಸ್ವಾಮಿ, ಶಿವರಾಮ್, ಜನಾರ್ಧನ್, ಗೋಪಿ, ಮಂಜುನಾಥ್, ಸೂರ್ಯ ಪ್ರಕಾಶ್, ಲೊಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.