ADVERTISEMENT

ಕಸ, ಮಾಂಸ ತ್ಯಾಜ್ಯದ ರಾಶಿ: ಕ್ರಮಕ್ಕೆ ಆಗ್ರಹ

ಸಾಂಕ್ರಾಮಿಕ ರೋಗ ಹರಡುವ ಭೀತಿ, ಜಾರಿಯಾಗದ ನಗರಸಭೆ ನಿರ್ಣಯ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 12:42 IST
Last Updated 12 ಅಕ್ಟೋಬರ್ 2019, 12:42 IST
ಚನ್ನಪಟ್ಟಣದ 22ನೇ ವಾರ್ಡ್‌ನ ಈಡಿಗರ ಬೀದಿಯಲ್ಲಿ ಕಸದ ರಾಶಿ ಬಿದ್ದಿರುವುದು
ಚನ್ನಪಟ್ಟಣದ 22ನೇ ವಾರ್ಡ್‌ನ ಈಡಿಗರ ಬೀದಿಯಲ್ಲಿ ಕಸದ ರಾಶಿ ಬಿದ್ದಿರುವುದು   

ಚನ್ನಪಟ್ಟಣ: ಇಲ್ಲಿನ22ನೇ ವಾರ್ಡ್‌ನ ಈಡಿಗರ ಬೀದಿಯಲ್ಲಿರುವ ಖಾಸಗಿ ಸ್ವತ್ತಿನಲ್ಲಿ ಸಾರ್ವಜನಿಕರು ಕಸದ ರಾಶಿ ಹಾಕುವುದರ ಜೊತೆಗೆ ಪಕ್ಕದಲ್ಲೇ ಇರುವ ಮೇಕೆ, ಕುರಿ ಕಸಾಯಿಖಾನೆಯಿಂದ ಬರುವ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಇದರಿಂದ ಸುತ್ತಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳಾದ ಅಬ್ದುಲ್ ಬಷೀರ್, ಬಾಬುಲಾಲ್ ತಿಳಿಸಿದ್ದಾರೆ.

ಎಂ.ಜಿ ರಸ್ತೆಗೆ ಹೊಂದಿಕೊಂಡಂತೆ ಇರುವ 22ನೇ ವಾರ್ಡ್‌ನಲ್ಲಿ ಖಾಸಗಿ ಸ್ವತ್ತು ಇದ್ದು, ಅದನ್ನು ವಾರ್ಡ್‌ನ ಜನರು ಕಸ ಹಾಕುವ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. ಅಲ್ಲದೆ ಸ್ಥಳದಿಂದ ಗಾವುದ ದೂರದಲ್ಲಿ ಕಸಾಯಿಖಾನೆ ಇದೆ. ಯಾವುದೇ ರೀತಿಯ ಪರವಾನಗಿ ಇಲ್ಲದೆ ಈ ಸ್ಥಳದಲ್ಲಿ ಮೇಕೆ, ಕುರಿಗಳ ತ್ಯಾಜ್ಯ ಹಾಕುತ್ತಿದ್ದಾರೆ. ಕಸ ಹಾಗೂ ಮಾಂಸದ ತ್ಯಾಜ್ಯದಿಂದ ನಿತ್ಯ ಗಬ್ಬು ವಾಸನೆ ಬೀರುತ್ತಾ ಸ್ಥಳೀಯರು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಿಸುತ್ತಿದ್ದಾರೆ ಎಂದಿದ್ದಾರೆ.

ಈ ಸ್ಥಳದಲ್ಲಿ ನಿತ್ಯ ಸಾವಿರಾರು ಮಂದಿ ತಿರುಗಾಡುತ್ತಾರೆ. ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ನಗರಸಭಾ ಸದಸ್ಯರ ಅವಧಿಯಲ್ಲಿ ಈ ಜಾಗದಲ್ಲಿ ಕಸ ಹಾಗೂ ಮಾಂಸದ ತ್ಯಾಜ್ಯ ಹಾಕುವುದನ್ನು ನಿರ್ಬಂಧಿಸಿ, ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡರೂ ಅದಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಅವರು ದೂರಿದ್ದಾರೆ.

ADVERTISEMENT

ಖಾಸಗಿ ಸ್ಥಳದ ಮಾಲೀಕರಿಗೂ ಮತ್ತೊಬ್ಬರಿಗೂ ಸ್ವತ್ತಿನ ವಿಚಾರದಲ್ಲಿ ತಗಾದೆ ನಡೆದಿದೆ. ಈ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಜಾಗ ಖಾಲಿ ಇದೆ. ಇದನ್ನೇ ನೆಪ ಮಾಡಿಕೊಂಡು ಕೆಲವರು ಕಸ ತಂದು ಸುರಿಯುತ್ತಿದ್ದಾರೆ. ನಗರಸಭೆ ಆಡಳಿತ ಈ ಸ್ಥಳದಲ್ಲಿ ಕಸ ಹಾಕುವುದು ಹಾಗೂ ಕಸಾಯಿಖಾನೆಯಿಂದ ಬರುವ ಮಾಂಸದ ತ್ಯಾಜ್ಯವನ್ನು ಹಾಕದಂತೆ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನಗರಸಭೆ‘ಸ್ವಚ್ಛ ಭಾರತ್’ ಯೋಜನೆಯ ಆಂದೋಲನ ನಡೆಸುತ್ತಿದೆ. ಆದರೆ ಈ ಸ್ಥಳದಲ್ಲಿ ಕಸ ಹಾಕುತ್ತಿರುವುದರ ಬಗ್ಗೆ ನಗರಸಭೆ ಗಮನ ಹರಿಸುತ್ತಿಲ್ಲ. ನಿಯಂತ್ರಣಕ್ಕೆ ಮುಂದಾಗದಿರುವುದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.