ADVERTISEMENT

ತರಕಾರಿ, ಹೂ ಬೆಳೆಗಾರರ ಸಂಕಷ್ಟ: ಸಿ.ಎಂ ಜೊತೆ ಚರ್ಚೆ

ಸಂಸದ ಡಿ.ಕೆ.ಸುರೇಶ್‌ ಹೇಳಿಕೆ l ₹ 500 ಕೋಟಿ ಬೆಳೆ ನಷ್ಟ ಅಂದಾಜು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 15:16 IST
Last Updated 19 ಏಪ್ರಿಲ್ 2020, 15:16 IST
ದಿನಸಿ ಕಿಟ್‌ ಅನ್ನು ಸಂಸದ ಡಿ.ಕೆ.ಸುರೇಶ್‌ ವಿತರಿಸಿದರು
ದಿನಸಿ ಕಿಟ್‌ ಅನ್ನು ಸಂಸದ ಡಿ.ಕೆ.ಸುರೇಶ್‌ ವಿತರಿಸಿದರು   

ಬಿಡದಿ: ಲಾಕ್‌ಡೌನ್‌ನಿಂದಾಗಿ ರೈತರು, ಜನ ಸಾಮಾನ್ಯರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಈಗಾಗಲೇ ಜಿಲ್ಲಾಡಳಿತದ ಜೊತೆಗೆ ಮುಖ್ಯಮಂತ್ರಿ ಅವರ ಗಮನಕ್ಕೂ ತರಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು.

ಮಂಚನಾಯಕನಹಳ್ಳಿ ಗ್ರಾಮದಲ್ಲಿ ಭಾನುವಾರ ಕೆಪಿಸಿಸಿ ಸದಸ್ಯ ಬ್ಯಾಟಪ್ಪ ಅವರ ವತಿಯಿಂದ ನೀಡಲಾದ ದಿನಸಿ ಹಾಗೂ ತರಕಾರಿ ಕಿಟ್ ವಿತರಿಸಿ ಅವರು ಮಾತನಾಡಿದರು.

ಬೇಸಿಗೆ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಬಗ್ಗೆಯೂ ಈಗಾಗಲೇ ಜಿಲ್ಲಾಡಳಿತಕ್ಕೆ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯಲ್ಲಿ ರೈತರಂತೆಯೇ ಹೂ ಬೆಳೆಗಾರರಿಗೂ ಸಂಕಷ್ಟ ಎದುರಾಗಿದೆ. ಗಿಡಗಳಲ್ಲಿಯೇ ಹೂ ಬಾಡುತ್ತಿವೆ. ಈ ಭಾಗದಲ್ಲಿ ಸುಮಾರು ₹ 500 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಈ ಸಂಬಂಧ ಪರಿಹಾರ ಕಂಡುಕೊಳ್ಳುವ ದಿಕ್ಕಿನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ವಲಸಿಗರು ಹೆಚ್ಚು: ಬಿಡದಿ ಹೋಬಳಿಯಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿರುವ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ದಿನಗೂಲಿ ಕಾರ್ಮಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕೊರೊನಾ, ಲಾಕ್‌ಡೌನ್‌ನಿಂದ ಉಂಟಾದ ಸಂಕಷ್ಟದ ಸಮಯ ಹಲವು ದಾನಿಗಳು ಮುಂದೆ ಬಂದಿದ್ದಾರೆ. ಕೆಪಿಸಿಸಿ ಸದಸ್ಯ ಬ್ಯಾಟಪ್ಪ, ಎಚ್‌.ಸಿ. ಬಾಲಕೃಷ್ಣ, ಗಾಣಕಲ್‌ ನಟರಾಜು ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಜನ ಸಾಮಾನ್ಯರ ಸಮಸ್ಯೆಗಳನ್ನು ಆಲಿಸಲೆಂದೇ ಕೆಪಿಸಿಸಿ ವತಿಯಿಂದ ಟಾಸ್ಕ್‌ಫೋರ್ಸ್ ಸಮಿತಿ ರಚಿಸಲಾಗಿದೆ. ಆಯಾ ವಿಧಾನಸಭಾ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅವಿರತವಾಗಿ ದುಡಿದು ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯರಾದ ಸಿ.ಎಂ.ಲಿಂಗಪ್ಪ, ಎಸ್.ರವಿ, ದಿಶಾ ಸದಸ್ಯೆ ಕಾವ್ಯಾ, ಪುರಸಭೆ ಸದಸ್ಯ ರಮೇಶ್, ಮಂಚನಾಯಕನಹಳ್ಳಿ ಗ್ರಾಪಂ ಅಧ್ಯಕ್ಷೆ ನಂದಪ್ರಭಾ ಆನಂದ್, ಸ್ಥಳೀಯ ಮುಖಂಡರಾದ ಆನಂದ್, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.