ರಾಮನಗರ: ಮುಂಗಾರಿನಲ್ಲಿನ ಮಳೆ ಏರಿಳಿತದಂತೆ ತರಕಾರಿ ಬೆಲೆಯೂ ಬದಲಾಗತೊಡಗಿದೆ. ಒಂದಿಷ್ಟು ಅಗ್ಗವಾಗಿದ್ದರೆ, ಇನ್ನೂ ಒಂದಿಷ್ಟು ಗಗನಮುಖಿ ಆಗತೊಡಗಿವೆ.
ಸದ್ಯ ದಪ್ಪ ಮೆಣಸಿನಕಾಯಿ ಹಾಗೂ ಕ್ಯಾರೆಟ್ ಧಾರಣೆ ಏರುತ್ತಲೇ ಇದೆ. ಲಾಕ್‌ಡೌನ್‌ನ ಆರಂಭದ ದಿನಗಳಲ್ಲಿ ಅತಿಹೆಚ್ಚು ನಷ್ಟ ಅನುಭವಿಸಿದ್ದು ಕ್ಯಾಪ್ಸಿಕಂ ಬೆಳೆಗಾರರು. ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬೆಳೆಯುವ ಈ ತರಕಾರಿ ಹೆಚ್ಚಾಗಿ ಬೆಂಗಳೂರಿನ ಮಾರುಕಟ್ಟೆಯಲ್ಲಿ ಬಿಕರಿ ಆಗುತಿತ್ತು. ಅದರಲ್ಲೂ ದೊಡ್ಡ ಹೋಟೆಲ್‌ಗಳಲ್ಲಿ ಬೇಡಿಕೆ ಹೊಂದಿತ್ತು. ಆದರೆ, ಲಾಕ್‌ಡೌನ್ ಸಂದರ್ಭ ಮಾರುಕಟ್ಟೆಗೆ ಅವಕಾಶ ಸಿಗದ ಕಾರಣ ಬೇಡಿಕೆಯೇ ಇಲ್ಲವಾಗಿ ಬೆಲೆ ಪಾತಾಳಕ್ಕೆ ಕುಸಿದಿತ್ತು. ಈಚೆಗೆ ಹೋಟೆಲ್ ಉದ್ಯಮ ಚೇತರಿಕೆ ಕಂಡು ಬೇಡಿಕೆ ಬಂದ ಹಿನ್ನೆಲೆಯಲ್ಲಿ ಕ್ಯಾಪ್ಸಿಕಂ ಮತ್ತೆ ಬೆಲೆ ಏರಿಸಿಕೊಳ್ಳತೊಡಗಿದೆ. ಇದರೊಂದಿಗೆ ಕ್ಯಾರೆಟ್‌ಗೂ ಬೇಡಿಕೆ ಕುದುರಿದ್ದು, ಇದರ ಬೆಲೆಯೂ ಐವತ್ತರ ಮೇಲೆ ದಾಟುತ್ತಿದೆ.
ಎರಡು ವಾರದ ಹಿಂದಷ್ಟೇ ದುಬಾರಿ ಆಗಿದ್ದ ಟೊಮೆಟೊ ಈಗ ಮತ್ತೆ ಅಗ್ಗವಾಗುತ್ತಿದೆ. ಮಾರುಕಟ್ಟೆಗೆ ಇದರ ಆವಕ ಹೆಚ್ಚಿರುವುದು ಇದಕ್ಕೆ ಕಾರಣ. ಪ್ರತಿ ಕೆ.ಜಿ.ಗೆ 40ರವರೆಗೆ ಏರಿಕೆ ಕಂಡಿದ್ದ ಟೊಮೆಟೊ ಈಗ ₹15ರ ಗಡಿಯಲ್ಲಿ ಮಾರಾಟ ನಡೆದಿದೆ. ಬೀನ್ಸ್ ಅರ್ಥಾತ್ ಹುರುಳಿಕಾಯಿ ಬೆಲೆಯಲ್ಲಿ ಹೆಚ್ಚೇನು ವ್ಯತ್ಯಾಸ ಆಗಿಲ್ಲ. ಹಾಗೆ ನೋಡಿದರೆ ಕೊಂಚ ಅಗ್ಗವೇ ಆಗುತ್ತಿದೆ. ನಿತ್ಯ ಬಳಕೆಯ ವಸ್ತುಗಳಲ್ಲಿ ಒಂದಾಗಿರುವ ಈರುಳ್ಳಿ ಸಹ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಆದರೆ, ಮುಂದಿನ ದಿನಗಳಲ್ಲಿ ಇದರ ಬೆಲೆ ಹೆಚ್ಚಾಗಬಹುದು ಎನ್ನುತ್ತಾರೆ ರಾಮನಗರ ಎಪಿಎಂಸಿಯಲ್ಲಿನ ವರ್ತಕರು.
ಅವರೆಗೆ ಬೇಡಿಕೆ ಕುಸಿತ: ಮಾರುಕಟ್ಟೆಯಲ್ಲಿ ಹಸಿ ಅವರೆಕಾಯಿಗೆ ಬೇಡಿಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಕೆ.ಜಿ. ಅವರೆಕಾಯಿ ಕೇವಲ ₹20ಕ್ಕೆ ಮಾರಾಟ ನಡೆದಿದೆ. ಮೈಸೂರು ಭಾಗದಿಂದ ಅವರೆಕಾಯಿ ಸ್ಥಳೀಯ ಮಾರುಕಟ್ಟೆಗೆ ಆವಕ ಆಗುತ್ತಿದೆ.
ಕೊತ್ತಂಬರಿ ಇಳಿಕೆ: ವಾರಗಳ ಹಿಂದೆ ದುಬಾರಿ ಆಗಿದ್ದ ನಾಟಿ ಕೊತ್ತಂಬರಿ ಸೊಪ್ಪಿನ ಬೆಲೆಯೂ ತಗ್ಗಿದ್ದು, ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರಾಟ ನಡೆದಿದೆ. ನಾಟಿ ತಳಿಯ ಸೊಪ್ಪು ದಪ್ಪನೆಯ ಕಟ್ಟು ₹20ಕ್ಕೆಲ್ಲ ಸಿಗುತ್ತಿದೆ. ಫಾರಂ ಕೊತ್ತಂಬರಿ 10ಕ್ಕೆ ಇಳಿದಿದೆ. ದಂಟು, ಸಬ್ಬಸ್ಸಿಗೆ, ಮೆಂತ್ಯ, ಪಾಲಕ್ ಮೊದಲಾದ ಸೊಪ್ಪುಗಳಲ್ಲವೂ ಅಗ್ಗವಾಗಿಯೇ ಇವೆ. ಮಳೆಗಾಲದ ಹಿನ್ನೆಲೆಯಲ್ಲಿ ನಿಂಬೆ, ಸೌತೆಕಾಯಿ ಸಹ ಅಗ್ಗವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.