ADVERTISEMENT

ತರಕಾರಿ ಬೆಲೆ ಗಗನಮುಖಿ

ಗ್ರಾಹಕರ ಕೈಕೆಟುಕದ ಬೀನ್ಸ್‌: ಮೆಣಸಿನಕಾಯಿ, ಶುಂಠಿ–ಬೆಳ್ಳುಳ್ಳಿಯೂ ತುಟ್ಟಿ

ಆರ್.ಜಿತೇಂದ್ರ
Published 30 ಮಾರ್ಚ್ 2019, 20:00 IST
Last Updated 30 ಮಾರ್ಚ್ 2019, 20:00 IST
ರಾಮನಗರದ ಹಳೇ ಬಸ್‌ ನಿಲ್ದಾಣದ ವೃತ್ತದಲ್ಲಿ ಶನಿವಾರ ಗ್ರಾಹಕರಿಗಾಗಿ ಕಾಯುತ್ತಿದ್ದ ತರಕಾರಿ ವರ್ತಕರುಪ್ರಜಾವಾಣಿ ಚಿತ್ರ: ಚಂದ್ರೇಗೌಡ
ರಾಮನಗರದ ಹಳೇ ಬಸ್‌ ನಿಲ್ದಾಣದ ವೃತ್ತದಲ್ಲಿ ಶನಿವಾರ ಗ್ರಾಹಕರಿಗಾಗಿ ಕಾಯುತ್ತಿದ್ದ ತರಕಾರಿ ವರ್ತಕರುಪ್ರಜಾವಾಣಿ ಚಿತ್ರ: ಚಂದ್ರೇಗೌಡ   

ರಾಮನಗರ: ಬೇಸಿಗೆ ಆರಂಭವಾಗುತ್ತಲೇ ತರಕಾರಿ ಧಾರಣೆಯು ಗಗನಮುಖಿ ಆಗುತ್ತಿದ್ದು, ಗ್ರಾಹಕರ ಕೈ ಸುಡತೊಡಗಿದೆ.

ಬೇಸಿಗೆಯಲ್ಲಿ ನೀರಿನ ಕೊರತೆಯ ಕಾರಣ ತರಕಾರಿ ಉತ್ಪಾದನೆಯು ಎಂದಿಗಿಂತ ಕಡಿಮೆಯೇ ಇರುತ್ತದೆ. ಹೀಗಾಗಿ ಅವುಗಳ ಬೆಲೆಯೂ ಏರುತ್ತಾ ಹೋಗುತ್ತಿದೆ. ಅದರಲ್ಲೂ ಹುರುಳಿಕಾಯಿ ಅರ್ಥಾತ್‌ ಬೀನ್ಸ್ ಅಂತೂ ಕೊಳ್ಳುವವರ ಕೈಗೆ ಎಟುಕದಂತೆ ಆಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹ 80–100ರ ದರದಲ್ಲಿ ಮಾರಾಟ ಕಾಣುತ್ತಿದೆ. ನುಗ್ಗೆಕಾಯಿ,ದಪ್ಪ ಮೆಣಸಿನಕಾಯಿ ಬೆಲೆ ಇದಕ್ಕಿಂತ ಕೊಂಚ ಕಡಿಮೆ ಇದ್ದು, ಅದಕ್ಕೂ ತಕ್ಕನಾದ ಬೇಡಿಕೆ ಇದೆ. ಮದುವೆ, ಗೃಹಪ್ರವೇಶ ಮೊದಲಾದ ಶುಭಲಗ್ನಗಳ ಕಾರಣ ಈ ಎರಡರ ಬೆಲೆ ಏರಿಕೆಯಾಗುತ್ತಿದೆ ಎನ್ನುವುದು ವರ್ತಕರ ಅಭಿಪ್ರಾಯ.

ಹಾಗಲಕಾಯಿ ರುಚಿಯಲ್ಲಿ ಕಹಿಯಾಗಿರುವ ಜೊತೆಗೆ ಕೊಳ್ಳುವವರ ಪಾಲಿಗೂ ಕಹಿಯೇ ಆಗುತ್ತಿದೆ. ಇದರ ಧಾರಣೆಯೂ ಏರುಮುಖವಾಗಿಯೇ ಇದೆ. ಹಸಿಮೆಣಸಿನಕಾಯಿಯೂ ಗ್ರಾಹಕರಿಗೆ ಖಾರವಾಗುತ್ತಿದ್ದು, ದಿಢೀರನೆ ಬೆಲೆ ಏರಿಸಿಕೊಳ್ಳತೊಡಗಿದೆ. ಪ್ರತಿ ಕೆ.ಜಿ.ಗೆ ₹ 100ರವರೆಗೂ ಇದರ ಬೆಲೆ ಇದೆ. ಸುವರ್ಣಗಡ್ಡೆ, ಬೆಳ್ಳುಳ್ಳಿ ದರವು ₹ 50–60ರ ಆಸುಪಾಸಿನಲ್ಲಿ ಇದೆ. ತಿಂಗಳ ಹಿಂದಷ್ಟೇ ಪ್ರತಿ ಕೆ.ಜಿ.ಗೆ ₹ 20ರಂತೆ ಮಾರಾಟ ಕಂಡಿದ್ದ ಬೆಳ್ಳುಳ್ಳಿಯು ಇದೀಗ ಬೆಲೆ ಹೆಚ್ಚಿಸಿಕೊಳ್ಳತೊಡಗಿದೆ. ಶುಂಠಿಯ ಬೆಲೆ ಕೂಡ ಹೆಚ್ಚಾಗುತ್ತಿದೆ.

ADVERTISEMENT

ಈರುಳ್ಳಿ ಮತ್ತು ಟೊಮ್ಯಾಟೊ ಬೆಲೆಯಲ್ಲಿ ಮಾತ್ರ ಸದ್ಯ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಇದರಿಂದಾಗಿ ಕೊಳ್ಳುವವರು ಕೊಂಚ ಸಮಾಧಾನಗೊಂಡಿದ್ದಾರೆ. ಕ್ಯಾರೆಟ್‌, ಬದನೆ, ಬೆಂಡೆ. ಕೋಸು, ಬೀಟ್‌ರೂಟ್‌, ಮೂಲಂಗಿ ಮೊದಲಾದ ತರಕಾರಿಗಳ ಬೆಲೆಯು ₹ 40ರ ಆಸುಪಾಸಿನಲ್ಲಿ ಇದೆ.

ಸೊಪ್ಪುಗಳ ಪೈಕಿ ನಾಟಿ ಕೊತ್ತಂಬರಿ ಕಂತೆ ₹ 20 ದರವಿದ್ದರೆ, ಪಾಲಕ್‌, ಮೆಂತ್ಯ, ಸಬ್ಬಸಿಗೆ, ಫಾರ್ಮ್‌ ಕೊತ್ತಂಬರಿ, ದಂಟು, ಕೀರೆ ಸೊಪ್ಪುಗಳು ಕಂತೆಗೆ ₹ 10–15ರ ಬೆಲೆ ಹೊಂದಿವೆ.

ಸೌತೆ, ನಿಂಬೆಗೆ ಬೇಡಿಕೆ
ಬೇಸಿಗೆಯ ಕಾರಣ ನಿಂಬೆ ಹಾಗೂ ಸೌತೆಕಾಯಿ ತಮ್ಮ ಬೆಲೆಯನ್ನು ಏರಿಸಿಕೊಂಡಿವೆ. ಚಿಲ್ಲರೆ ಮಾರುಕಟ್ಟೆಯಲ್ಲಿ ದೊಡ್ಡ ಗಾತ್ರದ ಒಂದು ಸೌತೆಕಾಯಿ ₹ 10ಕ್ಕೆ ಮಾರಾಟವಾಗುತ್ತಿದೆ. ಮಧ್ಯಮ ಗಾತ್ರದ್ದು ₹ 20ಕ್ಕೆ 3 ಸಿಗುತ್ತಿವೆ. ನಿಂಬೆ ಹಣ್ಣು ಮಧ್ಯಮ ಗಾತ್ರದ್ದು 1ಕ್ಕೆ ₹ 4 ಹಾಗೂ ದಪ್ಪನೆ ಕಾಯಿ ₹ 5ರಂತೆ ಬೆಲೆ ಇದೆ. ಬೇಸಿಗೆಯ ತೀವ್ರತೆ ಹೆಚ್ಚಾದಂತೆಲ್ಲ ಇವುಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ.

ಕಲ್ಲಂಗಡಿ, ಖರ್ಬೂಜ ಮಾರಾಟ ಹೆಚ್ಚಳ
ಬೇಸಿಗೆಯ ದಾಹ ತಣಿಸುವ ಕಲ್ಲಂಗಡಿ ಹಾಗೂ ಖರ್ಬೂಜ ಹಣ್ಣುಗಳ ಬೆಲೆಯೂ ಏರುಮುಖವಾಗಿದೆ. ಇವು ಪ್ರತಿ ಕೆ.ಜಿ.ಗೆ ₹ 20ರ ದರದಲ್ಲಿ ಮಾರಾಟವಾಗುತ್ತಿವೆ. ಮಧ್ಯಮ ಗಾತ್ರದ ಕಲ್ಲಂಗಡಿ ಉಂಡೆ ₹ 40ಕ್ಕೆ ಸಿಕ್ಕರೆ, ಖರ್ಬೂಜ ₹ 20ಕ್ಕೆ ಸಿಗುತ್ತಿದೆ. ಮಧ್ಯಾಹ್ನದ ಹೊತ್ತಿನಲ್ಲಿ ಇವುಗಳ ಮಾರಾಟ ಜೋರಾಗಿ ನಡೆದಿದೆ.

ತರಕಾರಿ ಧಾರಣೆ (ಚಿಲ್ಲರೆ ಮಾರಾಟ– ಪ್ರತಿ ಕೆ.ಜಿ.ಗೆ)
ಬೀನ್ಸ್–₹ 80–100
ಈರೇಕಾಯಿ, ಬೆಂಡೆ, ಮೂಲಂಗಿ, ಬೀಟ್‌ರೂಟ್‌, ಸೋರೆಕಾಯಿ–₹ 40
ನುಗ್ಗೆ–₹ 60
ಶುಂಠಿ–₹ 80–100
ಬೆಳ್ಳುಳ್ಳಿ–₹ 50–60
ಈರುಳ್ಳಿ–₹ 20
ಹಸಿ ಮೆಣಸಿನಕಾಯಿ–₹ 80–100
ದಪ್ಪ ಮೆಣಸಿನಕಾಯಿ–₹ 60
ಹಾಗಲಕಾಯಿ–₹ 60
ಟೊಮ್ಯಾಟೊ–15
ಕೋಸು–₹ 30
ಆಲೂಗಡ್ಡೆ–₹ 20
ಬಾಳೆ (ಪಚ್ಚೆ)–₹ 30
ಬಾಳೆ (ಏಲಕ್ಕಿ)–₹ 50–60
ಸೌತೆಕಾಯಿ (ಒಂದಕ್ಕೆ)–₹ 8–10
ನಿಂಬೆ (ಒಂದಕ್ಕೆ) ₹ 4–5

*‘ತಿಂಗಳ ಹಿಂದಷ್ಟೇ ಬೆಳ್ಳುಳ್ಳಿ ಕೆ.ಜಿ ₹ 20, ಬೀನ್ಸ್ ₹ 40 ಇತ್ತು. ಈಗ ಯಾವ ತರಕಾರಿಯೂ ಕೆ.ಜಿ.ಗೆ ₹ 20–30ರ ಒಳಗೆ ಸಿಗುತ್ತಿಲ್ಲ
–ಶ್ರೀನಿವಾಸ್,ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.