ADVERTISEMENT

‘ದಿಲ್ಲಿ’ ಚುನಾವಣೆಯಲ್ಲೂ ಹಳ್ಳಿ ರಾಜಕೀಯ!

ಗ್ರಾಮವಾರು ಪಡೆದ ಮತಗಳ ವಿಶ್ಲೇಷಣೆ: ಹಿನ್ನಡೆ ತಂದುಕೊಟ್ಟವರಿಗೆ ತರಾಟೆ

ಆರ್.ಜಿತೇಂದ್ರ
Published 25 ಮೇ 2019, 19:45 IST
Last Updated 25 ಮೇ 2019, 19:45 IST
ಹಳ್ಳಿಯೊಂದರಲ್ಲಿನ ಮುನ್ನಡೆ ಕುರಿತು ಕಾರ್ಯಕರ್ತರೊಬ್ಬರು ಫೇಸ್‌ಬುಕ್‌ನಲ್ಲಿ ಹಾಕಿದ ಬರಹ
ಹಳ್ಳಿಯೊಂದರಲ್ಲಿನ ಮುನ್ನಡೆ ಕುರಿತು ಕಾರ್ಯಕರ್ತರೊಬ್ಬರು ಫೇಸ್‌ಬುಕ್‌ನಲ್ಲಿ ಹಾಕಿದ ಬರಹ   

ರಾಮನಗರ: ಕೇಂದ್ರ ಸಂಸತ್‌ಗೆ ನಡೆದ ಚುನಾವಣೆಯ ಲೆಕ್ಕಾಚಾರವು ಯಾವ ಗ್ರಾಮ ಪಂಚಾಯಿತಿ ಚುನಾವಣೆಗೂ ಕಡಿಮೆ ಇಲ್ಲದಂತೆ ಆಗಿದೆ. ಯಾವ ಹಳ್ಳಿಯಲ್ಲಿ ಯಾರಿಗೆ ಮುನ್ನಡೆಯಾಯಿತು? ಯಾರಿಗೆ ಹಿನ್ನಡೆ? ಎಂಬುದು ಚರ್ಚೆಗೂ ಗ್ರಾಸವಾಗುತ್ತಿದೆ.

ರಾಮನಗರವು ನೆರೆಯ ಮಂಡ್ಯದಂತೆಯೇ ರಾಜಕೀಯವನ್ನೇ ಹಾಸಿ ಹೊದ್ದು ಮಲಗುವ ಜಿಲ್ಲೆ. ಹೊಲದಲ್ಲಿನ ಕೆಲಸದ ಬಿಡುವಿನಲ್ಲಿ, ಮುಂಜಾನೆಯ ವಾಕಿಂಗ್‌ನ ಸಮಯದಲ್ಲಿ, ಸಂಜೆ ಚಹಾ ವಿರಾಮದ ಭೇಟಿಯಲ್ಲೂ ಬರೀ ರಾಜಕೀಯದ್ದೇ ಮಾತು. ಅದರಲ್ಲೂ ಹಳ್ಳಿಗಳ ಅರಳೀಕಟ್ಟೆಗಳಲ್ಲಿ ಮತದಾನ ಮುಗಿದ ದಿನದಿಂದ ಈವರೆಗೂ ಬರೀ ಮುನ್ನಡೆ–ಹಿನ್ನಡೆಯದ್ದೇ ಚರ್ಚೆಯಾಗುತ್ತಿದೆ.

ವಿಧಾನಸಭಾ ಕ್ಷೇತ್ರವಾರು ಯಾವ ಊರಿನ ಮತಗಟ್ಟೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಮತ ಸಿಕ್ಕಿದೆ ಎಂಬ ಪಟ್ಟಿ ಈಗಾಗಲೇ ಅಭ್ಯರ್ಥಿಗಳು, ರಾಜಕೀಯ ಮುಖಂಡರ ಕೈ ಸೇರಿದೆ. ಸಾಮಾಜಿಕ ಜಾಲತಾಣಗಳಿಂದಾಗಿ ಇದೇ ಪಟ್ಟಿ ಪ್ರತಿಯೊಬ್ಬರ ಮೊಬೈಲುಗಳಲ್ಲೂ ಹರಿದಾಡುತ್ತಿದೆ. ತಮ್ಮೂರಿನ ಮಟ್ಟಿಗೆ ಮುನ್ನಡೆ ಏನೆಂಬುದರ ಕುರಿತು ಗ್ರಾಮೀಣರಲ್ಲೂ ಕುತೂಹಲ ಮನೆ ಮಾಡಿದೆ.

ADVERTISEMENT

ಮೈತ್ರಿ ಲೆಕ್ಕಾಚಾರಕ್ಕೆ ಅನುಕೂಲ: ಗ್ರಾಮವಾರು ಮತಗಳಿಕೆಯ ಪಟ್ಟಿಯು ಮೈತ್ರಿ ರಾಜಕಾರಣದ ಲೆಕ್ಕಾಚಾರಕ್ಕೆ ಅನುಕೂಲವಾಗಿ ಪರಿಣಮಿಸಿದೆ ಎನ್ನುತ್ತಾರೆ ಕಾಂಗ್ರೆಸ್‌ ಕಾರ್ಯಕರ್ತರು.

ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್‌ ಇಲ್ಲವೇ ಜೆಡಿಎಸ್‌ ಬೆಂಬಲಿತರು ಅಧಿಕಾರದಲ್ಲಿ ಇದ್ದಾರೆ. ‘ಜೆಡಿಎಸ್‌ ಇರುವ ಕಡೆ ಕೆಲವು ಬೂತ್‌ಗಳಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಹೋಗಿವೆ. ಇದು ಕ್ಷೇತ್ರದಲ್ಲಿ ಮೈತ್ರಿ ರಾಜಕಾರಣಕ್ಕೆ ಯಾವ ಮಟ್ಟಿಗೆ ಸ್ಪಂದನೆ ಇದೆ ಎಂಬುದರ ಸೂಚಕವಾಗಿದೆ. ಇದನ್ನು ನಮ್ಮ ನಾಯಕರ ಗಮನಕ್ಕೂ ತಂದಿದ್ದೇವೆ’ ಎನ್ನುತ್ತಾರೆ ಅವರು.

‘ಚುನಾವಣೆಯಲ್ಲಿ ಹಣ ಹಂಚಿಕೆ ವಿಚಾರ ಗುಟ್ಟಾಗಿ ಉಳಿದಿಲ್ಲ. ಆದರೆ ಹಣ ಪಡೆದೂ ಹಿನ್ನಡೆ ಆಗಿರುವ ಕಡೆ ಜವಾಬ್ದಾರಿ ವಹಿಸಿಕೊಂಡವರಿಗೆ ನಾಯಕರಿಂದ ಕ್ಲಾಸ್‌ ಇದ್ದೇ ಇರುತ್ತದೆ. ಭಾರಿ ಮುನ್ನಡೆ ಗಳಿಸಿಕೊಟ್ಟವರಿಗೆ ನಾನಾ ರೂಪಗಳಲ್ಲಿ ಋಣ ಸಂದಾಯವೂ ಆಗುತ್ತದೆ’ ಎನ್ನುವುದು ಕಾರ್ಯಕರ್ತರ ವಿವರಣೆ.

ಸಾಮಾಜಿಕ ಜಾಲತಾಣದಲ್ಲಿ ನಿಷ್ಠೆ ಪ್ರದರ್ಶನ
ತಮ್ಮೂರಿನಲ್ಲಿ ಪಕ್ಷ/ಅಭ್ಯರ್ಥಿಗೆ ಸಿಕ್ಕ ಮತ ಮುನ್ನಡೆಯನ್ನು ಫೇಸ್‌ಬುಕ್‌, ವಾಟ್ಸಪ್‌ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವ ಮೂಲಕ ಸಾಕಷ್ಟು ಮಂದಿ ತಮ್ಮ ನಿಷ್ಠೆ ಪ್ರದರ್ಶನ ಮಾಡುತ್ತಿದ್ದಾರೆ. ಹಿನ್ನಡೆ ಸಿಕ್ಕ ಕಡೆ ಮಾತ್ರ ಕಾರ್ಯಕರ್ತರು ಮುಖಕ್ಕೆ ಬಟ್ಟೆ ಹೊದ್ದು ಕುಳಿತಿದ್ದಾರೆ.

ಈಗಾಗಲೇ ಇಂತಹ ಹಲವು ಪೋಸ್ಟ್‌ಗಳು ಫೇಸ್‌ಬುಕ್‌ನಲ್ಲಿ ಕಾಣಸಿಗುತ್ತಿವೆ. ಅದಕ್ಕೆ ಪಕ್ಷದ ಮುಖಂಡರು, ನಾಯಕರನ್ನು ಟ್ಯಾಗ್‌ ಸಹ ಮಾಡಲಾಗುತ್ತಿದೆ.

ರಾಮನಗರದಲ್ಲಿ ಕಾಂಗ್ರೆಸ್, ಜೆಡಿಎಸ್‌ ಹಾಗೂ ಬಿಜೆಪಿಗಳು ತಮ್ಮದೇ ಆದ ವಾಟ್ಸಪ್‌ ಗ್ರೂಪ್‌ಗಳನ್ನು ರಚಿಸಿಕೊಂಡಿವೆ. ಇಲ್ಲಿ ಗ್ರಾಮವಾರು ಮುನ್ನಡೆಗಳ ಪಟ್ಟಿಯೇ ಸಿಗುತ್ತದೆ. ಅದರ ಮೇಲೆ ಮುಖಂಡರ ಬಲ ಅಳೆಯುವ ಪ್ರಯತ್ನ ನಡೆದಿದೆ. ಪರಸ್ಪರ ಕಾಲೆಳೆಯುವ, ಬೈದುಕೊಳ್ಳುವುದೂ ಇಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.