ADVERTISEMENT

ಅಂತರರಾಷ್ಟ್ರೀಯ ರಣಹದ್ದು ಜಾಗೃತಿ ದಿನ: ರಾಮದೇವರ ಬೆಟ್ಟದಲ್ಲಿ ರಣಹದ್ದು ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 2:46 IST
Last Updated 14 ಸೆಪ್ಟೆಂಬರ್ 2025, 2:46 IST
<div class="paragraphs"><p>ಅಂತರರಾಷ್ಟ್ರೀಯ ರಣಹದ್ದು ಜಾಗೃತಿ ದಿನದ ಅಂಗವಾಗಿ ರಾಮನಗರದ ಕೃಷ್ಣ ಸ್ಮೃತಿ ಕಲ್ಯಾಣದಲ್ಲಿ ಅರಣ್ಯ ಇಲಾಖೆ, ರಾಜ್ಯ ರಣಹದ್ದು ಸಂರಕ್ಷಣಾ ಟ್ರಸ್ಟ್ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ರಣಹದ್ದು ಜಾಗೃತಿ ದಿನ ಕಾರ್ಯಕ್ರಮ ಜರುಗಿತು. </p></div>

ಅಂತರರಾಷ್ಟ್ರೀಯ ರಣಹದ್ದು ಜಾಗೃತಿ ದಿನದ ಅಂಗವಾಗಿ ರಾಮನಗರದ ಕೃಷ್ಣ ಸ್ಮೃತಿ ಕಲ್ಯಾಣದಲ್ಲಿ ಅರಣ್ಯ ಇಲಾಖೆ, ರಾಜ್ಯ ರಣಹದ್ದು ಸಂರಕ್ಷಣಾ ಟ್ರಸ್ಟ್ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ರಣಹದ್ದು ಜಾಗೃತಿ ದಿನ ಕಾರ್ಯಕ್ರಮ ಜರುಗಿತು.

   

ರಾಮನಗರ: ‘ದೇಶದಲ್ಲಿಉದ್ದ ಕೊಕ್ಕಿನ ರಣಹದ್ದುಗಳ ಸಂಖ್ಯೆಯು ಇಳಿಕೆಯ ಹಾದಿಯಲ್ಲಿರುವುದು ಆತಂಕಕಾರಿ ವಿಷಯ. ಪರಿಸರ ರಕ್ಷಕವಾಗಿರುವ ರಣಹದ್ದುಗಳ ಸಂತತಿ ವೃದ್ಧಿಯಾಗಬೇಕಿದೆ. ಆ ನಿಟ್ಟಿನಲ್ಲಿ ಬನ್ನೇರುಘಟ್ಟದಲ್ಲಿ ಸ್ಥಾಪನೆಯಾಗಿರುವ ರಣಹದ್ದು ಸಂತಾನೋತ್ಪತ್ತಿ ಕೇಂದ್ರವು ತುರ್ತಾಗಿ ಕಾರ್ಯಾರಂಭಿಸಬೇಕು’ ಎಂದು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ (ಬಿಎನ್‌ಎಚ್‌ಎಸ್) ನಿವೃತ್ತ ಉಪ ನಿರ್ದೇಶಕ ಡಾ. ವಿಬು ಪ್ರಕಾಶ್ ಹೇಳಿದರು.

ಅಂತರರಾಷ್ಟ್ರೀಯ ರಣಹದ್ದು ಜಾಗೃತಿ ದಿನದ ಅಂಗವಾಗಿ, ಅರಣ್ಯ ಇಲಾಖೆಯು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಹಾಗೂ ಇತರ ಸಂಸ್ಥೆಗಳ ಸಹಯೋಗದಲ್ಲಿ ನಗರದ ಕೃಷ್ಣ ಸ್ಮತಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ರಣಹದ್ದು ಜಾಗೃತಿ ದಿನ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು.

‘ಅಳಿವಿನಂಚಿನಲ್ಲಿರುವ ರಣಹದ್ದುಗಳ ಉಳಿವಿಗಾಗಿ ಸಂತಾನೋತ್ಪತ್ತಿ ಕೇಂದ್ರ ಕಾರ್ಯಾರಂಭಿಸಲು ಅರಣ್ಯ ಇಲಾಖೆಯು ಶೀಘ್ರ ಕ್ರಮ ಕೈಗೊಳ್ಳಬೇಕು. ರಣಹದ್ದುಗಳ ಸಂರಕ್ಷಣೆಗಾಗಿ ಇರುವ ರಾಮದೇವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಅವುಗಳ ವಾಸಕ್ಕೆ ಧಕ್ಕೆಯಾಗುವ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಸಾರ್ವಜನಿಕ ಜಾಗೃತಿಯೂ ಅಗತ್ಯವಿದೆ’ ಎಂದರು.

ಸೇವ್ ವಲ್ಚರ್ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಕ್ರಿಸ್ ಬೌಡೋನ್ ಮಾತನಾಡಿ, ‘ಪ್ರಕೃತಿಯ ಸಮತೋಲನದಲ್ಲಿ ರಣಹದ್ದುಗಳ ಪಾತ್ರ ದೊಡ್ಡದು. ಅವುಗಳ ಸಂಖ್ಯೆ ಹೆಚ್ಚಾದಷ್ಟೂ ಪರಿಸರ ಉತ್ತಮವಾಗಿರುತ್ತವೆ. ಅವುಗಳ ಸಂಖ್ಯೆ ಹೆಚ್ಚಳಕ್ಕೆ ಕ್ರಮ ಅಗತ್ಯ. ರಣಹದ್ದುಗಳು ಇರುವ ಕೇಂದ್ರದ 100 ಕಿ.ಮೀ. ವ್ಯಾಪ್ತಿಯಲ್ಲಿ ಸಿಗುವ‌ ಯಾವುದೇ ಪ್ರಾಣಿಯ ಕಳೇಬರವು ಡೈಕ್ಲೋಫೆನಾಕ್ ಮುಕ್ತವಾಗಿರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೂ ಮುಂಚೆ ನಗರದ ಹೊರವಲಯದಲ್ಲಿರುವ ರಾಮದೇವರ ಬೆಟ್ಟದಲ್ಲಿ ಬೆಳಿಗ್ಗೆ ಪರಿಸರ ನಡಿಗೆ ಹಮ್ಮಿಕೊಳ್ಳಲಾಗಿತ್ತು. ಬಳಿಕ, ಬೆಟ್ಟದಲ್ಲಿರುವ ರಣಹದ್ದುಗಳನ್ನು ವೀಕ್ಷಿಸಲಾಯಿತು. ಈ ವೇಳೆ, ಪರಿಸರ ಪ್ರೇಮಿಗಳು ತಮ್ಮ ಕ್ಯಾಮೆರಾದಲ್ಲಿ ರಣಹದ್ದುಗಳ ಫೋಟೊ ಕ್ಲಿಕ್ಕಿಸಿ ಸಂಭ್ರಮಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಮ್ಮ, ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಚಂದ್ರೇಗೌಡ, ಕಾರ್ಯದರ್ಶಿ ಶಶಿಕುಮಾರ್, ಆರ್‌ಎಫ್‌ಒಗಳಾದ ಮಹಮ್ಮದ್ ಮನ್ಸೂರ್, ಮಲ್ಲೇಶ್, ಜಗದೀಶ್ ‌ಗೌಡ, ಪರಿಸರ ಕಾರ್ಯಕರ್ತ ಮರಸಪ್ಪ ರವಿ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ಪರಿಸರ ಮತ್ತು ವನ್ಯಜೀವಿ ಪ್ರೇಮಿಗಳು ಕಾರ್ಯಕ್ರಮದಲ್ಲಿದ್ದರು.

ವೇದಿಕೆ ಕಾರ್ಯಕ್ರಮಕ್ಕೆ ಮುಂಚೆ ರಾಮನಗರದ ಹೊರವಲಯದ ರಾಮದೇವರ ಬೆಟ್ಟದ ರಣಹದ್ದು ಅಭಯಾರಣ್ಯದಲ್ಲಿ ಪರಿಸರ ಪ್ರೇಮಿಗಳು ರಣಹದ್ದುಗಳನ್ನು ವೀಕ್ಷಿಸಿ ಫೋಟೊ ಕ್ಲಿಕ್ಕಿಸಿದರು
ಅಳಿವಿನಂಚಿನಲ್ಲಿರುವ ರಣಹದ್ದುಗಳ ಸಂತತಿ ರಕ್ಷಣೆಗೆ ಅರಣ್ಯ ಇಲಾಖೆಯು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ. ರಣಹದ್ದುಗಳ ಮಹತ್ವವನ್ನು ಅರಿತು ಅವುಗಳ ಸಂರಕ್ಷಣೆಗೆ ನಾಗರಿಕರೂ ಸಹ ಜಾಗೃತರಾಗಬೇಕಿದೆ
ಪ್ರಭಾಸ್ ಚಂದ್ರ ರಾಯ್ ಪ್ರಧಾನ ಮುಖ್ಯ ಅರಣ್ಯ ಸಂಕರಕ್ಷಣಾಧಿಕಾರಿ ವನ್ಯಜೀವಿ ವಿಭಾಗ ಅರಣ್ಯ ಇಲಾಖೆ

ಸಂತತಿ ಹೆಚ್ಚಳಕ್ಕೆ ಶ್ರಮಿಸಬೇಕು

‘ರಣಹದ್ದುಗಳ ಸಂತತಿ ಹೆಚ್ಚಳಕ್ಕೆ ಕ್ರಮ ಅಗತ್ಯ. ಪ್ರತಿ ಪ್ರದೇಶಕ್ಕೂ ತನ್ನದೆ ಆದ ಮಹತ್ವವಿದ್ದು ಜೀವ ವೈವಿಧ್ಯಗಳ ಮೂಲಕ ಗಮನ ಸೆಳೆಯುತ್ತವೆ. ರಾಮನಗರದಲ್ಲಿರುವ ರಣಹದ್ದುಗಳ ಅಭಯಾರಣ್ಯ ಕೂಡ ಅದರಲ್ಲಿ ಒಂದು. ಕ್ಷೀಣಿಸುತ್ತಿರುವ ಅವುಗಳ ಸಂತತಿ ರಕ್ಷಣೆಗಾಗಿ ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ರಣಹದ್ದುಗಳ ಸಂತಾನೋತ್ಪತ್ತಿ ಕೇಂದ್ರ ಸ್ಥಾಪಿಸಲಾಗಿದೆ. ಅದು ಬೇಗ ಶುರುವಾಗಿ ರಣಹದ್ದುಗಳ ಸಂತತಿ ಹೆಚ್ಚಬೇಕು. ಅದಕ್ಕಾಗಿ ಅರಣ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟವರೆಲ್ಲರೂ ಶ್ರಮಿಸಬೇಕು’ ಎಂದು ತಮಿಳುನಾಡಿನ ಅರಳುಗಂ ಸಂಸ್ಥೆಯ ಕಾರ್ಯದರ್ಶಿ ಎಸ್. ಭಾರತೀದಾಸನ್ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.