ADVERTISEMENT

ಬಿಡದಿ: ಐವರ ಬಲಿ ಪಡೆದ ಕಂಪನಿಗೆ ಮತ್ತೆ ಕಾರ್ಯಾಚರಣೆ ಹೊಣೆ

ಬಿಡದಿಯ ತ್ಯಾಜ್ಯ ವಿದ್ಯುತ್ ಉತ್ಪಾದನಾ ಸ್ಥಾವರ ಕಾರ್ಯಾರಂಭ | ಹಲವು ಪ್ರಶ್ನೆ ಹುಟ್ಟು ಹಾಕಿದ ಇಲಾಖೆ ನಡೆ

ಓದೇಶ ಸಕಲೇಶಪುರ
Published 27 ಮೇ 2025, 4:34 IST
Last Updated 27 ಮೇ 2025, 4:34 IST
ರಾಮನಗರ ತಾಲ್ಲೂಕಿನ ಬಿಡದಿ ಬಳಿಯ ಬಿಲ್ಲಕೆಂಪನಹಳ್ಳಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರ (ಸಂಗ್ರಹ ಚಿತ್ರ)
ರಾಮನಗರ ತಾಲ್ಲೂಕಿನ ಬಿಡದಿ ಬಳಿಯ ಬಿಲ್ಲಕೆಂಪನಹಳ್ಳಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರ (ಸಂಗ್ರಹ ಚಿತ್ರ)   

ರಾಮನಗರ: ಐದು ತಿಂಗಳ ಹಿಂದೆ ಸಂಭವಿಸಿದ ಬಿಸಿ ಬೂದಿ ಅವಘಡದಲ್ಲಿ ಐವರು ಕಾರ್ಮಿಕರನ್ನು ಬಲಿ ಪಡೆದಿದ್ದ ತಾಲ್ಲೂಕಿನ ಬಿಡದಿ ಬಳಿಯ ಬಿಲ್ಲಕೆಂಪನಹಳ್ಳಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರ ಸದ್ದಿಲ್ಲದೆ ಕಾರ್ಯಾಚರಣೆ ಆರಂಭಿಸಿದೆ. ವಿಶೇಷವೆಂದರೆ, ಯಾವ ಕಂಪನಿ ಐವರು ಅಮಾಯಕರ ಸಾವಿಗೆ ಕಾರಣವಾಗಿತ್ತೊ, ಅದೇ ಕಂಪನಿಗೆ ಇಂಧನ ಇಲಾಖೆಯು ಸ್ಥಾವರದ ನಿರ್ವಹಣೆ ಹೊಣೆಯನ್ನು ವಹಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಸಂಗ್ರಹವಾಗುವ ಒಣ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಸಲುವಾಗಿ, ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್‌) ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದಲ್ಲಿ ಸ್ಥಾವರ ನಿರ್ಮಿಸಲಾಗಿದೆ. ಹದಿನೈದು ಎಕರೆಯಲ್ಲಿರುವ ಸ್ಥಾವರದ ನಿರ್ವಹಣೆಯನ್ನು ನೋಯ್ಡಾದ ಐಎಸ್‌ಜಿಇಸಿ ಹೆವಿ ಎಂಜಿನಿಯರಿಂಗ್ ಲಿಮಿಟೆಡ್ ಕಂಪನಿಗೆ ವಹಿಸಲಾಗಿತ್ತು. ಕಂಪನಿಯು ಎಂ/ಎಸ್ ಆರ್ಬೀಟ್ ಪವರ್‌ ಸಿಸ್ಟಮ್‌ ಮೂಲಕ ಸ್ಥಾವರದ ಕಾರ್ಯಾಚರಣೆ ನಡೆಸುತ್ತಿತ್ತು.

ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣ ಪ್ರಮಾಣಪತ್ರ (ಎನ್‌ಒಸಿ) ಪಡೆಯದೆ, ಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳದೆ, ಎಸ್‌ಒಪಿ ಪಾಲಿಸದೆ, ತರಬೇತಿ ಇಲ್ಲದ ಕಾರ್ಮಿಕರನ್ನು ಕೆಲಸ ನಿಯೋಜಿಸಿದ್ದು ಸೇರಿದಂತೆ ಸ್ಥಾವರದಲ್ಲಿ ಕೈಗೊಳ್ಳಬೇಕಿದ್ದ ಹಲವು ಕ್ರಮಗಳನ್ನು ಕಂಪನಿ ಗಾಳಿಗೆ ತೂರಿತ್ತು. ಬಾಯ್ಲರ್‌ಗೆ ಒಣ ಕಸದ ಜೊತೆಗೆ ಹಸಿ ಕಸವನ್ನೂ ಸುರಿಯಲಾಗಿತ್ತು.

ADVERTISEMENT

ಇಷ್ಟೆಲ್ಲಾ ನಿರ್ಲಕ್ಷ್ಯಗಳಿಂದಾಗಿ ದುರ್ಘಟನೆಗೆ ಕಾರಣವಾದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಇಲಾಖೆಯು, ಮತ್ತೆ ಸ್ಥಾವರದ ನಿರ್ವಹಣೆ ಹೊಣೆಯನ್ನು ಅದ ಕಂಪನಿಗೆ ನೀಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಹೊರರಾಜ್ಯಗಳ ಐವರು ಅಮಾಯಕರ ಸಾವಿಗೆ ನ್ಯಾಯವು ಮರೀಚಿಕೆಯಾಗಿದೆ.

ಕರಾಳ ಜ. 4: ಸ್ಥಾವರದಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ನಡೆಯುವಾಗ ಜ. 4ರಂದು ಸಂಜೆ ಚಿಮಣಿಯಲ್ಲಿ ಕಸ ಕಟ್ಟಿಕೊಂಡಿತ್ತು. ಸ್ಥಳದಲ್ಲಿದ್ದ ಐವರು ಕಾರ್ಮಿಕರು ಸುರಕ್ಷಾ ಪರಿಕರಗಳಿಲ್ಲದೆ ಚಿಮಣಿಯ ಒಂದು ಭಾಗದ ಕಿಟಕಿ ತೆರೆದು ಕಬ್ಬಿಣದ ಕೋಲಿನಿಂದ ಕಟ್ಟಿಕೊಂಡಿದ್ದ ತ್ಯಾಜ್ಯವನ್ನು ಸರಿಸಲು ಮುಂದಾಗಿದ್ದರು. ಈ ವೇಳೆ ಚಿಮಣಿಯಲ್ಲಿದ್ದ ಬಿಸಿ ಬೂದಿ ಮತ್ತು ಅರೆಬರೆ ಬೆಂದು ಸಿಲುಕಿಕೊಂಡಿದ್ದ ತ್ಯಾಜ್ಯವು ಕಾರ್ಮಿಕರ ಮೇಲೆ ಸಿಡಿದಿತ್ತು.

ಘಟನೆ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಎಲ್ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ತನಿಖೆಗೆ ಕೋರ್ಟ್ ತಡೆಯಾಜ್ಞೆ ನೀಡಿದ್ದು ಇನ್ನೂ ತೆರವಾಗಿಲ್ಲ.
– ಆರ್. ಶ್ರೀನಿವಾಸ ಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಘಟನೆಯಲ್ಲಿ ಬಿಹಾರದ ಉಮೇಶ್‌ಕುಮಾರ್ ಸಿಂಗ್, ಸಂಟೂನ್ ಸದಾಯ್, ಅಮಲೇಶ್ ಕುಮಾರ್ ಕಾಮತ್, ಉತ್ತರಪ್ರದೇಶದ ಲಖನ್ ಸಿಂಗ್ ಹಾಗೂ ತರುಣ್ ಕುಮಾರ್ ರಾಯ್ ಅವರಿಗೆ ತೀವ್ರತರವಾದ ಸುಟ್ಟ ಗಾಯಗಳಾಗಿದ್ದವು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಐವರೂ ಚಿಕಿತ್ಸೆ ಫಲಕಾರಿಯಾಗದೆ ನೋವಿನಿಂದ ನರಳಿ ಕೊನೆಯುಸಿರೆಳೆದಿದ್ದರು.

ತನಿಖೆಗೂ ತಡೆ: ಘಟನೆ ಕುರಿತು ಬಿಡದಿ ಠಾಣೆ ಪೊಲೀಸರು ಗಾಯಾಳು ಸಂಟೂನ್ ಸದಾಯ್ ನೀಡಿದ್ದ ದೂರಿನ ಮೇರೆಗೆ ಐಎಸ್‌ಜಿಇಸಿ ಕಂಪನಿಯ ವ್ಯವಸ್ಥಾಪಕ (ಕಾರ್ಯಾಚರಣೆ) ಸುಧೀರ್ ಪಾಠಕ್, ಬರ್ಮನ್, ಮೇಲ್ವಿಚಾರಕ ಸಾಗರ್, ಬಾಯ್ಲರ್ ನಿರ್ವಹಣೆ ಮಾಡುವವರು ಹಾಗೂ ಇತರರ ವಿರುದ್ಧ ಬಿಎನ್‌ಎಸ್ 125 (ಎ), 125 (ಬಿ), 287, 289 ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದರು.

ಮಾರನೇಯ ದಿನವೇ ವ್ಯವಸ್ಥಾಪಕ ಪಾಠಕ್‌ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ಪೊಲೀಸರು ತನಿಖೆ ತೀವ್ರಗೊಳಿಸಲು ಮುಂದಾಗುತ್ತಿದ್ದಂತೆ, ಕೆಪಿಸಿಎಲ್ ಅಧಿಕಾರಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ಕೋರ್ಟ್ ತನಿಖೆಗೆ ತಡೆಯಾಜ್ಞೆ ನೀಡಿತ್ತು. ಅಂದಿನಿಂದ ಇಲ್ಲಿಯವರೆಗೆ ಪೊಲೀಸ್ ತನಿಖೆಗೂ ಗ್ರಹಣ ಹಿಡಿದಿದೆ.

ಸ್ಥಾವರದ ಕಾರ್ಯಾಚರಣೆ ಕುರಿತು ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ಯು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಸಂದೇಶಕ್ಕೂ ಪ್ರತಿಕ್ರಿಯಿಸಲಿಲ್ಲ.

ಸ್ಥಳಕ್ಕೆ ಭೇಟಿ ನೀಡಿದ್ದ ಜಾರ್ಜ್

ಘಟನೆ ನಡೆದ ಮೂರು ದಿನಗಳ ಬಳಿಕ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಸ್ಥಾವರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಸಚಿವರು ‘ಘಟನೆಗೆ ತಾಂತ್ರಿಕ ದೋಷವಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹಾಗಾಗಿ ತನಿಖೆಗೆ ತಜ್ಞರ ತಂಡ ರಚಿಸಲಾಗುವುದು. ವರದಿ ಬಂದ ಬಳಿಕ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದರು.

ಅದಾದ ಬಳಿಕ ಸ್ಥಾವರದ ಮುಖ್ಯ ಎಂಜಿನಿಯರ್ ಸೂರ್ಯಕಾಂತ್ ಆರ್. ಕಬಾಡೆ ಮತ್ತು ಅಧೀಕ್ಷಕ ಎಂಜಿನಿಯರ್ ಎ.ಆರ್. ಅನಿತಾ ಅವರನ್ನು ಕೆಪಿಸಿಎಲ್ ವರ್ಗಾವಣೆ ಮಾಡಿತ್ತು. ಆದರೆ ದುರ್ಘಟನೆಗೆ ಸಂಬಂಧಿಸಿದಂತೆ ತಜ್ಞರ ಸಮಿತಿ ಏನೆಂದು ವರದಿ ನೀಡಿತ್ತು ಎಂಬುದು ಇಂದಿಗೂ ನಿಗೂಢವಾಗಿದೆ.

‘ನಿತ್ಯ 10 ಮೆ.ವಾ. ವಿದ್ಯುತ್ ಉತ್ಪಾದನೆ’

‘ಏಪ್ರಿಲ್‌ನಿಂದ ಮತ್ತೆ ಕಾರ್ಯಾರಂಭಿಸಿರುವ ಸ್ಥಾವರದಲ್ಲಿ ನಿತ್ಯ 10 ಮೆ.ವಾ. ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದುವರೆಗೆ 23.7359 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ. ಬಿಬಿಎಂಪಿಯಿಂದ ಇದುವರೆಗೆ 76850 ಮೆಟ್ರಿಕ್ ಟನ್ ತ್ಯಾಜ್ಯ ಸ್ಥಾವರಕ್ಕೆ ಬಂದಿದೆ. ಹಿಂದೆ ದಿನಕ್ಕೆ ಸುಮಾರು 400 ಮೆಟ್ರಿಕ್ ಟನ್ ಬರುತ್ತಿದ್ದ ತ್ಯಾಜ್ಯ ಕಳೆದ 15 ದಿನಗಳಿಂದ 500 ಟನ್‌ಗೆ ಏರಿಕೆಯಾಗಿದೆ. ಹೀಗಾಗಿ ದಿನಕ್ಕೆ 9–10 ಮೆಗಾವಾಟ್‌ನಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ’ ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.

ಬಾಯ್ಲರ್ ಇಲಾಖೆಯಿಂದ ಆರೋಪಟ್ಟಿ

ಘಟನೆಗೆ ಸಂಬಂಧಿಸಿದಂತೆ ಬಿಡದಿ ಠಾಣೆ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್ ಆಧರಿಸಿ ಕಾರ್ಖಾನೆಗಳು ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಹಾಗೂ ಸ್ವಾಸ್ಥ್ಯ ಇಲಾಖೆ ಸಹ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಘಟನೆಯ ತನಿಖೆ ಜೊತೆಗೆ ಸಂಬಂಧಪಟ್ಟವರ ವಿಚಾರಣೆ ನಡೆಸಿ 306 ಪುಟಗಳ ಆರೋಪಪಟ್ಟಿ ಸಿದ್ದಪಡಿಸಿ ರಾಮನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮಾರ್ಚ್‌ ತಿಂಗಳಲ್ಲಿ ಸಲ್ಲಿಸಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ದುರ್ಘಟನೆಯ ಹಿನ್ನೋಟ

ಜ. 4: ಸ್ಥಾವರದ ಚಿಮಣಿಯಲ್ಲಿ ಕಟ್ಟಿಕೊಂಡಿದ್ದ ತ್ಯಾಜ್ಯ ತೆಗೆಯಲು ಮುಂದಾದ ಐವರು ಕಾರ್ಮಿಕರ ಮೇಲೆ ಸಿಡಿದ ಬಿಸಿ ಬೂದಿ.

ಜ. 5: ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಐಎಸ್‌ಜಿಇಸಿ ಕಂಪನಿಯ ವ್ಯವಸ್ಥಾಪಕನ ಬಂಧನ

ಜ. 7: ಘಟನೆಯಲ್ಲಿ ಗಾಯಾಳು ಉಮೇಶ್‌ ಕುಮಾರ್ ಸಿಂಗ್ ಆಸ್ಪತ್ರೆಯಲ್ಲಿ ಸಾವು. ಸ್ಥಾವರಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್ ಭೇಟಿ. ಅಧಿಕಾರಿಗಳೊಂದಿಗೆ ಚರ್ಚೆ.

ಜ. 27: ಸ್ಥಾವರದ ಮುಖ್ಯ ಎಂಜಿನಿಯರ್ ಸೂರ್ಯಕಾಂತ್ ಆರ್. ಕಬಾಡೆ ಮತ್ತು ಅಧೀಕ್ಷಕ ಎಂಜಿನಿಯರ್ ಎ.ಆರ್. ಅನಿತಾ ವರ್ಗಾವಣೆ.

ಜ. 28: ಘಟನೆಯ ಐದನೇಯ ಗಾಯಾಳು ಹಾಗೂ ದೂರುದಾರ ಸಂಟೂನ್ ಸದಾಯ್ ಸಾವು.

ಅವಘಡ ಸಂಭವಿಸಿದ್ದ ಸ್ಥಳ (ಸಂಗ್ರಹ ಚಿತ್ರ)
ದುರ್ಘಟನೆ ಬಳಿಕ ಸ್ಥಾವರಕ್ಎಕ ಭೇಟಿ ನೀಡಿದ್ದ ಇಂಧನ ಸಚಿವ ಕೆ.ಜೆ. ಜಾರ್ಜ್. ಶಾಸಕ ಎಚ್‌.ಸಿ. ಬಾಲಕೃಷ್ಣ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹಾಗೂ ಇತರರು ಇದ್ದಾರೆ (ಸಂಗ್ರಹ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.