ADVERTISEMENT

ರಾಮನಗರ: ವಿದ್ಯುತ್ ಸ್ಥಾವರಕ್ಕೆ ಗ್ರಾ.ಪಂ. ತ್ಯಾಜ್ಯದ ಬಲ

ಬಿಡದಿಯ ತ್ಯಾಜ್ಯ ವಿದ್ಯುತ್ ಸ್ಥಾವರಕ್ಕೆ ಜಿಲ್ಲೆಯ 126 ಗ್ರಾ.ಪಂ.ಗಳಿಂದ ನಿತ್ಯ ಒಂದೂವರೆ ಟನ್ ತ್ಯಾಜ್ಯ

ಓದೇಶ ಸಕಲೇಶಪುರ
Published 22 ಜನವರಿ 2026, 4:11 IST
Last Updated 22 ಜನವರಿ 2026, 4:11 IST
ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸಂಗ್ರಹವಾದ ಒಣ ತ್ಯಾಜ್ಯವನ್ನು ಬಿಡದಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರಕ್ಕೆ ವಾಹನದಲ್ಲಿ ಕೊಂಡೊಯ್ಯಲಾಯಿತು
ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸಂಗ್ರಹವಾದ ಒಣ ತ್ಯಾಜ್ಯವನ್ನು ಬಿಡದಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರಕ್ಕೆ ವಾಹನದಲ್ಲಿ ಕೊಂಡೊಯ್ಯಲಾಯಿತು   

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಲ್ಲಿನ ಜಿಲ್ಲಾ ಪಂಚಾಯಿತಿ ಹೊಸ ಮಾರ್ಗ ಕಂಡುಕೊಂಡಿದೆ. ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸಂಗ್ರಹವಾಗುವ ಒಣ ತ್ಯಾಜ್ಯವನ್ನು ರಾಮನಗರ ತಾಲ್ಲೂಕಿನ ಬಿಡದಿಯ ಬಿಲ್ಲಕೆಂಪನಹಳ್ಳಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರಕ್ಕೆ ಕಳಿಸಿ ಕೊಡುತ್ತಿದೆ.

ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಸಂಗ್ರಹವಾಗುವ ಒಣ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಸಲುವಾಗಿ, ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್‌) ಹಾಗೂ ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾಕಾರ. ಹಿಂದಿನ ಬಿಬಿಎಂಪಿ) ಸಹಯೋಗದಲ್ಲಿ ಈ ಸ್ಥಾವರ ನಿರ್ಮಿಸಲಾಗಿದೆ.

ಒಪ್ಪಂದ: ನಿತ್ಯ ಬೆಂಗಳೂರಿನಿಂದ ಬರುವ ತ್ಯಾಜ್ಯದ ಜೊತೆಗೆ ಇದೀಗ ಸ್ಥಳೀಯ ತ್ಯಾಜ್ಯವನ್ನು ಸಹ ಬಳಸಿಕೊಂಡು ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈ ನಿಟ್ಟಿನಲ್ಲಿ 3 ತಿಂಗಳ ಹಿಂದೆ ಜಿಬಿಎ ಜೊತೆ ಒಪ್ಪಂದ ಮಾಡಿಕೊಂಡಿರುವ ಜಿ.ಪಂ. ನಿತ್ಯ ಒಂದೂವರೆ ಟನ್‌ನಷ್ಟು ಒಣ ಕಸವನ್ನು ಸ್ಥಾವರಕ್ಕೆ ಕಳಿಸಿ ಕೊಡುತ್ತಿದೆ. 

‘ಸ್ಥಾವರಕ್ಕೆ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಹಾರೋಹಳ್ಳಿ ಸೇರಿದಂತೆ ಐದೂ ತಾಲ್ಲೂಕುಗಳ ವ್ಯಾಪ್ತಿಯ ಒಟ್ಟು 126 ಗ್ರಾ.ಪಂ.ಗಳಿಂದ ತ್ಯಾಜ್ಯ ನೀಡಲಾಗುತ್ತಿದೆ. ಪ್ಲಾಸ್ಟಿಕ್ ಸೇರಿದಂತೆ ಸುಲಭವಾಗಿ ಉರಿಯಬಲ್ಲ ಒಣ ಕಸ ಹೊತ್ತ ಲಾರಿ ಸ್ಥಾವರಕ್ಕೆ ನಿತ್ಯ ಕಸ ತಂದು ಹಾಕುತ್ತಿವೆ’ ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಉಸ್ತುವಾರಿ ನೇಮಕ: ‘ಸ್ಥಾವರಕ್ಕೆ ಒಣ ಕಸವನ್ನು ಸಾಗಿಸಲು ಜಿಲ್ಲಾ ಪಂಚಾಯಿತಿಯಿಂದ ಪ್ರತ್ಯೇಕ ಲಾರಿ, ಚಾಲಕ ಹಾಗೂ ಸಹಾಯಕನನ್ನು ನೇಮಿಸಲಾಗಿದೆ. ಜಿ.ಪಂ. ಜಿಲ್ಲಾ ಸಂಯೋಜಕರಿಗೆ ಇದರ ಉಸ್ತುವಾರಿ ನೀಡಲಾಗಿದೆ. ತ್ಯಾಜ್ಯವನ್ನು ಲಾರಿಗೆ ತುಂಬಿಸುವುದರಿಂದ ಹಿಡಿದು ಸ್ಥಾವರದಲ್ಲಿ ವಿಲೇವಾರಿ ಮಾಡುವವರೆಗೆ ಸಂಯೋಜಕರು ನಿಗಾ ಇಡುತ್ತಾರೆ’ ಎಂದು ಹೇಳಿದರು.

‘ಗ್ರಾ.ಪಂ.ಗಳ ಮಟ್ಟದಲ್ಲಿ ನಿತ್ಯ ಸಂಗ್ರಹವಾಗುವ ಕಸವನ್ನು ಪಂಚಾಯಿತಿಗಳ ಕ್ಲಸ್ಟರ್ ಮತ್ತು ತಾತ್ಕಾಲಿಕ ಘಟಕಗಳಲ್ಲಿ ವಿಂಗಡಿಸಿ, ಪ್ಲಾಸ್ಟಿಕ್ ಸೇರಿದಂತೆ ಉರಿಯಬಲ್ಲ ಒಣ ಕಸವನ್ನು ಚೀಲಗಳಲ್ಲಿ ಸಂಗ್ರಹಿಸಿ ಇಡಲಾಗುತ್ತಿದೆ. ಈ ರೀತಿ ಸಂಗ್ರಹವಾದ ಕಸವನ್ನು ಲಾರಿಯಲ್ಲಿ ಸ್ಥಾವರಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ವಿದ್ಯುತ್ ಸ್ಥಾವರ ತಲುಪಿದ ಗ್ರಾ.ಪಂ.ಗಳ ಮಟ್ಟದಲ್ಲಿ ಸಂಗ್ರಹವಾದ ಒಣ ತ್ಯಾಜ್ಯ ಪರಿಶೀಲಿಸಿದ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ
ರಾಮನಗರ ತಾಲ್ಲೂಕಿನ ಬಿಡದಿಯ ಬಿಲ್ಲಕೆಂಪನಹಳ್ಳಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರ

ಎಲ್ಲಿಂದ ಎಷ್ಟು ತ್ಯಾಜ್ಯ? (ಟನ್‌ಗಳಲ್ಲಿ)

ತಾಲ್ಲೂಕು;ತ್ಯಾಜ್ಯ

ರಾಮನಗರ;34

ಚನ್ನಪಟ್ಟಣ;51

ಮಾಗಡಿ;11

ಕನಕಪುರ;15

ಒಟ್ಟು;111

ಗ್ರಾ.ಪಂ.ಗಳ ಮಟ್ಟದಲ್ಲಿ ಸಂಗ್ರಹವಾಗುವ ಒಣ ತ್ಯಾಜ್ಯವನ್ನು ವಿದ್ಯುತ್ ಉತ್ಪಾದಿಸುವ ಸ್ಥಾವರಕ್ಕೆ ನೀಡಲು ಜಿಬಿಎ ಜೊತೆ ಜಿ.ಪಂ. ಒಪ್ಪಂದ ಮಾಡಿಕೊಂಡಿದೆ. ಇದುವರೆಗೆ 111 ಟನ್ ತ್ಯಾಜ್ಯ ಕಳಿಸಲಾಗಿದೆ
ಅನ್ಮೋಲ್ ಜೈನ್ ಸಿಇಒ ಜಿಲ್ಲಾ ಪಂಚಾಯಿತಿ ಬೆಂಗಳೂರು ದಕ್ಷಿಣ ಜಿಲ್ಲೆ

ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಮುಕ್ತಿ

‘ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ಜಿಲ್ಲಾ ಪಂಚಾಯಿತಿ ವ್ಯಾಪಕ ಜಾಗೃತಿ ಮೂಡಿಸುತ್ತಿದೆ. ಪ್ಲಾಸ್ಟಿಕ್ ಅನ್ನು ನಿರ್ದಿಷ್ಟ ಸ್ಥಳದಲ್ಲಿ ವಿಲೇವಾರಿ ಮಾಡಿದರೂ ಅದು ಸುತ್ತಮುತ್ತ ಹರಡುತ್ತಿತ್ತು. ಇದೀಗ ಪ್ಲಾಸ್ಟಿಕ್ ಸೇರಿದಂತೆ ಉರಿಯಬಲ್ಲ ಒಣ ತಾಜ್ಯ ವಿದ್ಯುತ್ ಸ್ಥಾವರಕ್ಕೆ ಹೋಗುವುದರಿಂದ ಮುಖ್ಯವಾಗಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಜಿಲ್ಲೆಯಲ್ಲಿ ಮುಕ್ತಿ ಸಿಕ್ಕಂತಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಅನ್ಮೋಲ್ ಜೈನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.