
ಓದೇಶ ಸಕಲೇಶಪುರ
ಬಿಡದಿ (ರಾಮನಗರ): ಪಟ್ಟಣದ ರಮ್ಯ ಮನೋಹರ ತಾಣವಾದ ನಲ್ಲಿಗುಡ್ಡೆ ಕೆರೆಯಲ್ಲೀಗ ಜಲಕ್ರೀಡೆಗಳ ಕಲರವ ಕೇಳಿ ಬರುತ್ತಿದೆ. ದೊಡ್ಡ ನಗರಗಳಿಗೊ ಅಥವಾ ಮನರಂಜನಾ ಪಾರ್ಕ್‌ಗಳಿಗೆ ಮಾತ್ರ ಸೀಮಿತವಾಗಿದ್ದ ಜಲಕ್ರೀಡೆಗಳನ್ನು ವಾರದ ಹಿಂದೆ ಕೆರೆಯಲ್ಲೂ ಆರಂಭವಾದ ಬೆನ್ನಲ್ಲೇ, ಪ್ರವಾಸಿಗರು ಕೆರೆಯತ್ತ ಚಿತ್ತ ಹರಿಸಿದ್ದಾರೆ.
ಕೆರೆಯಲ್ಲಿ ಬೋಟಿಂಗ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಡುತ್ತಾ ಉಲ್ಲಾಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಬಿಡದಿ ಎಂದರೆ ಕೇವಲ ಕೈಗಾರಿಕಾ ಪ್ರದೇಶವಷ್ಟೇ ಎಂಬ ಜನಪ್ರಿಯತೆ ಜೊತೆಗೆ ಇದೀಗ, ಜಲಕ್ರೀಡೆಗಳ ತಾಣ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ರಾಜಧಾನಿ ಸಮೀಪವೆ ಇರುವ ಕೆರೆಗೆ ಬೆಂಗಳೂರಿನಿಂದಲೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಜನಪ್ರಿಯವಾಗುತ್ತಿದೆ ಜಲಕ್ರೀಡೆ: ಕಾವೇರಿ, ಅರ್ಕಾವತಿ, ವೃಷಭಾವತಿ, ಕಣ್ವ ನದಿಗಳ ಹರಿಯುವ ಜಿಲ್ಲೆಯು ಕೆರೆಗಳ ಆಗರವೂ ಹೌದು. ಇಲ್ಲಿರುವ ಒಂದೊಂದು ಕೆರೆಗಳು ಕನಿಷ್ಠ ನೂರು ಎಕರೆಗೂ ದೊಡ್ಡದಾಗಿವೆ. ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ಸಿಗುತ್ತಿದೆ.
ಅದರ ಭಾಗವಾಗಿ, ಪ್ರವಾಸೋದ್ಯಮ ಇಲಾಖೆ ಈಗಾಗಲೇ ರಾಮನಗರ ಹೊರವಲಯದಲ್ಲಿರುವ ರಂಗರಾಯರದೊಡ್ಡಿ ಕೆರೆ ಹಾಗೂ ಚ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯದಲ್ಲಿ ಜಲಕ್ರೀಡೆಗಳನ್ನು ಆರಂಭಿಸಿದೆ. ಅದರ ಬೆನ್ನಲ್ಲೇ, ಇಲ್ಲಿಗೆ ಪ್ರವಾಸಿಗರ ಭೇಟಿಯೂ ಹೆಚ್ಚಾಗಿದೆ.
ವಾರದ ಹಿಂದೆ ಚಾಲನೆ: ಮೀನುಗಾರಿಕೆ, ವಾಯುವಿಹಾರಕ್ಕೆ ಮಾತ್ರ ಸೀಮಿತವಾಗಿದ್ದ ಸುಮಾರು 380 ಹೆಕ್ಟೇರ್ ಪ್ರದೇಶದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ನಲ್ಲಿಗುಡ್ಡೆ ಕೆರೆಯಲ್ಲಿ ಫೆ. 18ರಂದು ಜಲಕ್ರೀಡೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಸ್ಥಳೀಯ ಶಾಸಕ ಎಚ್.ಸಿ. ಬಾಲಕೃಷ್ಣ ಚಾಲನೆ ನೀಡಿದ್ದಾರೆ.
ಸದ್ಯ ಕೆರೆಯಲ್ಲಿ ಕಯಾಕಿಂಗ್, ಸ್ಪೀಡ್ ಬೋಟ್, ಜೇಟ್ ಸ್ಕೀ(ವಾಟರ್ ಬೈಕ್), ಪೆಡಲ್ ಬೋಟ್, ಬನಾನಾ ಬೋಟ್‌ನಂತಹ ಕ್ರೀಡೆಗಳನ್ನು ಆರಂಭಿಸಲಾಗಿದೆ. ಖಾಸಗಿಯವರು ಜಲಕ್ರೀಡೆಗಳ ಟೆಂಡರ್ ಪಡೆದು ನಡೆಸುತ್ತಿದ್ದಾರೆ. ಕಳೆದ ಐದು ದಿನಗಳಿಂದ ಪ್ರವಾಸಿಗರು ಕೆರೆಗೆ ಭೇಟಿ ನೀಡಿ ಜಲಕ್ರೀಡೆಗಳನ್ನು ಆನಂದಿಸುತ್ತಿದ್ದಾರೆ. ಪ್ರವಾಸಿಗರಲ್ಲಿ ಯುವಜನರ ಜೊತೆಗೆ ಮಕ್ಕಳೊಂದಿಗೆ ಬರುತ್ತಿರುವ ಪೋಷಕರೇ ಹೆಚ್ಚಾಗಿದ್ದಾರೆ.
ಕೆರೆಯು 216.45 ದಶಲಕ್ಷ ಘನ ಅಡಿಗಳಷ್ಟು(ಎಂಸಿಎಫ್‍ಸಿ) ಪ್ರಮಾಣದ ನೀರು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಕೆರೆ ಸುತ್ತಲಿನ ಪ್ರದೇಶದ ಮಳೆ ನೀರು ಸ್ವಾಭಾವಿಕವಾಗಿ ಹಳ್ಳ-ಕೊಳ್ಳಗಳ ಮೂಲಕ ನಲ್ಲಿಗುಡ್ಡ ಕೆರೆಗೆ ಹರಿದು ಬರುತ್ತದೆ. ಕೆರೆಗೆ 25 ಅಡಿ ಎತ್ತರದ ಏರಿ ನಿರ್ಮಿಸಲಾಗಿದೆ. ಎರಡ್ಮೂರು ವರ್ಷಗಳಿಂದ ಉತ್ತಮ ಮಳೆಯಾಗಿರುವ ಕಾರಣ ಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದು ಜಲಕ್ರೀಡೆಗಳ ಆರಂಭಕ್ಕೆ ಕಾರಣವಾಗಿದೆ.
ನಿರಂತರ ಪ್ರಯತ್ನ: ನಲ್ಲಿಗುಡ್ಡೆಕೆರೆಯನ್ನು ಪ್ರವಾಸಿ ತಾಣವಾಗಿ ಮಾಡುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಿವೆ. ಕೆರೆ ಬಳಿ ಉದ್ಯಾನವನ ನಿರ್ಮಿಸಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡುವ ಕುರಿತು ಶಾಸಕ ಬಾಲಕೃಷ್ಣ ಅವರು ಪ್ರಸ್ತಾಪಿಸುತ್ತಲೇ ಬಂದಿದ್ದರು. ಇದೀಗ, ಅವರ ಮಾತು ನಿಜವಾಗಿದೆ.
ಬಿಡದಿ ಪಟ್ಟಣದ ಮುಖ್ಯರಸ್ತೆಯಿಂದ ಕೆರೆ ಪ್ರದೇಶಕ್ಕೆ ನೇರ ರಸ್ತೆ ಸಂಪರ್ಕವಿದೆ. ಜೊತೆಗೆ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದಲೂ ಕೆರೆಗೆ ಸುಲಭ ಸಂಪರ್ಕವಿದೆ. ಬಿಡದಿಯ ಲಕ್ಷ್ಮೀಸಾಗರ ಗೇಟ್ ಮತ್ತು ದಾಸಪ್ಪನದೊಡ್ಡಿ ಬಳಿ ಇರುವ ಹೆದ್ದಾರಿಯ ಪ್ರವೇಶ ಮತ್ತು ನಿರ್ಗಮನದಲ್ಲಿ ಸರ್ವೀಸ್ ರಸ್ತೆ ಬಂದರೆ ನೇರವಾಗಿ ನಲ್ಲಿಗುಡ್ಡ ಕೆರೆಗೆ ಹೋಗಬಹುದಾಗಿದೆ. ಅದೇ ಕಾರಣಕ್ಕೆ ಕೆರೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚು.
ವಿಶಾಲವಾಗಿರುವ ಕೆರೆಯ ನೋಟ ವಿಹಂಗಮವಾಗಿದೆ. ಕೆರೆ ಏರಿ ಮೇಲೆ ಬೆಳಿಗ್ಗೆ ಸೂರ್ಯೋದಯ ಮತ್ತು ಸಂಜೆ ಸೂರ್ಯಾಸ್ತದ ಸಂದರ್ಭದಲ್ಲಿ ಕೆರೆಯನ್ನು ಕಣ್ತುಂಬಿಕೊಳ್ಳುವುದು ಕಣ್ಣಿಗೆ ಹಬ್ಬವೆನಿಸುತ್ತದೆ. ಏರಿಕ ಕೆಳಗಿರುವ ಸಾಲುಮರಗಳ ಹಾದಿಯು ಫೋಟೊಶೂಟ್‌ಗೆ ಹೇಳಿ ಮಾಡಿಸಿದಂತಿದೆ.
ನಲ್ಲಿಗುಡ್ಡೆ ಕೆರೆಯಲ್ಲಿ ಜಲಕ್ರೀಡೆಗಳನ್ನು ಆರಂಭಿಸಬೇಕೆಂಬ ಕನಸು ಕಡೆಗೂ ನನಸಾಗಿದೆ. ಮುಂದೆ ಕೆರೆಯ ಬಳಿ ನಡಿಗೆ ಪಥ ಸೇರಿದಂತೆ ಹೈಟೆಕ್ ಪಾರ್ಕ್ ನಿರ್ಮಾಣ ಮಾಡಿ ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು
– ಎಚ್.ಸಿ. ಬಾಲಕೃಷ್ಣ ಶಾಸಕ ಮಾಗಡಿ
ನಲ್ಲಿಗುಡ್ಡೆ ಕೆರೆ ಸೇರಿ ಜಿಲ್ಲೆಯಲ್ಲಿ ಮೂರು ಕಡೆ ಜಲಕ್ರೀಡೆಗಳನ್ನು ಆರಂಭಿಸಲಾಗಿದ್ದು ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮುಂದೆ ಹಾರೋಹಳ್ಳಿಯ ರಾವುತ್ತನಹಳ್ಳಿ ಕೆರೆ ಮತ್ತು ಮಾಗಡಿಯ ವೈ.ಜಿ. ಗುಡ್ಡ ಕೆರೆಯಲ್ಲೂ ಆರಂಭಿಸಲಾಗುವುದು
– ಎಚ್.ಡಿ. ರವಿಕುಮಾರ್ ಸಹಾಯಕ ನಿರ್ದೇಶಕ ಪ್ರವಾಸೋದ್ಯ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆ
ಪ್ರವಾಸಿ ತಾಣವಾಗುವತ್ತ ಕೆರೆಗಳು
‘ಜಲಕ್ರೀಡೆಗಳಿಗಾಗಿ ಸಮುದ್ರ ತೀರವಿರುವ ನಗರಗಳಿಗೆ ಹೋಗುವ ಕಾಲವಿತ್ತು. ಇಲ್ಲದಿದ್ದರೆ ದೊಡ್ಡ ನಗರಗಳಲ್ಲಿರುವ ಕೆರೆಗಳಲ್ಲಿ ಅಥವಾ ಪ್ರಮುಖ ನದಿಗಳ ಜಲಾಶಯಗಳಲ್ಲಿ ಮಾತ್ರವೇ ಜಲಕ್ರೀಡೆಗಳಿಗೆ ಅವಕಾವಿತ್ತು. ಇದೀಗ ದೊಡ್ಡ ಕೆರೆಗಳಲ್ಲೂ ಜಲಕ್ರೀಡೆಗಳನ್ನು ಆರಂಭಿಸುವ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುತ್ತಿದೆ. ಅದಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕೆರೆಗಳಲ್ಲಿ ಜಲಕ್ರೀಡೆಗಳನ್ನು ಶುರು ಮಾಡಿರುವುದೇ ಸಾಕ್ಷಿ. ಇದರೊಂದಿಗೆ ಕೆರೆಗಳು ಪ್ರವಾಸಿ ತಾಣಗಳಾಗಿ ಜನರನ್ನು ಕೈ ಬೀಸಿ ಕರೆಯುತ್ತಿವೆ. ಬೇರೆ ಕಡೆಗೆ ಹೋಲಿಸಿದರೆ ಇಲ್ಲಿರುವ ಶುಲ್ಕ ಪ್ರವಾಸಿಗರಿಗೆ ಕೈಗೆಟುಕುವಂತಿದೆ. ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಡಿ. ರವಿಕುಮಾರ್ ‘ಪ್ರಜಾವಾಣಿ’ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.